ರಾಜ್ಯಾಧ್ಯಕ್ಷರ ಪದಚ್ಯುತಿಗೆ ಪಟ್ಟು, ಅತೃಪ್ತ ನಾಯಕರ ದಂಡು ದೆಹಲಿಯಲ್ಲಿ ಸಮರಕ್ಕೆ ಸಜ್ಜು.
ರಾಜ್ಯ ಬಿಜೆಪಿಯಲ್ಲಿ ಕಳೆದ ಕೆಲವು ದಿನಗಳಿಂದ ಮೌನವಾಗಿದ್ದ ನಾಯಕತ್ವದ ವಿಷಯ ಇದೀಗ ಸ್ಫೋಟಗೊಂಡಿದೆ. ರಾಜ್ಯದಿಂದ ರಾಷ್ಟ್ರ ರಾಜಧಾನಿಗೆ ತಲುಪಿರುವ ಭಿನ್ನಮತದ ದಳ್ಳುರಿ, ರಾಜ್ಯಾಧ್ಯಕ್ಷರ ಪದಚ್ಯುತಿಗೆ ಪಟ್ಟು ಹಿಡಿದಿರುವ ಅತೃಪ್ತ ನಾಯಕರ ದಂಡು, ದೆಹಲಿಯಲ್ಲಿ ಸಮರಕ್ಕೆ ಸಜ್ಜಾಗಿದೆ. ಸಂಸತ್ ಅಧಿವೇಶನದ ನೆಪದಲ್ಲಿ ದೆಹಲಿಗೆ ದೌಡಾಯಿಸಿರುವ ರಾಜ್ಯ ಬಿಜೆಪಿಯ ಪ್ರಭಾವಿ ಬಂಡಾಯ ನಾಯಕರು, ದೆಹಲಿಯಲ್ಲಿರುವ ಕರ್ನಾಟಕ ಭವನವನ್ನೇ ತಮ್ಮ ತಂತ್ರಗಾರಿಕೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.
ಸಾಹುಕಾರ್ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದ ಮಹತ್ವದ ರಹಸ್ಯ ಸಭೆಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಸಭೆಯಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ, ಮುಖಂಡರಾದ ಬಿ.ವಿ. ನಾಯಕ್, ಬಿ.ಎಸ್. ಯಡಿಯೂರಪ್ಪ ಅವರ ಮಾಜಿ ಆಪ್ತ ಎನ್.ಆರ್. ಸಂತೋಷ್ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಪಕ್ಷದಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ, ನಿಷ್ಠಾವಂತ ಹಿರಿಯ ಕಾರ್ಯಕರ್ತರು ಮತ್ತು ನಾಯಕರನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಪಟ್ಟಿಯನ್ನು ಇವರು ಸಿದ್ಧಪಡಿಸಿದ್ದಾರೆ. ರಾಜ್ಯಾಧ್ಯಕ್ಷರ ಏಕಪಕ್ಷೀಯ ನಿರ್ಧಾರಗಳಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ವಾದಿಸುತ್ತಿರುವ ಈ ತಂಡ, ರಾಜ್ಯ ನಾಯಕತ್ವದಲ್ಲಿ ಸರ್ಜರಿ ಆಗಲೇಬೇಕು ಎಂದು ಪಟ್ಟು ಹಿಡಿದಿದೆ. ತಮ್ಮ ದೂರುಗಳನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ, ಲಿಖಿತ ರೂಪದಲ್ಲಿ ಹೈಕಮಾಂಡ್ ಗಮನಕ್ಕೆ ತರಲು ಬಿಜೆಪಿಯ ಅತೃಪ್ತ ಟೀಂ ಸಜ್ಜಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯವರ ಭೇಟಿಗೆ ಸಮಯ ಕೋರಿದ್ದಾರೆ. ಪಕ್ಷದ ವರಿಷ್ಠರನ್ನು ನೇರವಾಗಿ ಭೇಟಿಯಾಗಿ, ರಾಜ್ಯದ ವಾಸ್ತವ ಸ್ಥಿತಿಯನ್ನು ವಿವರಿಸುವ ಮೂಲಕ ವಿಜಯೇಂದ್ರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುವುದು ಇವರ ಬೇಡಿಕೆಯಾಗಿದೆ.
ಯಡಿಯೂರಪ್ಪ ಕುಟುಂಬದ ವಿರುದ್ಧ ನಿರಂತರವಾಗಿ ಗುಡುಗುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅನಿವಾರ್ಯ ಕಾರಣಗಳಿಂದ ದೆಹಲಿ ಪ್ರವಾಸದಲ್ಲಿಲ್ಲ. ಆದರೂ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯ ಸೂತ್ರಧಾರನಂತೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅತೃಪ್ತರ ಗುಂಪಿಗೆ ನೈತಿಕ ಬೆಂಬಲ ಮತ್ತು ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಜಾರಕಿಹೊಳಿ ನೇತೃತ್ವದ ನಿಯೋಗದ ಒತ್ತಡಕ್ಕೆ ಮಣಿದು ನಾಯಕತ್ವ ಬದಲಾವಣೆಗೆ ವರಿಷ್ಠರು ಮುಂದಾಗುತ್ತಾರೆಯೇ ಅಥವಾ ಬಂಡಾಯಗಾರರಿಗೆ ಖಡಕ್ ಎಚ್ಚರಿಕೆ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
