ಸರ್ಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು. ಬಂಟ್ವಾಳ ಸಮೀಪದ ವಗ್ಗ ಬಳಿ ಘಟನೆ.

ಕರಾವಳಿ

ಬಂಟ್ವಾಳ-ಗುರುವಾಯನಕೆರೆ ರಸ್ತೆಯ ವಗ್ಗ ಸಮೀಪ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ರಾಜೇಂದ್ರಪೂಜಾರಿ (45) ಮೃತ ಬೈಕ್ ಸವಾರ. ಬಂಟ್ವಾಳದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ರಾಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.