ವಿಟ್ಲದಲ್ಲಿ ಮತ್ತೆ ಮನೆ ಕಳ್ಳರು ಆಕ್ಟಿವ್. ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ.

ಕರಾವಳಿ

ವಿಟ್ಲ : ಕೆಲದಿನಗಳಿಂದ ತೆಪ್ಪಗಾಗಿದ್ದ ಮನೆಕಳ್ಳರು ವಿಟ್ಲ ಪರಿಸರದಲ್ಲಿ ಮತ್ತೆ ಆಕ್ಟಿವ್ ಆಗಿದ್ದು ಉರಿಮಜಲು ಬಳಿ ಹಾಡಹಗಲೇ ಕಳ್ಳತನ ನಡೆದಿದೆ. ವಿಟ್ಲ-ಪುತ್ತೂರು ರಸ್ತೆಯ ಉರಿಮಜಲು ಸಮೀಪದ ದೇವಸ್ಯ ಮುಖ್ಯರಸ್ತೆ ಬದಿಯ ಗಣೇಶ್ ಗೌಡರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಯವರೆಲ್ಲ ಹೊರಗಡೆ ಹೋಗಿದ್ದಾಗ ಮಧ್ಯಾಹ್ನದ ಸಮಯ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಳ್ಳತನ ನಡೆಸಿದ್ದಾರೆ. ಕಪಾಟಿನ ಬಾಗಿಲು ಮುರಿದು ಒಳಗಡೆ ಇಟ್ಟಿದ್ದ ಏಳೂವರೆ ಪವನ್ ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ. ಮನೆಯವರು ಮರಳಿ ಬಂದಾಗ ಕಳ್ಳರ ಕೃತ್ಯ ಕಂಡು ಬಂದಿದೆ. ತಕ್ಷಣವೇ ಮಾಹಿತಿ ಪಡೆದ ವಿಟ್ಲ ಠಾಣಾ ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.

ಕೆಲದಿನಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆ ಮಜಲು, ಕೊಳ್ನಾಡು ಗ್ರಾಮದ ಕುಂಟುಕುಡೇಲು, ಮಂಕುಡೆ, ಕಾಡುಮಠದಲ್ಲಿ ಹಾಡಹಗಲೇ ಕಳ್ಳತನ ನಡೆದಿತ್ತು. ಆದರೆ ದುಷ್ಕೃತ್ಯ ನಡೆದ ಕೆಲ ದಿನಗಳಲ್ಲೇ ಕೇರಳದ ಮೀಯಪದವು ನಿವಾಸಿ ಸೂರಜ್ ಎಂಬಾತನ ಬಂಧಿಸಿ ಕಳ್ಳತನ ಪ್ರಕರಣ ಭೇದಿಸಿ ಆರೋಪಿಯನ್ನು ಜೈಲಿಗಟ್ಟಿದ್ದರು. ಇದೀಗ ಮತ್ತೆ ಉರಿಮಜಲುನಲ್ಲಿ ಹಾಡುಹಗಲೇ ಕಳ್ಳತನ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಮನೆಯಿಂದ ಹೊರಗಡೆ ಹೋಗುವ ಸಂದರ್ಭ ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಟ್ಟು ಹೋಗಬೇಡಿ ಎಂದು ಪೊಲೀಸ್ ಇಲಾಖೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಅದ್ಯಾಕೋ ಜನ ಎಚ್ಚೆತ್ತುಕೊಳ್ಳದ ಕಾರಣ ಮತ್ತೆ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.