ವಿಟ್ಲ : ಅಪ್ರಾಪ್ತ ದಲಿತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಬಂಧಿಸಬೇಕು ಹಾಗೂ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಂತ್ರಸ್ತಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ವಿಟ್ಲದಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಆಕ್ರೋಶ ಮೆರವಣಿಗೆ ನಡೆಯಿತು.
ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ನಾಡ ಕಛೇರಿ ಬಳಿ ಸಾರ್ವಜನಿಕ ಸಭೆ ನಡೆಸಿದರು.
ದಲಿತ ಹಕ್ಕುಗಳ ರಾಜ್ಯ ಸಮಿತಿ ಮುಖಂಡರಾದ ಈಶ್ವರಿ ಪದ್ಮುಂಜ ಮಾತನಾಡುತ್ತಾ ದಲಿತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಮಹೇಶ್ ಭಟ್ಟನ ಬಂಧಿಸಲು ವಿಟ್ಲ ಪೊಲೀಸರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಆರೋಪಿ ಮಹೇಶ್ ಭಟ್ಟ ಗರ್ಭಪಾತ ಮಾಡಿಸಿ ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದರೂ ವಿಟ್ಲ ಪೊಲೀಸರು ಕೇವಲ ಬಾಲಕಿಯನ್ನು ಗುಡ್ಡಕ್ಕೆ ಕರೆದಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಬೇಕಾಗಿದ್ದ ಪೊಲೀಸರು ಆರೋಪಿ ಕೈಯಿಂದ ಹಣ ಪಡೆದು ಆತನಿಗೆ ನಿರೀಕ್ಷಣಾ ಜಾಮೀನು ಸಿಗುವ ತನಕ ಪರಾರಿಯಾಗಲು ಕಾರಣರಾಗಿದ್ದಾರೆಂದು ನೇರವಾಗಿ ಆರೋಪಿಸಿದರು.

ದಲಿತರ ಮನೆಯೊಳಗೆ ಬರಲು ಬಿಡದ ಬ್ರಾಹ್ಮಣ ಜಾತಿಯ ಮಹೇಶ್ ಭಟ್ಟ ತನ್ನ ಕಾಮತೀಟೆಗಾಗಿ ದಲಿತ ಬಾಲಕಿಯನ್ನು ಬಳಸಿಕೊಂಡಿದ್ದಾನೆ. ವಿಟ್ಲ ಪೊಲೀಸರು ಆರೋಪಿ ಪರ ಏಜೆಂಟ್ ಕೆಲಸ ಮಾಡುವ ಮೂಲಕ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ಎರಡು ದಿನದೊಳಗೆ ಮಹೇಶ್ ಭಟ್ಟನನ್ನು ಬಂಧಿಸಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ ಮರು ಹೇಳಿಕೆ ದಾಖಲು ಮಾಡದಿದ್ದರೆ ಎಸ್ಪಿ ಕಛೇರಿ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸುವುದಾಗಿ ಈಶ್ವರಿ ಪದ್ಮುಂಜ ಎಚ್ಚರಿಕೆ ನೀಡಿದರು.
ರೈತ ಸಂಘದ ಮುಖಂಡ ಯಾದವ ಶೆಟ್ಟಿಯವರು ಮಾತನಾಡುತ್ತಾ, ಬಡ ಕುಟುಂಬದ ದಲಿತ ಬಾಲಕಿಯ ಜೀವನವನ್ನೇ ಧ್ವಂಸ ಮಾಡಿದ ಆರೋಪಿ ಭೂಮಾಲಿಕ ಮಹೇಶ್ ಭಟ್ಟನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗಿದ್ದಾರೆ. ಆತನ ಹಣದ ಮುಂದೆ ವಿಟ್ಲ ಪೊಲೀಸರು ಖಾಕಿ ಸಮವಸ್ತ್ರದ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದರು. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಬಿಜೆಪಿ, ಹಿಂದೂ ಸಂಘಟನೆಯ ಮುಖಂಡರು ದಲಿತ ಬಾಲಕಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸುಮ್ಮನಿದ್ದಾರೆ. ಇದೆ ಸಮಯ ಮಹೇಶ್ ಭಟ್ಟನ ಬದಲು ಆರೋಪಿ ಮುಸ್ಲಿಂ ಯುವಕನಾಗಿದ್ದರೆ ಹಿಂದೂ ಮುಖಂಡರು, ಬಿಜೆಪಿ ಮುಖಂಡರು ಹೋರಾಟಕ್ಕೆ ಬರುತ್ತಿದ್ದರು. ಹಿಂದೂಗಳ ಮೇಲೆ ಹಿಂದೂಗಳು ಏನು ಬೇಕಾದರೂ ಮಾಡಬಹುದು ಎಂಬ ಕಾನೂನು ರೂಪಿಸಿದ್ದಾರೆಯೇ ಎಂದು ಯಾದವ್ ಶೆಟ್ಟಿ ಪ್ರಶ್ನಿಸಿದರು.

ಮೆರವಣಿಗೆ ಆರಂಭದಿಂದ ಸಭೆ ಮುಕ್ತಾಯ ಆಗುವ ತನಕವೂ ಆರೋಪಿಗೆ ಧಿಕ್ಕಾರ, ವಿಟ್ಲ ಪೊಲೀಸರಿಗೆ ಧಿಕ್ಕಾರ ಕೂಗುತ್ತಾ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಡಿವೈಎಫ್ಐ ಮುಖಂಡ ಸಂತೋಷ್ ಕುಮಾರ್ ಬಜಾಲ್ ಮಾತನಾಡುತ್ತಾ ದಲಿತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ವಿಕೃತ ಕಾಮುಕ ಮಹೇಶ್ ಭಟ್ಟನ ತಕ್ಷಣ ಬಂಧಿಸಿ, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು. ಆರೋಪಿಯ ಬಂಧಿಸಲು ಅಸಾಧ್ಯವಾದರೆ ವಿಟ್ಲ ಪೊಲೀಸರು ಖಾಕಿ ಸಮವಸ್ತ್ರ ಕಳಚಿ ಭೂಮಾಲಿಕ ಆರೋಪಿ ಮಹೇಶ್ ಭಟ್ಟನ ತೋಟದಲ್ಲಿ ಕೆಲಸ ಮಾಡಿ ಎಂದು ಸಂತೋಷ್ ಕುಮಾರ್ ಬಜಾಲ್ ಹೇಳಿದರು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ದೇಶದಲ್ಲೇ ಉತ್ತಮ ಗೌರವ ಹೊಂದಿದೆ. ಆದರೆ ಕಾಮುಕ ಮಹೇಶ್ ಭಟ್ಟನ ಬಂಧಿಸದಂತೆ ವಿಟ್ಲ ಪೊಲೀಸರಿಗೆ ಯಾರು ಒತ್ತಡ ಹಾಕಿದ್ದಾರೆ. ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ತಾಯಿ, ಪತ್ನಿ, ಅಕ್ಕ-ತಂಗಿಯರು ಇಲ್ಲವೇ.? ಇವರು ಮನೆಯ ಹೆಣ್ಣುಮಕ್ಕಳಿಗೆ ಇಂತಹ ದೌರ್ಜನ್ಯ ನಡೆದರೆ ಆರೋಪಿಯ ಬಂಧಿಸದೇ ಸನ್ಮಾನ ಮಾಡುವರೇ ಎಂದು ಪ್ರಶ್ನಿಸಿದರು. ವಿಟ್ಲದ ಪೊಲೀಸ್ ಅಧಿಕಾರಿಗಳಿಗೆ ಮಾನ-ಮರ್ಯಾದೆ ಎಂಬುದಿದ್ದರೆ ಕಾಮುಕ ಮಹೇಶ್ ಭಟ್ಟನ ಬಂಧಿಸಿ ಜೈಲಿಗಟ್ಟಲಿ ಎಂದು ಸವಾಲು ಹಾಕಿದರು.
ದಲಿತ ಹೋರಾಟಗಾರರಾದ ಎಸ್.ಪಿ.ಆನಂದ, ಕೃಷ್ಣಪ್ಪ ಕೊಣಾಜೆ, ಗಂಗಾಧರ ಗೋಲಿಯಡ್ಕ, ಕೃಷ್ಣಪ್ಪ ಬನ, ರಾಮಪ್ಪ ಮಂಜೇಶ್ವರ, ರಾಘವೇಂದ್ರ ಪಡ್ಪು, ಕಮಲಾಕ್ಷ ಬಜಾಲ್, ಸರೋಜಿನಿ ಬಂಟ್ವಾಳ, ಸದಾಶಿವ ಪಡುಬಿದ್ರಿ, ರಾಧಾಕೃಷ್ಣ ಬೊಂಡಂತಿಲ ಸೇರಿದಂತೆ ಹದಿನೈದಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.
