ಆಡು ಖರೀದಿಸಿ ತರಲು ರಾಜಸ್ಥಾನಕ್ಕೆ ಹೋದಾಗ ಅಲ್ಲಿನವರಿಂದ ಲಕ್ಷಾಂತರ ರೂಪಾಯಿ ವಂಚನೆಗೊಳಗಾಗಿದ್ದಲ್ಲದೆ ಪ್ರಾಣ ಬೆದರಿಕೆಯನ್ನೂ ಎದುರಿಸುತ್ತಿದ್ದ ಉಪ್ಪಿನಂಗಡಿ ನೆಕ್ಕಿಲಾಡಿಯ ಇಬ್ಬರು ರಾಜಸ್ಥಾನದಲ್ಲಿ ನಾಪತ್ತೆ ಆಗಿದ್ದು, ಅವರ ಮನೆಯವರು ಕಂಗಾಲಾಗಿದ್ದಾರೆ.
ಬಕ್ರೀದ್ ಹಬ್ಬಕ್ಕಾಗಿ ಆಡುಗಳನ್ನು ತರಲು ನೆಕ್ಕಿಲಾಡಿಯ ಮುಹಮ್ಮದ್ ಝುಬೇರ್ ಹ್ಯಾರೀಸ್ ಎಂಬುವರು ಸ್ನೇಹಿತನೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದರು. ಅವರು ಆಡು ತರದೆ ಹಣ ಕಳೆದುಕೊಂಡು ನಾಪತ್ತೆ ಆಗಿದ್ದಾರೆ ಎಂದು ಝುಬೈರ್ ಅವರ ತಂದೆ ಇಬ್ರಾಹಿಂ ಮಾಧ್ಯಮದ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
‘ನನ್ನ ಮಗ ಹಾಗೂ ಆತನ ಸ್ನೇಹಿತ ಆಡುಗಳನ್ನು ತರಲು ಕಳೆದ ಸೋಮವಾರ ರಾಜಸ್ಥಾನಕ್ಕೆ ತೆರಳಿದ್ದರು. ಮೊದಲ ಬಾರಿ ಬಾಡಿಗೆ 2 ಲಕ್ಷ ನೀಡುವುದು, ಆಡು ಇಲ್ಲಿಗೆ ತಲುಪಿದ ಬಳಿಕ ಉಳಿದ ಹಣ ನೀಡುವುದಾಗಿ ಅಲ್ಲಿಯವರೊಂದಿಗೆ ಒಪ್ಪಂದ ಆಗಿತ್ತು. ಅಲ್ಲಿ ಹೋದ ಬಳಿಕ ಆತ 10 ಲಕ್ಷ ನೀಡದಿದ್ದರೆ ಆಡುಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅದಕ್ಕಾಗಿ 10 ಲಕ್ಷ ತಲುಪಿಸುವಂತೆ ನಮಗೆ ಕರೆ ಮಾಡಿ ಹೇಳಿದ್ದಾನೆ’ ಎಂದರು.

’10 ಲಕ್ಷವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದೇವೆ. ಹಣ ತಲುಪಿದ ಕೂಡಲೇ ಆಡುಗಳನ್ನು ಲಾರಿಯಲ್ಲಿ ತುಂಬಿಸಲಾಗಿದೆ’ ಎಂದು ಮಗ ತಿಳಿಸಿದ್ದ. ಲಾರಿಯಲ್ಲಿ ಆಡುಗಳನ್ನು ತುಂಬಿಸಿದ್ದ ಚಿತ್ರಗಳನ್ನೂ ಕಳುಹಿಸಿದ್ದ. ಆದರೆ ಬಳಿಕ ಕರೆ ಮಾಡಿದ್ದ ಆತ ಇಲ್ಲಿ ಇನ್ನೂ 20 ಲಕ್ಷವನ್ನು ಖಾತೆಗೆ ಹಾಕುವಂತೆ ಬೇಡಿಕೆ ಇಡುತ್ತಿದ್ದಾರೆ. ಮಧ್ಯಾಹ್ನದೊಳಗೆ ಹಣ ಕೊಡದಿದ್ದರೆ ಆಡು ಇಲ್ಲ. ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ತಿಳಿಸಿದ್ದ’ ಎಂದರು.
‘ಬಳಿಕ ಆತನನ್ನು ಸಂಪರ್ಕಿಸಲು ಯತ್ನಿಸಿದಾಗ ಫೋನ್ ಸ್ವಿಚ್ಡ್ ಆಫ್ ಆಗಿದೆ. ನನ್ನ ಪತ್ನಿ ಇಲ್ಲಿನ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿದಾಗ ಅವರು ಅಲ್ಲಿನ ನಿಯಂತ್ರಣ ಕೊಠಡಿಯ ಸಂಖ್ಯೆ ನೀಡಿದ್ದಾರೆ. ಅಲ್ಲಿಗೆ ಕರೆ ಮಾಡಿದಾಗ ಅಲ್ಲಿನ ಪೊಲೀಸರು ನನ್ನ ಮಗ ಇರುವ ಜಾಗ ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ, ಮಗನ ಫೋನ್ ಸಂಪರ್ಕ ಸಿಕ್ಕಿಲ್ಲ. ಈಗ ಮತ್ತೆ ಆ ಪೊಲೀಸ್ ಅಧಿಕಾರಿಗೆ ಕರೆ ಮಾಡಿದರೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲವಂತೆ ಎಂದು ಇಬ್ರಾಹಿಂ ಹೇಳುತ್ತಾರೆ.
