ಹರಿಶ್ಚಂದ್ರ ಸಾಲ್ಯಾನ್ ಅವರ ನುಡಿಮುತ್ತು ಕೃತಿ ಬಿಡುಗಡೆ : ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ : ಡಾ.ತಲ್ಲೂರು

ಕರಾವಳಿ

ಉಡುಪಿ : ಕೃತಿಗಳು ಲೇಖಕನ ಮನದಾಳದ, ಜೀವಾನಾನುಭವದ ಮಾತುಗಳಾಗಿರುತ್ತವೆ. ಆದ್ದರಿಂದ ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಬುಧವಾರ ನಡೆದ ಲೇಖಕ ಹರಿಶ್ವಂದ್ರ ಪಿ. ಸಾಲಿಯಾನ್ ಮೂಲ್ಕಿ ಅವರ ‘ನುಡಿ ಮುತ್ತು’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಪುಸ್ತಕ ಓದುವವರ ಸಂಖ್ಯೆ ವಿರಳವಾಗಿದೆ ನಿಜ, ಆದರೆ ಉತ್ತಮ ಕೃತಿಗಳನ್ನು ಓದುವವರು ಇದ್ದೇ ಇದ್ದಾರೆ. ಪ್ರಮುಖವಾಗಿ ಇಂದು ದಿನ ಬೆಳಗಾದರೆ ಮೊಬೈಲ್‌ನಲ್ಲಿ ವಾಟ್ಸಾಪ್ ಮೂಲಕ ನಿತ್ಯ ಜೀವನಕ್ಕೆ ಬೆಳಕನ್ನು ಚೆಲ್ಲುವ ನುಡಿಮುತ್ತುಗಳನ್ನು ಕಳುಹಿಸಿ, ಶುಭ ಕೋರುವುದು ಜನರ ಪರಿಪಾಠವಾಗಿದೆ ಎಂದ ಅವರು, ಮಕ್ಕಳಲ್ಲಿ ಬಾಲ್ಯದಲ್ಲಿಯೇ ನೈತಿಕತೆಯನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯ ನೂರಾರು ಶಾಲಾ ಕಾಲೇಜುಗಳಿಗೆ ತೆರಳಿ 40,000ಕ್ಕೂ ಅಧಿಕ ಉತ್ತಮ ಕೃತಿಗಳನ್ನು ಉಚಿತವಾಗಿ ಹಂಚಿದ್ದೇನೆ. ಈ ಉದ್ದೇಶದಿಂದಲೇ ಹಲವಾರು ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದೇನೆ. ಈ ಕಾರ್ಯ ನನಗೆ ತುಂಬಾ ಸಂತೃಪ್ತಿ ನೀಡಿದೆ ಎಂದರು.

ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಿದ ಮೇಲೆ ಅದರ ಅಭಿಪ್ರಾಯಗಳನ್ನು ಕೃತಿಕಾರನಿಗೆ ತಿಳಿಸುವ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡರೆ, ಅದು ಪುಸ್ತಕ ಬರೆದವನ ಬರವಣಿಗೆಯನ್ನು, ಚಿಂತನೆಯನ್ನು ಹರಿತಗೊಳಿಸುತ್ತದೆ. ಆದ್ದರಿಂದ ಪುಸ್ತಕದಲ್ಲಿ ಏನಿದೆ ಎಂದು ಕೇಳಬೇಡಿ. ಸಮಾಜದ ಅಂಕುಡೊoಕುಗಳನ್ನು ತಿದ್ದುವ, ಸನ್ಮಾರ್ಗದಲ್ಲ ನಡೆಸುವ ಲೇಖಕ, ಹೊಸ ಅಂಗಣದ ಹರಿಶ್ಚಂದ್ರ ಸಾಲಿಯಾನ್ ಅವರು ಬರೆದ ನುಡಿಮುತ್ತು ನಂತಹ ಇನ್ನಷ್ಟು ಕೃತಿಗಳು ನಮಗೆ ಅಗತ್ಯ ಇವೆ. ಮುಂದಿನ ದಿನಗಳಲ್ಲಿ ಹರಿಶ್ಚಂದ್ರ ಸಾಲಿಯಾನ್ ಅವರು ಇನ್ನಷ್ಟು ಉತ್ತಮ ಕೃತಿಗಳನ್ನು ಹೊರ ತರಲಿ ಎಂದು ಅವರು ಹಾರೈಸಿದರು.

ಕೃತಿಯನ್ನು ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಲೇಖಕರಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಕೆಲಸವನ್ನು ಸಮಾಜ ಮಾಡಬೇಕು. ಸಾಹಿತಿಗಳು ಸರಸ್ವತಿ ಪುತ್ರರು, ಅವರನ್ನು ಬೆಳೆಸುವ ಕೆಲಸವನ್ನು ಲಕ್ಷ್ಮೀ ಪುತ್ರರು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಯುವ ಲೇಖಕಿ ಶೆರೋನ್ ಶೆಟ್ಟಿ ಐಕಳ ಅವರು ಬರೆದ ‘ಮಹಾ ಕುಂಭಾಶ್ವಮೇಧ ‘ ಕೃತಿಯನ್ನು ಡಾ.ತಲ್ಲೂರು ಶಿವರಾಮ ಶೆಟ್ಟಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮಿನಾರಾಯಣ ಉಪಾಧ್ಯ, ವೈದ್ಯ ಡಾ.ಅರುಣ್ ಕುಡ್ವ ಮೂಲ್ಕಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶ್ರೀನಾರಾಯಣ ಗುರು ವಿದ್ಯಾ ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಮಂಗಳೂರಿನ ಕಥಾಬಿಂದು ಸಂಸ್ಥೆಯ ಪಿ.ವಿ.ಪ್ರದೀಪ್ ಕುಮಾರ್, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ, ಕಿಲೆಂಜೂರುಮ ಲೇಖಕ ಹರಿಶ್ಚಂದ್ರ ಪಿ.ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು ಮೊದಲಾದವರು ಉಪಸ್ಥಿತರಿದ್ದರು.

✍️.ಅನುಷಾ ಆಚಾರ್ ಪಳ್ಳಿ