ನ್ಯಾಯಾಂಗದ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಸುಪ್ರೀಂ ಕೋರ್ಟ್ 4 ವಿವಿಧ ಪ್ರಕರಣಗಳಲ್ಲಿ ಒಂದೇ ದಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಡಾ ಹಗರಣ, ತೇಜಸ್ವಿ ಸೂರ್ಯ ವಿರುದ್ಧದ ಕ್ರಿಮಿನಲ್ ಪ್ರಕರಣ, ಮಮತಾ ಬ್ಯಾನರ್ಜಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಹಾಗೂ ವಕೀಲರಿಗೆ ಇ.ಡಿ.ನೋಟಿಸ್ ನೀಡಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಾಲ್ಕು ಪ್ರಕರಣಗಳನ್ನು ವಿಚಾರಣೆ ಮಾಡಿದ ಮುಖ್ಯ ನ್ಯಾ| ಬಿ.ಆರ್. ಗವಾಯಿ ಹಾಗೂ ನ್ಯಾ| ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ, ನ್ಯಾಯಾಲಯದ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಒಂದೇ ದಿನ ಎರಡೆರಡು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಛಡಿಯೇಟು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮತ್ತು ಬೈರತಿ ಸುರೇಶ್ ವಿರುದ್ಧದ ಮುಡಾ ಪ್ರಕರಣ ಮತ್ತು ಅಕ್ರಮ ಹಣ ವರ್ಗಾವಣೆ ಕೇಸೊಂದರಲ್ಲಿ ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ ವಕೀಲರಿಗೇ ಸಮನ್ಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇ.ಡಿ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇ.ಡಿ. ತನ್ನೆಲ್ಲ ಎಲ್ಲೆಯನ್ನು ಮೀರುತ್ತಿದೆ ಎಂದು ಹೇಳಿರುವ ನ್ಯಾಯಪೀಠ, ಇ.ಡಿ. ರಾಜಕೀಯದ ಭಾಗವಾಗುತ್ತಿದೆ ಎಂದು ಕಿಡಿಕಾರಿದೆ. ಇ.ಡಿ. ದಾಖಲಿಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಾನೂನು ಸಲಹೆ ನೀಡಿದ್ದಕ್ಕೆ ಸಂಬಂಧಿಸಿ ವಕೀಲರಿಗೆ ನೋಟಿಸ್ ಕೊಟ್ಟಿದ್ದರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
