ಮಂಗಳೂರು: ಶ್ರೀಮಂತ ಉದ್ಯಮಿರ ಸುಸೈಡ್ ಹಿಂದೆ ಇದೆಯಾ ಹನಿ ಟ್ರ್ಯಾಪ್ ಕಹಾನಿ..? ಶಾಸಕರ ಆಪ್ತ ನಿತಿನ್ ಪೂಜಾರಿ ಆತ್ಮಹತ್ಯೆ ನಾನಾ ಅನುಮಾನ.!

ಕರಾವಳಿ

ಮರ್ಯಾದೆಗೆ ಅಂಜಿ ಮಂಗಳೂರಿನ ಹಲವಾರು ಅಗರ್ಭ ಶ್ರೀಮಂತರು ಆತ್ಮಹತ್ಯೆ ದಾರಿ ಹಿಡಿದಿದ್ದರು.!

ಮರೋಳಿ ನಿವಾಸಿಯಾಗಿರುವ ಮಣ್ಣಗುಡ್ಡೆ ಗುಂಡೂರಾವ್ ಲೇನಲ್ಲಿರುವ ವಸತಿ ಸಂಕೀರ್ಣದಲ್ಲಿ ವಾಸವಿರುವ ಉದ್ಯಮಿ ನಿತಿನ್ ಪೂಜಾರಿ ಎರಡು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಶರಣಾಗಿದ್ದರು. ನಿತಿನ್ ಪೂಜಾರಿ ಬಿಜೆಪಿ ಪಕ್ಷದ ಮುಖಂಡರಾಗಿದ್ದು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಕದ್ರಿಕಂಬಳದಲ್ಲಿ ‘ಕೊಡೆಕ್ಕೆನ’ ಹೆಸರಿನ ಹೋಟೆಲ್ ಉದ್ಯಮ ಆರಂಭಿಸಿದ್ದರು. ಮುಡಿಪುವಿನಲ್ಲಿ ಪಾಲುದಾರಿಕೆಯ ಹೋಟೆಲ್ ಕೂಡ ಹೊಂದಿದ್ದರು. ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ಕೂಡ ಪಡೆದುಕೊಂಡಿದ್ದರು. ಆದರೆ ಏಕಾಏಕಿ ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾಗಿದ್ದರು.

ಆರ್ಥಿಕ ಸಂಕಷ್ಟದಿಂದ ನಿತಿನ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿತಿನ್ ಬಲ್ಲವರು ಆತ ಆರ್ಥಿಕ ಸಂಕಷ್ಟದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವನಲ್ಲ, ಇದರ ಹಿಂದೆ ಬೇರೆಯದ್ದೇ ಕಾರಣವಿರಬೇಕೆಂದು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಹೈಫೈ ಜೀವನ ಶೈಲಿಗೆ ಒಗ್ಗಿದ್ದ ನಿತಿನ್ ಅವಿವಾಹಿತರಾಗಿದ್ದು , ಹನಿ ಟ್ರ್ಯಾಪ್ ಜಾಲಕ್ಕೆ ಸಿಲುಕಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾದರಾ ಅನ್ನುವ ಅನುಮಾನ ಈಗ ವ್ಯಕ್ತವಾಗುತ್ತಿದೆ.

ಮಂಗಳೂರಿನಲ್ಲಿ ಹಲವಾರು ಉದ್ಯಮಿಗಳು ಈ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು ಇದೆ. ಆದರೆ ಆತ್ಮಹತ್ಯೆ ನಿರ್ಧಾರದ ಹಿಂದಿನ ಕಹಾನಿ ಈವರೆಗೂ ಹೊರಬಂದಿಲ್ಲ . ಮಂಗಳೂರಿನ ನೂರಾರು ಬಸ್ಸ್ ನ ಧಣಿ, ಮಹೇಶ್ ಮೋಟಾರ್ಸ್ ಮಾಲಕ, ಮಂಗಳೂರು ನಗರದಲ್ಲೇ ಅತಿ ಹೆಚ್ಚು ರೆಡಿ ಮಿಕ್ಸ್ ಟಿಪ್ಪರ್ ಲಾರಿ ಬಿಸಿನೆಸ್ ಹೊಂದಿದ್ದ ಪ್ರಕಾಶ್ ಶೇಖ ವರ್ಷಗಳ ಹಿಂದೆಯಷ್ಟೇ ಕದ್ರಿಯ ಆಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಯಾವುದೇ ಆರ್ಥಿಕ ಸಂಕಷ್ಟ ಇಲ್ಲದ ಪ್ರಕಾಶ್ ಶೇಖ ಆತ್ಮಹತ್ಯೆ ಹಲವರನ್ನು ಆಶ್ಚರ್ಯಗೊಳಿಸಿತ್ತು. ಸಾಯುವ ನಾಲ್ಕು ದಿನಗಳ ಮೊದಲೇ ನಾಲ್ಕು ಹೈಫೈ ಬಸ್ ಗಳನ್ನು ಖರೀದಿಸಿ ರಸ್ತೆಗೆ ಇಳಿಸಿದ್ದರು. ಪ್ರಕಾಶ್ ಶೇಖ ಆತ್ಮಹತ್ಯೆ ಹಿಂದೆಯೂ ಹನಿ ಟ್ರ್ಯಾಪ್ ಜಾಲದ ಶಂಕೆ ವ್ಯಕ್ತವಾಗಿತ್ತು. ಕಾರ್ ಸ್ಟ್ರೀಟ್ ನ ಅಗರ್ಭ ಶ್ರೀಮಂತರೊಬ್ಬರು ಕೂಡ ಏಕಾಏಕಿ ಆತ್ಮಹತ್ಯೆ ಗೆ ಶರಣಾಗಿದ್ದರು. ಆರ್ಥಿಕ ಸಂಕಷ್ಟ ಇಲ್ಲದಿದ್ದರೂ ಏಕಾಏಕಿ ಅಗರ್ಭ ಶ್ರೀಮಂತರು ಸುಸೈಡ್ ಗೆ ಬಲಿಯಾಗುತ್ತಿರುವ ಹಿಂದಿನ ರಹಸ್ಯ ಅವರೊಡನೆಯೇ ಮಣ್ಣಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ನಿಗೂಢತೆಯನ್ನು ಬಯಲಿಗೊಳಿಸಿದರೆ ಇನ್ನಷ್ಟು ಅಮಾಯಕ ಅಗರ್ಭ ಶ್ರೀಮಂತರ ಜೀವ ಉಳಿಯಬಹುದು ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹನಿ ಟ್ರ್ಯಾಪ್ ಜಾಲ ಸಕ್ರೀಯವಾಗಿದ್ದು, ಶ್ರೀಮಂತರು, ಉದ್ಯಮಿಗಳನ್ನೇ ಟಾರ್ಗೆಟ್ ಮಾಡುತ್ತಿರುವುದು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಳ್ಳುವ ಹನಿ ಲೇಡಿಗಳು ಸಲುಗೆ ಬೆಳೆಸುತ್ತಾರೆ. ಆದಾದ ಬಳಿಕ ಮಂಚಕ್ಕೆ ಕರೆದು ವಿಡಿಯೋ ಮಾಡಲಾಗುತ್ತಿದೆ. ನಂತರ ಗ್ಯಾಂಗ್ ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಾರೆ. ಹೀಗೆ ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದು ಹಲವಾರು ಕುಟುಂಬಗಳು ಬಲಿಪಶುವಾಗಿದೆ. ಮಂಗಳೂರಿನ ಅಗರ್ಭ ಶ್ರೀಮಂತರ ಸುಸೈಡ್ ಹಿಂದೆ ಇಂತಹ ಹತ್ತಾರು ಕಹಾನಿಗಳು ಸುದ್ಧಿಯಲ್ಲಿದ್ದರೂ, ಅವರೊಂದಿಗೆ ಮಣ್ಣು ಪಾಲಾಗುತ್ತಿದೆ. ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವುದಿಲ್ಲ. ಇದು ಇಂತಹ ಹಲವಾರು ಖತರ್ನಾಕ್ ಕೆಲಸ ಮಾಡಲು ಹನಿ ಗ್ಯಾಂಗ್ ಗೆ ಸಹಕಾರಿಯಾಗುತ್ತಿದೆ. ಇಂತಹ ಖತರ್ನಾಕ್ ಜಾಲವನ್ನು ಭೇದಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕಿದೆ.