ತೆರೆದುಕೊಳ್ಳುತ್ತಾ ಧರ್ಮಸ್ಥಳದ 2 ದಶಕದ ‘ಬುರುಡೆ’ ರಹಸ್ಯ..?
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಇದೀಗ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು S.I.T ಗೆ ವಹಿಸಿತ್ತು. ಇದೀಗ ಮುಸುಕುಧಾರಿ ದೂರುದಾರ ತನ್ನ ವಕೀಲರ ಮೂಲಕ ಮಂಗಳೂರು ಮಲ್ಲಿಕಟ್ಟೆಯಲ್ಲಿರುವ ಅತಿಥಿ ಗೃಹಕ್ಕೆ ಬಂದು ಎಸ್ ಐ ಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ.

ಎಸ್ ಐಟಿ ತಂಡದ ಡಿಐಜಿ ಎಂ ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ದಯಾಮ ಅವರ ಎದುರು ಬೆಳಿಗ್ಗೆ 11 ಗಂಟೆಗೆ ಹಾಜರಾಗಿ ಸಂಜೆ 7.30 ಕ್ಕೆ ವಿಚಾರಣೆ ಮುಗಿಸಿ ಮುಸುಕುಧಾರಿ ದೂರುದಾರ ವಕೀಲರ ಜೊತೆ ಹೊರಟು ಹೋಗಿದ್ದು, ಸುದೀರ್ಘ 8 ಗಂಟೆ 30 ನಿಮಿಷಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಧರ್ಮಸ್ಥಳದ 2 ದಶಕಗಳ ಬುರುಡೆ ರಹಸ್ಯ ಹೊರಬರುವ ಆಶಾಭಾವನೆ ಮೂಡಿದೆ. ಎಸ್ ಐಟಿ ಮುಂದೆ ಶವ ಹೂಳಲು ನೆರವು ನೀಡಿದ 30 ಜನರ ಹೆಸರು ಹೇಳಿರುವುದಾಗಿ ವರದಿಯಾಗಿದೆ. ಭೀಮನ ‘ಬುರುಡೆ’ ಮಾಹಿತಿ ಕೇಳಿ ಎಸ್ ಐಟಿ ಅಧಿಕಾರಿಗಳು ಶಾಕ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲದಕ್ಕೂ ಎಸ್ ಐಟಿ ತನಿಖೆಯ ಪಾರದರ್ಶಕತೆ ಮೇಲೆ ಎಲ್ಲವೂ ನಿಂತಿದೆ.

ಅಮೆರಿಕ, ಯು.ಕೆ ಮೊದಲಾದ ದೇಶಗಳಲ್ಲಿ ಕೇಳಿಬರುತ್ತಿದ್ದ ಹಾರರ್ ಕ್ರೈಂ ಸರಣಿಗಳು ಧರ್ಮಸ್ಥಳ ಗ್ರಾಮದಲ್ಲೂ ಸುದ್ಧಿಯಾಗಿ ಭೀತಿ ಮೂಡುವಂತಾಗಿತ್ತು. ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ವ್ಯಕ್ತಿ ಎದ್ದು ಬಂದು ಇಡೀ ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದ್ದ. ಇದೀಗ ಎಸ್ ಐಟಿ ಶವಗಳನ್ನು ಮೇಲೆತ್ತುವ ಕಾರ್ಯದ ಬಗ್ಗೆ ರಾಷ್ಟ್ರದ ಚಿತ್ತ ಧರ್ಮಸ್ಥಳದತ್ತ ನೋಡುತ್ತಿದೆ.
