10 ದಿನಗಳ ರಹಸ್ಯ ಕಾರ್ಯಾಚರಣೆಯಲ್ಲಿ ಭೂಗತ ಪಾತಕಿ ರವಿಪೂಜಾರಿ ಸಹಚರ ಖಾಕಿ ಬಲೆಗೆ ಬಿದ್ದಿದ್ದೇ ರೋಚಕ.!
ಬಿಲ್ಡರ್ ವೊಬ್ಬರ ಹತ್ಯೆ, ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಸೇರಿದಂತೆ ದೇಶಾದಾದ್ಯಂತ ಹದಿನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕವಿರಾಜ್ ಕೋಲಾರ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೆನ್) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಉತ್ತರಾಖಂಡ ಮೂಲದ ಕವಿರಾಜ್ ಭೂಗತ ಪಾತಕಿ ರವಿ ಪೂಜಾರಿ ಸಹಚರನಾಗಿ ಗುರುತಿಸಿಕೊಂಡಿದ್ದ. ರವಿ ಪೂಜಾರಿ ಅಣತಿಯಂತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ. ಬೆಂಗಳೂರಿನಲ್ಲಿ ನೆಲೆಸಿದ್ದ.

ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕವಿರಾಜ್ ವಿರುದ್ಧ ಕಾಮಾಕ್ಷಿಪಾಳ್ಯ, ತಿಲಕ್ ನಗರ, ತಮಿಳುನಾಡು ಥಳಿ, ಕೆಂಗೇರಿ, ಆಡುಗೋಡಿ, ತಿಲಕ್ ನಗರದಲ್ಲಿ ನಾಲ್ಕು ಪ್ರಕರಣ, ಸರ್ಜಾಪುರ, ಕಾಡುಗೋಡಿ, ಇಂದಿರಾನಗರ, ಬೈಯ್ಯಪ್ಪನಹಳ್ಳಿ, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. 2020 ರಲ್ಲಿ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈತ ಹದಿನಾಲ್ಕು ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ.
ಭೂಗತ ಪಾತಕಿ ಕವಿರಾಜ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ. ಕೊಲೆ, ದರೋಡೆ, ಅಪಹರಣ ಸೇರಿದಂತೆ ಹಲವಾರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದ. ಆದರೆ ಈತ ಮೊಬೈಲ್ ಬಳಸುತ್ತಿರಲಿಲ್ಲ. ಇದರಿಂದ ಈತನ ಜಾಡು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿರಲಿಲ್ಲ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ನೇತೃತ್ವದ ತಂಡ ಕಳೆದ ಹತ್ತು ದಿನಗಳಿಂದ ದೆಹಲಿ, ಉತ್ತರಪ್ರದೇಶದ ನೋಯಿಡಾದಲ್ಲಿ ಬೀಡುಬಿಟ್ಟು ಆರೋಪಿಯ ಜಾಡು ಪತ್ತೆಹಚ್ಚಿದ್ದರು. ಜುಲೈ 30 ರಂದು ನೋಯಿಡಾದಿಂದ ಈತನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಯ ಪತ್ತೆ ಕಾರ್ಯ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು.ಇನ್ಸ್ ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಕೊನೆಗೂ ಮೋಸ್ಟ್ ವಾಂಟೆಡ್ ಕ್ರಿಮಿನಲ್ ನನ್ನು ಖಾಕಿ ಬಲೆಗೆ ಕೆಡವಲು ಯಶಸ್ವಿಯಾಗಿದ್ದಾರೆ
