ಶಿವಮೊಗ್ಗ: ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ, ಒತ್ತಾಯಪೂರ್ವಕ ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಇಡೀ ಕುಟುಂಬವನ್ನೇ ನಾಶಮಾಡುವುದಾಗಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮುಖಂಡನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಥಮ ವರ್ತಮಾನ ವರದಿ ದಾಖಲಿಸಿ ಆರೋಪಿ ಬಿಜೆಪಿ ಮುಖಂಡ ಅರುಣ್ ಕುಗ್ವೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅರುಣ್ ಕುಗ್ವೆ, ಮಾಜಿ ಶಾಸಕ ಹರತಾಳು ಹಾಲಪ್ಪ, ಸಂಸದ ಬಿವೈ ರಾಘವೇಂದ್ರರ ನಿಕಟ ಸಂಪರ್ಕದಲ್ಲಿ ಇರುವ ವ್ಯಕ್ತಿ ಎಂದು ತಿಳಿದು ಬಂದಿದೆ.
ದೂರು ನೀಡಿದ ಯುವತಿಯ ಹೊರತಾಗಿ ಬೇರೊಬ್ಬ ಯುವತಿಯೊಂದಿಗೆ ಆರೋಪಿ ಅರುಣ್ ಕುಗ್ವೆ ನಿಶ್ಚಿತಾರ್ಥ ನಡೆಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ನೀಡಿದ ದೂರಿನ ಅನ್ವಯ, ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಅರುಣ್ ಕುಗ್ವೆ ಮತ್ತು ಗಣೇಶ್ ಎಂಬಾತನ ಮೇಲೆ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಅರುಣ್ ಕುಗ್ವೆ, ಸಂತ್ರಸ್ತ ಯುವತಿಯನ್ನು ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುವುದಾಗಿ ನಂಬಿಸಿ, ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡರುತ್ತಾನೆ. ಯುವತಿಯ ಒಪ್ಪಿಗೆ ಇಲ್ಲದೆಯೂ ಬಲಾತ್ಕಾರದಿಂದ ಆಕೆಯ ಜೊತೆಗೆ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಮಾನಹಾನಿ ಮಾಡಲಾಗಿದೆ ಎಂದು ಯುವತಿ ದಾಖಲಿಸಿದ ದೂರಿನಲ್ಲಿ ತಿಳಿದು ಬಂದಿದೆ.
ಅರುಣ್ ಕುಗ್ವೆ ಮೇಲೆ ಹಲವು ಅಪರಾಧ ಪ್ರಕರಣಗಳು ದಾಖಲಿದ್ದು, ಯುವತಿಗೆ ಆತನ ರೌಡಿಸಂಗಳ ಬಗ್ಗೆ ತಡವಾಗಿ ಮನವರಿಕೆಯಾಗಿದೆ. ಆತನ ಮೇಲೆ ಗಡಿಪಾರು ಸೂಚನೆ ಕೂಡ ಪೊಲೀಸ್ ಇಲಾಖೆ ನೀಡಿದ್ದು ಪ್ರಕರಣದ ಗಂಭೀರತೆಯ ಮೇಲೆ ಆತನ ಬಂಧಿಸಿ ವಿಚಾರಣೆಗೆ ಪೊಲೀಸ್ ಇಲಾಖೆ ಮುಂದಾಗಿದ್ದಾರೆ.
