ಕಾರು, ಬೈಕು, ಫ್ಲ್ಯಾಟ್, ಸೈಟ .. ಕೋಟಿ ಕೋಟಿ ಉಂಡೆನಾಮ ಹಾಕಿದ ಖದೀಮರು ಅಂದರ್

ಕರಾವಳಿ

ಸಾರ್ವಜನಿಕರ ದುಡ್ಡಿನಲ್ಲಿ ನ್ಯೂ ಶೈನ್, ನ್ಯೂ ಇಂಡಿಯಾ ವಂಚಕರ ರಾಯಲ್ ಬದುಕು.. ಪೊಲೀಸರಿಂದ ಆಸ್ತಿ ಜಪ್ತಿ

ಕಾರು, ಬೈಕು, ಫ್ಲ್ಯಾಟ್, ಸೈಟ್, ಉಂಗುರ ಹೀಗೆ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಆಮಿಷ ತೋರಿಸಿ ಪೂರ್ತಿ ಮುಂಡಾಮೋಚಿದ ನಾಲ್ವರು ಲಕ್ಕಿ ಸ್ಕೀಮ್ ವಂಚಕರು ಸುರತ್ಕಲ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಾರ್ವಜನಿಕರ ದುಡ್ಡಿನಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿದ್ದವರ ಮುಖವಾಡ ಬಯಲಾಗಿದೆ.

ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಬಿ.ಎಂ.ಆರ್ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಚೇರಿ ತೆರೆದು ಪ್ರತೀ ತಿಂಗಳು ಒಂದು ಸಾವಿರ ರೂಪಾಯಿಯಂತೆ ಒಂದು ವರ್ಷದ ಅವಧಿಯ ದುಡ್ಡು ಸ್ವೀಕರಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 13 ಸಾವಿರ ಜನರಿಂದ 10 ಕೋಟಿಗೂ ಅಧಿಕ ಜನರಿಗೆ ಉಂಡೆನಾಮ ಹಾಕಿದ್ದರು.

ಚೇಳ್ಯಾರಿನ ಭುಜಂಗ ಎ. ಪೂಜಾರಿ ಎಂಬುವವರು ನೀಡಿದ ದೂರಿನನ್ವಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯೂ ಇಂಡಿಯಾ ರಾಯಲ್ ಸ್ಕೀಮ್, ಗ್ರೀನ್ ಲೈಟ್ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಕೋಟಿ ಕೋಟಿ ಬಾಚಿದ ಬಜಪೆಯ ಮೊಹಮ್ಮದ್ ಅಶ್ರಫ್, ಕಾಟಿಪಳ್ಳ ಮೊಹಮ್ಮದ್ ಹನೀಫ್ ರನ್ನು ಬಂಧಿಸಲಾಗಿದೆ.

ಅದೇ ರೀತಿ ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ಮೂಲಕ ಕೋಟಿ ಬಾಚಿದ ಇನ್ನಿಬ್ಬರು ಖದೀಮರು ಪೊಲೀಸರ ವಶವಾಗಿದ್ದಾರೆ. ಆಕರ್ಷಕ ಬಹುಮಾನದ ಆಸೆ ಹುಟ್ಟಿಸಿ 3 ಸಾವಿರ ಜನರಿಗೆ 4 ಕೋಟಿಗೂ ಅಧಿಕ ಮೊತ್ತದ ಬಹುಮಾನ ನೀಡದೆ ವಂಚಿಸಿದ ನ್ಯೂ ಶೈನ್ ಎಂಟರ್ ಪ್ರೈಸಸ್ ನ ಅಹಮ್ಮದ್ ಖುರೇಷಿ, ನಝೀರ್ ಎಂಬವರನ್ನು ಬಂಧಿಸಲಾಗಿದೆ. ಸೂರಿಂಜೆಯ ಶಿವಪ್ರಸಾದ್ ಎಂಬವರ ದೂರಿನನ್ವಯ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಆರೋಪಿ ಅಹಮ್ಮದ್ ಖುರೇಷಿ ವಿಚಾರಣೆ ವೇಳೆಯಲ್ಲಿ ವಫಾ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಂ ನ ಅಬ್ದುಲ್ ವಹಾಬ್ ಮತ್ತು ಬಶೀರ್ ಇವರೊಂದಿಗೆ ಸೇರಿ ಈ ಹಿಂದೆ ನಡೆಸಿರುವ ಲಕ್ಕಿ ಸ್ಕೀಮ್ ನ ಯೋಜನೆಗಳ ಬಗ್ಗೆ ಕೂಡ ತನಿಖೆಯನ್ನು ಮಾಡಲಾಗುತ್ತಿದೆ.

ಆರೋಪಿತರ ಪೈಕಿ ಅಹಮ್ಮದ್ ಖುರೇಶಿ ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ನಝೀರ್ ಯಾನೇ ನಾಸೀರ್ ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಆರೋಪಿತರು ಆಯಿಷಾ ಕಾಂಪ್ಲೆಕ್ಸ್ ನ ಕಛೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ನ ಕಛೇರಿ ಹಾಗೂ ಶೈನ್ ಮಾರ್ಟ್ ಕಛೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ ಗಳು, ಡಿವಿಆರ್ ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಛೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಯ್ಲಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಮಾನ್ಯ ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ವ್ಯವಹಾರವನ್ನು ಮಾಡಲಾಗಿರುತ್ತದೆ.

ಸದ್ರಿ ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್ ರವರುಗಳು ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡುವಂತೆ ತಿಳಿಸಲಾಗಿದೆ. ಸುರತ್ಕಲ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಈ ಮಹತ್ವದ ಕಾರ್ಯಾಚರಣೆ ನಡೆಸಿದ್ದರು.