ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಅಸ್ತು, ಕನಿಷ್ಠ ಏಳು ವರ್ಷ ಪೂರೈಸಿದ ಸಿಬ್ಬಂದಿಗೆ ಅನುಮತಿ.

ರಾಜ್ಯ

ಪೊಲೀಸ್‌ ಇಲಾಖೆ ಸಿಬ್ಬಂದಿಗಳನ್ನು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ಕೋರಿಕೆ ಆಧಾರದ ಮೇಲೆ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅಂತರ ಜಿಲ್ಲಾ ಘಟಕಗಳ ವರ್ಗಾವಣೆಗೆ ಇಲಾಖೆಯಿಂದ ರೂಪಿಸಲಾಗಿರುವ ಅಧಿಕೃತ ಆನ್‌ಲೈನ್‌ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರವೇ ಪರಿಗಣಿಸಬೇಕು. ಪ್ರತಿ ಘಟಕದಿಂದ ವರ್ಗಾವಣೆ ಆಗಿ ಹೋಗುವ ಸಿಬ್ಬಂದಿ ಸಂಖ್ಯೆ ಶೇ 15ಕ್ಕಿಂತ ಹೆಚ್ಚಿರಬಾರದು. ಸೇವಾ ಜ್ಯೇಷ್ಠತೆ ಆಧಾರದ ಮೇಲೆಯೇ ವರ್ಗಾವಣೆ ನಡೆಸಬೇಕು. ಎಲ್ಲ ವೃಂದದ ವರ್ಗಾವಣೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರಾಕ್ಷೇಪಣಾ ಪತ್ರ ಕಡ್ಡಾಯ ಆಗಿರುತ್ತದೆ ಎಂದು ಆದೇಶ ಹೇಳಿದೆ.

ಇಲಾಖೆ ವಿಚಾರಣೆ ಅಥವಾ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಅಂತಹ ಸಿಬ್ಬಂದಿಯ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಹಾಗೂ ಘಟಕದಲ್ಲಿ ಕನಿಷ್ಠ ಏಳು ವರ್ಷಗಳಿಂದ ಇದ್ದರೆ ಮಾತ್ರ ವರ್ಗಾವಣೆಗೆ ಅರ್ಹರಾಗಿರುತ್ತಾರೆ.

ಎಲ್ಲ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಅವರ ಕನಿಷ್ಠ ಮತ್ತು ಗರಿಷ್ಠ ಅವಧಿ ನಿಗದಿಪಡಿಸಿ ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಆದರೂ ಹಲವು ಘಟಕಗಳಲ್ಲಿ ಸಿಬ್ಬಂದಿಯು ಒಂದೇ ಸ್ಥಳ, ಠಾಣೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ವರ್ಗಾವಣೆ ನಂತರ ಅದೇ ಠಾಣೆಗಳಿಗೆ ಒಒಡಿ ಆಧಾರದ ಮೇಲೆ ಸ್ಥಳ ನಿಯುಕ್ತಿಗೊಳಿಸುತ್ತಿರುವುದು ಗೊತ್ತಾಗಿದ್ದು, ಯಾವುದೇ ಕಾರಣಕ್ಕೂ ಮತ್ತೆ ಅದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ಇಲ್ಲ ಎಂದು ಗೃಹ ಸಚಿವರು ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸಿದ್ದಾರೆ.