ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದರೋಡೆ: ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ 8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣ ದೋಚಿಕೊಂಡು ಪರಾರಿ

ರಾಷ್ಟ್ರೀಯ

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ ಹೊತ್ತಿಗೆ ಏಳೆಂಟು ಮುಸುಕುದಾರಿ ದರೋಡೆಕೋರರ ತಂಡ ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿ 8 ಕೋಟಿ ರೂಪಾಯಿ ನಗದು, ಸರಿ ಸುಮಾರು 50 ಕೆ.ಜಿಯಷ್ಟು ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಜನ ನಿಬಿಡ ಪ್ರದೇಶದಲ್ಲಿರುವ ಎಸ್‌ಬಿಐ ಶಾಖೆಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳು ಅಣಿಯಾಗುತ್ತಿದ್ದಂತೆ ಮಿಲಿಟರಿ ವೇಷ ಧರಿಸಿ ಬಂದಂತಹ ದರೋಡೆಕೋರರ ತಂಡ ಬ್ಯಾಂಕಿನ ಮುಖ್ಯ ದ್ವಾರದ ಮೂಲಕ ಒಳ ಪ್ರವೇಶಿಸಿದ್ದಾರೆ. ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ, ದರೋಡೆ ಮಾಡಿದ್ದಾರೆ.

ದರೋಡೆಕೋರರು ಘಟನೆ ಬಳಿಕ ಕದ್ದ ಚಿನ್ನಾಭರಣವನ್ನು ವಾಹನಗಳಲ್ಲಿ ಹೇರಿಕೊಂಡು ಮಹಾರಾಷ್ಟ್ರದತ್ತ ಪರಾರಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಅಧಿಕಾರಿಗಳ ಭೇಟಿ ನೀಡಿದ್ದು, ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ದರೋಡೆ ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಜನ ಬ್ಯಾಂಕ್‌ ಎದುರು ಜಮಾಯಿಸಿದ್ದಾರೆ.