ಅಕ್ಟೋಬರ್ 10 ರಿಂದ ಅಕ್ಟೋಬರ್ 18 ರ ತನಕ ರಾಜ್ಯಾದ್ಯಂತ ಸೌಜನ್ಯ ನ್ಯಾಯ ಸಪ್ತಾಹ ಆಚರಿಸಲು ಕರೆ

ಕರಾವಳಿ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ , ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9 ರಂದು 13 ವರ್ಷಗಳು ತುಂಬಿದ್ದು, ಆ ದಿನ ನ್ಯಾಯಕ್ಕಾಗಿ ಜನಾಗ್ರಹ ದಿನವನ್ನಾಗಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ರಾಜ್ಯಾದ್ಯಂತ 100 ಕ್ಕೂ ಹೆಚ್ಚು ಕಡೆ ಯಶಸ್ವಿಯಾಗಿ ಆಚರಿಸಿದೆ. ಹೋರಾಟದ ಮುಂದುವರಿದ ಭಾಗವಾಗಿ ಅಕ್ಟೋಬರ್ 10 ರಿಂದ ಅಕ್ಟೋಬರ್ 18 ರ ತನಕ ರಾಜ್ಯಾದ್ಯಂತ ಸೌಜನ್ಯ ನ್ಯಾಯ ಸಪ್ತಾಹ ಆಚರಿಸಲು ಕರೆ ನೀಡಿದೆ.

ಅಕ್ಟೋಬರ್ 9 ರಂದು ರಾಜ್ಯದಾದ್ಯಂತ ತಾಲೂಕು, ಜಿಲ್ಲಾ, ಹೋಬಳಿ, ಗ್ರಾಮ ಮಟ್ಟದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ‌. ಧರ್ಮಸ್ಥಳ ಗ್ರಾಮದ ವೇದವಲ್ಲಿ, ಪದ್ಮಲತಾ, ಆನೆ ಮಾವುತ ನಾರಾಯಣ, ಸಹೋದರಿ ಯಮುನಾ ಮತ್ತು ಸೌಜನ್ಯ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ, ಎಸ್ಐಟಿ ತನಿಖೆ ನ್ಯಾಯಯುತವಾಗಿ ನಡೆಸಲು ಮತ್ತು ಸೌಜನ್ಯ ಪರ ಹೋರಾಟಗಾರರ ಮೇಲಿನ ದೌರ್ಜನ್ಯ ನಿಲ್ಲಿಸಲು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಿತು.

ಹೋರಾಟದ ಮುಂದುವರಿದ ಭಾಗವಾಗಿ ರಾಜ್ಯದಾದ್ಯಂತ ಅಕ್ಟೋಬರ್ 10 ರಿಂದ ಅಕ್ಟೋಬರ್ 18 ರ ತನಕ ಸೌಜನ್ಯ ನ್ಯಾಯ ಸಪ್ತಾಹ ಆಚರಿಸಲು ಕರೆ ನೀಡಿದೆ. ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಧರಣಿ, ಪ್ರತಿಭಟನೆ, ವಿಚಾರ ಸಂಕಿರಣ, ಮನವಿ ಸಲ್ಲಿಕೆ, ಪುಸ್ತಕ ಬಿಡುಗಡೆ, ಹೋರಾಟದ ಹಾಡುಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 9 ರಂದು ಸೌಜನ್ಯ ಅತ್ಯಾಚಾರ, ಕೊಲೆ ನಡೆದ ದಿನವಾಗಿದ್ದು, ಅಕ್ಟೋಬರ್ 18 ರಂದು ಸೌಜನ್ಯಳ ಹುಟ್ಟುಹಬ್ಬದ ದಿನವಾಗಿದ್ದು, ಆದ್ದರಿಂದ ಸೌಜನ್ಯ ಹತ್ಯೆಯ ದಿನದಿಂದ ಜನ್ಮದಿನದ ವರೆಗೆ ಸೌಜನ್ಯ ನ್ಯಾಯ ಸಪ್ತಾಹ ನಡೆಯಲಿದೆ ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಪ್ರಕಟಣೆ ತಿಳಿಸಿದೆ.