ಸರ್ಕಾರದ ಎಲ್ಲ ಇಲಾಖೆಗಳೂ ಕೆಟ್ಟು ಕೆರೆಹಿಡಿದು ಹೋಗಿರುವಂತೆ ಆರೋಗ್ಯ ಇಲಾಖೆಯು ಹದಗೆಟ್ಟಿದೆ. ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ನರಕವಾಗಿವೆ. ತಾಲ್ಲೂಕು ಆಸ್ಪತ್ರೆಗಳ ಅವ್ಯವಸ್ಥೆಯಿಂದ ಬಡರೋಗಿಗಳು ಬಾಯಿ ಬಾಯಿ ಬಡಿದುಕೊಳ್ಳುವಂತಾಗಿದೆ. ಇಡೀ ಆರೋಗ್ಯ ವ್ಯವಸ್ಥೆಯೇ ರೋಗಗ್ರಸ್ತವಾಗಿದ್ದರೂ ರಾಜ್ಯ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ರಾಜ್ಯದಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 2,844 ಆಸ್ಪತ್ರೆಗಳಿವೆ. ಮಂಜೂರಾದ 6,563 ವೈದ್ಯರ ಹುದ್ದೆಗಳಿವೆ. ಈ ಪೈಕಿ 2,269 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಸಿಬ್ಬಂದಿ ಪೈಕಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರೇ ಹೆಚ್ಚು ಮಂದಿ ಇದ್ದಾರೆ. ಹೀಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡವರು ತಪ್ಪು ಎಸಗಿದಾಗ, ಕರ್ತವ್ಯದಲ್ಲಿ ಅಸಡ್ಡೆ ತೋರಿದಾಗ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ದಾರಿಗಳು ಕಡಿಮೆ. ಸರ್ಕಾರಿ ನೌಕರರಾದರೆ ಹಲವು ರೀತಿಯ ಕ್ರಮಗಳಿಗೆ ಅವರನ್ನು ಗುರಿಪಡಿಸುವ ಅವಕಾಶ ಇರುತ್ತದೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು, ಜನರಲ್ ಫಿಜಿಷಿಯನ್, ಮೂಳೆ ತಜ್ಞರು ಇಂತಹ ಹುದ್ದೆಗಳಿಗಾದರೂ ಖಾಯಂ ಆಗಿ ನೇಮಕ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ರೋಗಿಗಳ ಜೀವಕ್ಕೆ ಖಾತರಿ ನೀಡಲು ಸಾಧ್ಯ.

ಕರ್ನಾಟಕವಲ್ಲದೆ ಭಾರತದ ಎಲ್ಲೆಡೆ ನಗರ ಪ್ರದೇಶ ಮಾತ್ರವಲ್ಲ ಹಳ್ಳಿಗಾಡಿನ ಬಡವರು, ರೈತರು ತಮಗೆ ಬರುವ ಕಾಯಿಲೆ-ಕಸಾಲೆಗಳಿಗೆ ಚಿಕಿತ್ಸೆ ಪಡೆಯಲು ಬಹುತೇಕ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಆದರೆ ಚಿಕಿತ್ಸೆಗೆಂದು ಬರುವ ಬಡವರಿಗೆ, ಜನಸಾಮಾನ್ಯರಿಗೆ ಚಿಕಿತ್ಸೆ ನೀಡುವ, ಸೂಕ್ತ ಆರೈಕೆ ಮಾಡುವ ಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲ. ಎಲ್ಲ ಕಡೆ ಸರಕಾರಿ ಆಸ್ಪತ್ರೆಗಳಿಗೆ ಕಟ್ಟಡಗಳಿವೆ. ಆದರೆ ಅಲ್ಲಿ ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ ಇರುವುದಿಲ್ಲ. ಚಿಕಿತ್ಸೆಗೆ ಬೇಕಾದ ಸಾಧನ ಸಲಕರಣೆಗಳು ಇರುವುದಿಲ್ಲ. ರೋಗ ಪತ್ತೆ ಹಚ್ಚುವ ಪರೀಕ್ಷಾ ವ್ಯವಸ್ಥೆ ಇರುವುದಿಲ್ಲ. ಅವಶ್ಯ ಇರುವಷ್ಟು ಹಾಸಿಗೆಗಳು, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಕೊಠಡಿ, ತೀವ್ರ ನಿಗಾ ಘಟಕ, ಔಷಧಿ ಸಂಗ್ರಹ ಇದ್ಯಾವುದೂ ಇರುವುದಿಲ್ಲ.
ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ತಜ್ಞ ವೈದ್ಯರ ಕೊರತೆ ಶೇಕಡಾ 52 ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ವೈದ್ಯರು ನಿರಾಕರಿಸುವುದರಿಂದ ವೈದ್ಯರಿಗಾಗಿ ಕಟ್ಟಿಸಿರುವ ಮನೆಗಳು ಖಾಲಿ ಉಳಿದಿದೆ. ವೈದ್ಯರು ಮಾತ್ರವಲ್ಲ ನರ್ಸ್ ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ಹೀಗಾಗಿ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳನ್ನು ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗ ಹಾಕುವುದು ಸರಿಯಲ್ಲ. ಈ ಅಲೆದಾಟದಲ್ಲಿ ರೋಗಿಯ ಕಾಯಿಲೆ ಉಲ್ಬಣಗೊಳ್ಳುತ್ತದೆ ಎಂಬುವುದು ಆತಂಕದ ಸಂಗತಿಯಾಗಿದೆ.

ಪ್ರತೀ ಹತ್ತು ಸಾವಿರ ಜನರಿಗೆ ಒಂಭತ್ತು ವೈದ್ಯರು ಸೇವೆಗೆ ಲಭ್ಯವಿರಬೇಕು. ಆದರೆ ಬಹುತೇಕ ಜಿಲ್ಲೆಗಳಲ್ಲಿ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಕೇವಲ ಒಬ್ಬ ವೈದ್ಯರಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೇವಲ ಹೆಸರಿಗೆ ಮಾತ್ರ ಇದೆ. ಈ ಬಗ್ಗೆ ಆರೋಗ್ಯ ಸಚಿವರು ಗಮನಹರಿಸಬೇಕಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕೆಂದರೆ ಮೊತ್ತ ಮೊದಲಿಗೆ ಎಲ್ಲಾ ಗ್ರಾಮಗಳ ಆರೋಗ್ಯ ಸೌಲಭ್ಯದ ಸ್ಥಿತಿಗತಿ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲಿ. ಯಾವ ಊರಿನಲ್ಲಿ ಏನು ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಲಿ. ಈ ಕೊರತೆ ನಿವಾರಿಸಲು ಕಾಲಮಿತಿಯಲ್ಲಿ ನೀಲನಕ್ಷೆಯನ್ನು ರೂಪಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಎಷ್ಟು ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದರೆ ಅಲ್ಲಿ ಒಳರೋಗಿಯನ್ನು ಸೇರಿಸಲು ಹಿಂಜರಿಯಲಾಗುತ್ತಿದೆ. ಕಾರಣ ಹಾಸಿಗೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಎಂಬುದು ಸ್ಪಷ್ಟ.
ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ ಹೀಗಿರಬೇಕು ಎಂದು ಸರಕಾರವೇ ಅದಕ್ಕೊಂದು ಮಾನದಂಡವನ್ನು ರೂಪಿಸಿದೆ. ಆದರೆ ವಾಸ್ತವವಾಗಿ ಆ ಮಾನದಂಡದ ಪ್ರಕಾರ ಸುಸಜ್ಜಿತವಾದ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಿಗುವುದಿಲ್ಲ. ಇಂಥ ಅವ್ಯವಸ್ಥೆಯ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಲು ಸರಕಾರ ಚುರುಕಿನ ಕ್ರಮವನ್ನು ಕೈಗೊಳ್ಳಬೇಕಿದೆ. ಇನ್ನೊಂದು ಅಂಶವೆಂದರೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಖರೀದಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯರ ಮನವೊಲಿಸಿ ಕಳಿಸಿ ಕೊಡಬೇಕು.

ಸಾರ್ವಜನಿಕ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲದಂತೆ ನಿರ್ವಹಿಸಬೇಕು. ಇದಕ್ಕೆ ಬೆಂಗಳೂರಿನ ಜಯದೇವ ಹೈದ್ರೋಗ ಆಸ್ಪತ್ರೆ ಒಂದು ಉದಾಹರಣೆಯಾಗಿದೆ. ಆರೋಗ್ಯ, ಶಿಕ್ಷಣ ಇವುಗಳು ಜನತೆಯ ಹಕ್ಕುಗಳು. ಅದರಲ್ಲೂ ಸಾರ್ವಜನಿಕ ಆರೋಗ್ಯ ಕ್ಷೇತ್ರ ಲಾಭಕ್ಕಾಗಿ ನಡೆಯುವ ಉದ್ದೇಶ ಹೊಂದಿರಬಾರದು. ಪ್ರಜೆಗಳ ಆರೋಗ್ಯ ರಕ್ಷಣೆ, ಸೇವೆ ಅವುಗಳ ಕರ್ತವ್ಯವಾಗಬೇಕು.
