ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು ಪೂರೈಕೆದಾರರ ಬಂಧನ, 50 ಲಕ್ಷ ರೂ. ಮೌಲ್ಯದ 517.76 ಗ್ರಾಂ ಎಂಡಿಎಂಎ ವಶ

ಕರಾವಳಿ

ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 50 ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ. ಮಾದಕ ದ್ರವ್ಯವನ್ನು ಮಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

ಮಂಗಳೂರು ನಗರ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರ ತಂಡವು ಖಚಿತ ಮಾಹಿತಿ ಮೇರೆಗೆ ಇಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವಿನ್ಷನ್ ಹಾಲ್ ಬಳಿ ಒಂದು ಕಾರಿನಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ದಾಳಿ ನಡೆಸಿ ಮೊಹಮ್ಮದ್ ಶಿಯಾಬ್ @ ಶಿಯಾಬ್ , ನಾವುಂದ ಕುಂದಾಪುರ, ಮೊಹಮ್ಮದ್ ನೌಷದ್ @ ನೌಷದ್, ನರಿಂಗಾನ ಉಳ್ಳಾಲ, ಇಮ್ರಾನ್ @ ಇಂಬ, ಕಸಬಾ ಬೆಂಗ್ರೆ, ನಿಸಾರ್ ಅಹಮ್ಮದ್ @ ನಿಸಾರ್, ಬ್ರಹ್ಮರ ಕೊಟ್ಲು ಬಂಟ್ವಾಳ ಎಂಬ ನಾಲ್ಕು ಜನರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಸುಮಾರು 50 ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ MDMA ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ರೂ. ಮೌಲ್ಯದ ನೀಲಿ ಬಣ್ಣದ ಮಾರುತಿ FRONX, KA-70 M -7115 ಕಾರು, ಹಾಗೂ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಗಳು ಬೆಂಗಳೂರಿನಲ್ಲಿರುವ ನೈಜೀರಿಯಾ ದೇಶದ ಪ್ರಜೆಯಿಂದ ಮಾದಕ ವಸ್ತು ತಂದು ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿರುತ್ತದೆ. ಸದ್ರಿ ಆರೋಪಿತರ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 124/2025 ಕಲಂ:22(ಸಿ) , 21(C) ಎನ್.ಡಿ.ಪಿ.ಎಸ್. ಕಾಯ್ದೆ ಜೊತೆಗೆ 3(5) ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.