ಅಧಿಕಾರದ ಜಟಾಪಟಿಯ ನಡುವೆ, ಮೊದಲ ಬಾರಿಗೆ ಆಯ್ಕೆಯಾದ ಯುವ ಶಾಸಕರು, ಹಿರಿಯ ಶಾಸಕರು ಸಿಡಿದೆದ್ದು ಪಕ್ಷದ ಹೈಕಮಾಂಡ್‌ ಗೆ ಪತ್ರ ಬರೆದು ಹೊಸ ಸಂಚಲನ

ರಾಷ್ಟ್ರೀಯ

ಅಧಿಕಾರ ಹಂಚಿಕೆಯ ಜಟಾಪಟಿಯ ನಡುವೆಯೇ ಕಾಂಗ್ರೆಸ್ ನಲ್ಲಿ ಮೊದಲ ಬಾರಿಗೆ ಆಯ್ಕೆಯಾದವರು ಹಾಗೂ ಹಿರಿಯ ಶಾಸಕರು ಪಕ್ಷದ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿದ್ದು ಸಂಚಲನ ಸೃಷ್ಟಿಸಿದ್ದಾರೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಿಡಿದೆದ್ದಿರುವ ಶಾಸಕರು ನೇರವಾಗಿ ರಾಹುಲ್‌ ಗಾಂಧಿ, ಸುರ್ಜೇವಾಲಾ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರಿಗೂ ಪತ್ರ ಬರೆದು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಸಂಪುಟ ಪುನರ್‌ ರಚನೆಯ ವಿಚಾರದಲ್ಲಿ ಹೈಕಮಾಂಡ್‌ನ ವಿಳಂಬಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಯುವ ಶಾಸಕರಿಗೆ ಅದರಲ್ಲೂ ಮೊದಲ ಬಾರಿಗೆ ಚುನಾಯಿತರಾಗಿರುವವರಿಗೆ ಸಂಪುಟದಲ್ಲಿ ಅವಕಾಶ ನೀಡಿ. ಯುವಕರಿಗೆ ಆದ್ಯತೆ ನೀಡುವುದನ್ನು ಗಮನಿಸಬೇಕು. ಇದು ಮುಂಬರುವ ಚುನಾವಣೆಗೆ ಸಹಕಾರಿಯಾಗಲಿದೆ. ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು. ಎಲ್ಲ ರಾಜ್ಯಗಳ ಸರ್ಕಾರಗಳಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಯುವ ಶಾಸಕರು ಮಂತ್ರಿಗಳಾಗಿದ್ದಾರೆ. ಹೀಗಾಗಿ ಕನಿಷ್ಠ ಐದು ಜನರಿಗೆ ಸಚಿವ ಸ್ಥಾನ ನೀಡಬೇಕೆಂದು ಪತ್ರದಲ್ಲಿ ಶಾಸಕರು ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ ಮೊದಲ ಬಾರಿಗೆ 38 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯುವಕರಿಗೆ ಅವಕಾಶ ನೀಡುವುದು ಈ ಕ್ಷಣದ ಬೇಡಿಕೆಯಾಗಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬರೆಯಲಾಗಿರುವ ಪತ್ರದಲ್ಲಿ ಕಾಂಗ್ರೆಸ್‌ ಶಾಸಕರು ಹಲವು ಮನವಿಗಳನ್ನು ಮಾಡಿದ್ದಾರೆ. ಆದರೆ ಡಿಸೆಂಬರ್‌ ತಿಂಗಳಿನಲ್ಲಿ ಬರೆದು ಸಹಿಹಾಕಿ ಹೈಕಮಾಂಡ್‌ ನಾಯಕರಿಗೆ ನೀಡಲಾಗಿತ್ತು. ಆದರೆ ಆ ಪತ್ರ ರಾಜ್ಯ ಎಐಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ರಾಜ್ಯದಲ್ಲಿ ಇರುವಾಗಲೇ ಬಹಿರಂಗವಾಗಿದೆ. ಇದು ಕಾಂಗ್ರೆಸ್‌ ಪಕ್ಷದಲ್ಲಿಯೇ ಹೊಸ ರಾಜಕೀಯ ದಾಳ ಉರುಳಿಸಲು ಕಾಂಗ್ರೆಸ್‌ ನಾಯಕರು ಮಾಡಿಕೊಂಡಿರುವ ತಂತ್ರಗಾರಿಕೆಯೇ ಎನ್ನುವ ಪ್ರಶ್ನೆಯು ಉದ್ಭವಿಸಿದೆ.