ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ವರ್ಷಗಳು ಬಾಕಿ ಉಳಿದಿವೆ. ಆದರೆ ಕರಾವಳಿಯ ರಾಜಕಾರಣದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದೆ. ಅದರಲ್ಲೂ ಬಿಜೆಪಿಯಲ್ಲಂತೂ ರಾಜಕೀಯ ಚರ್ಚೆಗಳು ಜೋರಾಗಿ ಕೇಳಿ ಬರುತ್ತಿದೆ. ಮೂಡಬಿದ್ರೆ, ಬಂಟ್ವಾಳದಲ್ಲಿ ಬಿಜೆಪಿ ಹೊಸ ಮುಖದ ಅನ್ವೇಷಣೆಯಲ್ಲಿದೆ ಅನ್ನುವ ಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ಗುಂಯ್ ಗುಡುತ್ತಿದೆ. ಮಂಗಳೂರು ಉತ್ತರದಲ್ಲೂ ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾಯಿಸಿದರೆ ಹೇಗೆ ಅನ್ನುವ ಸಣ್ಣ ಚರ್ಚೆಗಳು ನಡೆಯುತ್ತಿದೆ. ಅದರ ನಡುವೆ ಕೈಯಾರೆ ಪಕ್ಷವನ್ನು ಬಲಿಕೊಟ್ಟ ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಪತಾಕೆ ಹಾರಿಸಲು ಬಿಜೆಪಿಯೊಳಗಡೆ ಶತಪ್ರಯತ್ನ ನಡೆಯುತ್ತಿದೆ.
ಪುತ್ತೂರು ಹೇಳಿ ಕೇಳಿ ಹಿಂದುತ್ವದ ತವರೂರು. ಸಂಘಪರಿವಾರದ ಪ್ರಭಾವಿ ನಾಯಕರನ್ನು ಒಳಗೊಂಡ ಕ್ಷೇತ್ರ. ಅಂತಹ ಪುತ್ತೂರಿನಲ್ಲಿ ಕಳೆದ ಬಾರಿ ಬಿಜೆಪಿ ತನ್ನ ಎಡವಟ್ಟಿನಿಂದಾಗಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಬಿಜೆಪಿಯಿಂದ ಹೊರಬಂದ ಪುತ್ತಿಲ ಪರಿವಾರ ಬಿಜೆಪಿಗೆ ಠಕ್ಕರ್ ಕೊಟ್ಟಿತ್ತು. ಬಂಡಾಯವಾಗಿ ಸ್ಪರ್ದಿಸಿದ್ದ ಅರುಣ್ ಕುಮಾರ್ ಪುತ್ತಿಲ ಕೆಲವೇ ಸಾವಿರ ಮತಗಳಿಂದ ಸೋತಿದ್ದರು. ಪುತ್ತಿಲ ಸ್ಪರ್ಧೆಯಿಂದ ಕಾಂಗ್ರೆಸ್ ನಲ್ಲಿ ಅಶೋಕ್ ರೈ ಶಾಸಕರಾಗುವ ಯೋಗ ಕೂಡಿ ಬಂತು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಬಗ್ಗೆ ಬಿಜೆಪಿಯಲ್ಲೇ ದೊಡ್ಡ ಅಪಸ್ವರ ಕೇಳಿಬಂದಿತ್ತು. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಕಟೀಲ್ ಇಮೇಜಿಗೆ ದೊಡ್ಡ ಹೊಡೆತ ಕೊಟ್ಟಿತ್ತು. ಕಟೀಲು ವಿರುದ್ಧವೇ ಬಿಜೆಪಿಗರು ರಂಗಕ್ಕಿಳಿದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾರ್ಯಕರ್ತರ ಕಡೆಗಣನೆ ಕಟೀಲಿಗೆ ದೊಡ್ಡ ಹೊಡೆತ ನೀಡಿತ್ತು. ಕಟೀಲರಿಗೆ ಪರ್ಯಾಯವಾಗಿ ಪುತ್ತಿಲ ಜನಮಾನಸದಲ್ಲಿ ಪ್ರಜ್ವಲಿಸಿದರು. ಕಟೀಲು ಟಿಕೆಟ್ ತಪ್ಪಿದರೂ ಬಿಜೆಪಿ ವಿರುದ್ಧ ಹೋಗದೆ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳಿರುವುದು ಅವರ ರಾಜಕೀಯ ಚಾಣಾಕ್ಷತೆಯನ್ನು ಎತ್ತಿ ತೋರಿಸಿತ್ತು. ಬಿಜೆಪಿಯಲ್ಲೇ ಕಟೀಲ್ ವಿರುದ್ಧ ಟೀಂ ಇದ್ದರೂ, ಅವರ ಪಕ್ಷ ನಿಷ್ಠೆಯ ಬಗ್ಗೆ ಯಾರಿಗೂ ತಕರಾರಿಲ್ಲ.
ಕಳೆದ ಬಾರಿ ಅರುಣ್ ಕುಮಾರ್ ಪುತ್ತಿಲ ವರ್ಚಸ್ಸು ನಳಿನ್ ಕುಮಾರ್ ಕಟೀಲ್ ರಾಜಕೀಯ ಹಿನ್ನೆಡೆಗೆ ಕಾರಣವಾಗಿತ್ತು. ರಾಜಕಾರಣ ಅನ್ನುವುದು ಹರಿಯುವ ನೀರು ಇದ್ದಂತೆ, ಇಂದು ಇರುವ ಹಾಗೆ ನಾಳೆ ಇರುವುದಿಲ್ಲ. ಪುತ್ತಿಲ ವರ್ಚಸ್ಸು ಡ್ಯಾಮೇಜ್ ಆಗಿದೆ. ಕಳೆದ ಬಾರಿಯಂತೆ ಈ ಬಾರಿ ಪುತ್ತಿಲ ಐಕಾನ್ ಆಗಿ ಮೆರೆಯುತ್ತಿಲ್ಲ. ಪುತ್ತಿಲ ಪರಿವಾರವೇ ಹೋಳು ಹೋಳಾಗಿ ಹೋಗಿದೆ. ಕಟೀಲು ವಿರುದ್ಧ ಇದ್ದವರೆಲ್ಲರೂ ಈಗ ಕಟೀಲ್ ಪರ ಮಾತನಾಡುತ್ತಿದ್ದಾರೆ. ಕಟೀಲು ವಿರೋಧಿಸುತ್ತಿದ್ದ ಗುಂಪೇ ಈ ಬಾರಿ ಪುತ್ತೂರಿಗೆ ಕಟೀಲ್ ಅಭ್ಯರ್ಥಿ ಮಾಡುವ ತಂತ್ರ ರೂಪಿಸುತ್ತಿದ್ದಾರೆ.
ರಾಜಕಾರಣದಲ್ಲಿ ಒಂದೊಂದು ನಡೆ ಕೂಡ ಅವರ ಭವಿಷ್ಯತ್ತಿಗೆ ರಹದಾರಿ. ಒಂದು ತಪ್ಪು ಹೆಜ್ಜೆ ಅವರ ರಾಜಕೀಯ ಭವಿಷ್ಯವನ್ನೇ ನಿರ್ನಾಮ ಮಾಡಬಹುದು. ಒಂದೊಮ್ಮೆ ಕರಾವಳಿಯಲ್ಲಿ ಹಿಂದುತ್ವದ ಶಕ್ತಿಯಾಗಿ ಮಿಂಚಿ ಮಂತ್ರಿಯಾಗಿದ್ದ ನಾಗರಾಜ್ ಶೆಟ್ಟಿ ನಂತರ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡದ್ದು ಅವರ ರಾಜಕೀಯ ಅವಸಾನಕ್ಕೆ ಕಾರಣವಾಗಿತ್ತು. ನಳಿನ್ ಕುಮಾರ್ ಕಟೀಲ್ ಟಿಕೆಟ್ ತಪ್ಪಿದರೂ, ಬಿಜೆಪಿಯಿಂದ ಮೂಲೆಗುಂಪಾದರೂ ಬಿಜೆಪಿ ತೊರೆಯುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಕಟೀಲರ ಈ ನಿರ್ಧಾರ ಕಾರ್ಯಕರ್ತರ ನಡುವೆ ಉತ್ತಮ ಅಭಿಪ್ರಾಯಕ್ಕೆ ಕಾರಣವಾಗಿದೆ.

ಸದ್ಯ ಪುತ್ತೂರಿನಲ್ಲಿ ಅಶೋಕ್ ರೈ ಹವಾ ಜೋರಾಗಿ ಕೇಳಿ ಬರುತ್ತಿದೆ. ಯಂಗ್ ಅಂಡ್ ಡೈನಾಮಿಕ್ ಇಮೇಜ್, ಅಭಿವೃದ್ಧಿಯ ಕಾರಣಕ್ಕೆ ಸುದ್ಧಿಯಾಗುತ್ತಿದ್ದಾರೆ. ಕಳೆದ ಬಾರಿ ಬಿಜೆಪಿಯೊಳಗಡೆ ನಡೆದಿದ್ದ ಬಣ ರಾಜಕಾರಣ ಅಶೋಕ್ ರೈ ಗೆ ಲಕ್ ಹೊಡೆಯುವಂತೆ ಮಾಡಿತ್ತು. ಕಳೆದ ಬಾರಿ ಬಿಜೆಪಿಯೊಳಗಡೆ ಬುಸುಗುಡುತ್ತಿದ್ದ ಬಣ ರಾಜಕಾರಣ ಈ ಬಾರಿ ಕಾಂಗ್ರೆಸ್ ಗೆ ಶಿಫ್ಟಾಗಿದೆ. ಅಶೋಕ್ ರೈ ನಿಷ್ಠಾವಂತ ಕಾಂಗ್ರೆಸ್ ನಾಯಕರನ್ನು ಕಡೆಗಣಿಸುತ್ತಿದ್ದಾರೆ, ಬಿಜೆಪಿಯಿಂದ ಪಕ್ಷ ತೊರೆದು ಬಂದವರಿಗೆ ಮಣೆ ಹಾಕುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬರತೊಡಗಿದೆ. ಅಲ್ಪಸಂಖ್ಯಾತ ವರ್ಗದ ಕಡೆಗಣನೆಯೂ ಜೋರಾಗಿ ಕೇಳಿ ಬರುತ್ತಿದೆ.
ಈ ನಡುವೆ ಬಿಜೆಪಿ ಒಗ್ಗಟ್ಟಾಗಿ ನಳಿನ್ ಕುಮಾರ್ ಕಟೀಲ್ ಅವರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದರೆ ರೈ ಗೆ ಠಕ್ಕರ್ ಕೊಡಬಹುದು. ತೆರೆಮರೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಜೊತೆಯೂ ಉತ್ತಮ ಒಡನಾಟ ಇರುವುದರಿಂದ ರೈ ವಿರೋಧಿ ಅಲ್ಪಸಂಖ್ಯಾತರು ಕೈ ಹಿಡಿಯಬಹುದು ಅನ್ನುವ ಚಿಂತನೆಯಲ್ಲಿದ್ದಾರೆ. ಕಟೀಲು ಕೂಡ ಪುತ್ತೂರಿನಲ್ಲಿ ಸ್ಪರ್ಧಿಸುವ ಒಲವು ಹೊಂದಿದ್ದು, ಈಗಾಗಲೇ ಕ್ಷೇತ್ರಾದ್ಯಂತ ಪ್ಲೆಕ್ಸ್ ಗಳು ರಾರಾಜಿಸುತ್ತಿದೆ. ಪುತ್ತೂರಿನಲ್ಲಿ ಕಟೀಲ್ ಸ್ಪರ್ಧೆ ಸುದ್ದಿ ಭಾರೀ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
