ಪುತ್ತೂರು : ಆರು ವರ್ಷಗಳ ಹಿಂದಿನ ಪ್ರಕರಣದ ಆರೋಪಿ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕುದ್ರಡ್ಕ ನಿವಾಸಿ ಪ್ರಶಾಂತ್ ಯಾನೆ ನಾರಾಯಣ ಎಂಬವರನ್ನು ಜಿಲ್ಲಾ ನ್ಯಾಯಾಲಯವು ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ.
ದಿನಾಂಕ 26.12.2017 ರಂದು ಬೆಳ್ತಂಗಡಿ ತಾಲೂಕು,ಮಚ್ಚಿನ ಗ್ರಾಮದ ಕುದ್ರಡ್ಕ ಎಂಬಲ್ಲಿ ರಾತ್ರಿ ವೇಳೆಯಲ್ಲಿ ಆರೋಪಿಯನ್ನಲಾಗಿದ್ದ ಪ್ರಶಾಂತ್ ಯಾನೆ ನಾರಾಯಣ ಎಂಬವರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 417,376(2),506 ಮತ್ತು ಪೋಕ್ಸೋ ಕಾಯ್ದೆಯ ಕಲಂ 6 ರ ಅನ್ವಯದಂತೆ ಪ್ರಕರಣ ದಾಖಲಿಸಿ, ಆರೋಪಿ ಎನ್ನಲಾಗಿದ್ದ ಪ್ರಶಾಂತ್ ಯಾನೆ ನಾರಾಯಣನನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿ,ಆರೋಪಿಯ ವಿರುದ್ಧ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ,ಮಂಗಳೂರಿನ ಎರಡನೇ ಜಿಲ್ಲಾ ನ್ಯಾಯಾಲಯದಲ್ಲಿದ್ದ ಈ ಪ್ರಕರಣವು,ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿ, ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಸುಮಾರು 22 ಸಾಕ್ಷಿಗಳ ಪೈಕಿ 16 ಸಾಕ್ಷಿಗಳನ್ನು ತನಿಖೆ ನಡೆಸಿ,ದೂರಿನ ಸಲ್ಲಿಕೆಯಲ್ಲಿನ ವಿಳಂಬ,ಬಾಲಕಿಯ ವಯಸ್ಸಿನ ಕುರಿತ ವೈರುದ್ಯ ಹೇಳಿಕೆ,ಸೂಕ್ತ ವೈಜ್ಞಾನಿಕ ಸಾಕ್ಷ್ಯಧಾರ ಮತ್ತು ದಾಖಲೆಗಳ ಕೊರತೆ,ತನಿಖೆಯಲ್ಲಿನ ವಿರೋಧಾಬಾಸಗಳು,ಇವುಗಳ ಹಿನ್ನೆಯಲ್ಲಿ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿ, ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತರಾಜು ಎಸ್.ವಿ ರವರು ಆರೋಪಿಯನ್ನು ನಿರ್ದೋಷಿ ಎಂದು ತೀರ್ಮಾನಿಸಿ,ಸದ್ರಿ ಪ್ರಕರಣದ ಆರೋಪಿ ಪ್ರಶಾಂತ್ ಯಾನೆ ನಾರಾಯಣ ಎಂಬವರನ್ನು ಖುಲಾಸೆಗೊಳಿಸಿರುತ್ತಾರೆ.
ಆರೋಪಿ ಪರ ಪುತ್ತೂರಿನ “ಕಜೆ ಲಾ ಚೇಂಬರ್ಸ್”ಇದರ ಮುಖ್ಯಸ್ಥರಾದ ಖ್ಯಾತ ನಾಯವಾದಿ ಶ್ರೀ ಮಹೇಶ್ ಕಜೆ ಮತ್ತು ಮಂಗಳೂರಿನ ಶ್ರೀ ರಾಜೇಶ್ ರೈಯವರು ವಾದಿಸಿದ್ದರು.