ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕರಾವಳಿ

ಲಿಪ್ಟಿ ಸಪ್ಪಾನ್ ಕೊಲೆ ಪ್ರಕರಣದ ಆರೋಪಿ; ಕುಖ್ಯಾತ ರೌಡಿಶೀಟರ್ ಸಪ್ಪಾನ್ ಹುಸೇನ್‌ನ ಸಹಚರ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ನೇ ಇಸವಿಯಲ್ಲಿ ಲಿಪ್ಟಿ ಸಪ್ಪಾನ್ ಎಂಬಾತನನ್ನು ಅಪಹರಿಸಿ, ಕೊಲೆ ಮಾಡಿದ ಪ್ರಕರಣದಲ್ಲಿ ಸುಮಾರು 9 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೂಫಿಯಾನ್ @ ಕೊಟ್ರೇಶಿ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜೆ.ಹಳ್ಳಿ ಶ್ಯಾಂಪುರ ರೈಲ್ವೇ ಗೇಟ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೂಫಿಯಾನ್ @ ಕೊಟ್ರೇಶಿ, ಸಭಾಪತಿ ಬೀದಿ, ಬಳ್ಳಾರಿ ಜಿಲ್ಲೆ. ಪ್ರಸ್ತುತ ವಿಳಾಸ: ಮೊಹಮ್ಮದ್ ಸೂಫಿಯಾನ್ ಹುಸೇನ್ @ ಕೊಟ್ರೇಶಿ, ನಂ.20, ಎರಡನೇ ಮಹಡಿ, ಎ ಬ್ಲಾಕ್, ಶ್ಯಾಂಪುರ ಬೇಕರಿ ಹತ್ತಿರ, ರೈಲ್ವೇ ಗೇಟ್, 5ನೇ ಕ್ರಾಸ್, ಅರೇಬಿಕ್ ಕಾಲೇಜ್ ಪೋಸ್ಟ್, ಬೆಂಗಳೂರು ಉತ್ತರ, ಬೆಂಗಳೂರು. ಈತನು ಕುಖ್ಯಾತ ರೌಡಿಶೀಟರ್ ಸಪ್ಪಾನ್ ಹುಸೇನ್‌ನ ಸಹಚರನಾಗಿದ್ದು, 2017ನೇ ಇಸವಿಯಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಪ್ಪಾನ್ ಹುಸೇನ್ ಹಾಗೂ ಆತನ ಸಹಚರರೊಂದಿಗೆ ಸೇರಿಕೊಂಡು ಲಿಪ್ಟಿ ಸಪ್ಪಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ, ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿ ನಂತರ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದನು.

ಈತನು ಗುಲ್ಬರ್ಗಾ, ಬಳ್ಳಾರಿ, ಮುಂಬೈ ಹಾಗೂ ಆಂಧ್ರಪ್ರದೇಶದ ಹಲವು ಪ್ರದೇಶಗಳಲ್ಲಿ ತಲೆಮರೆಸಿಕೊಂಡು ನಂತರ ಬೆಂಗಳೂರಿನಲ್ಲಿ ತನ್ನ ಹೆಸರು ಮೊಹಮ್ಮದ್ ಹುಸೇನ್ ಎಂದು ಬದಲಿಸಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಮಾಡಿಕೊಂಡು ಬೆಂಗಳೂರಿನ ಯುವತಿಯನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದನು. ಈತ 2012 ರಲ್ಲಿ ಬಳ್ಳಾರಿ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು ಮಾಡುವ ವೇಳೆ ತನ್ನ ಗುರುತು ತಿಳಿದುಬಂದ ಕಾರಣ ಆಕೆಯ ನ್ನು ಕುತ್ತಿಗೆ ಹಿಸುಕಿಕೊಂಡು ಕೊಲೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 4 ವರ್ಷಗಳ ಕಾಲ ಬಳ್ಳಾರಿ ಜೈಲಿನಲ್ಲಿ ಇದ್ದನು. ಆ ಸಮಯದಲ್ಲಿ ಸಪ್ಪಾನ್ ಹುಸೇನ್ ಮತ್ತು ಆತನ ಸಹಚರರ ಪರಿಚಯವಾಗಿ ಅವರ ಸಹಾಯದಿಂದ ಜಾಮೀನು ಪಡೆದು ನಂತರ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಕೊಟ್ರೇಶಿ ಎಂಬ ಹೆಸರನ್ನು ಸೂಫಿಯಾನ್ ಎಂದು ಬದಲಿಸಿಕೊಂಡಿದ್ದನು.

ನಂತರ ಸಪ್ಪಾನ್ ಹುಸೇನ್ ಹಾಗೂ ಸಹಚರರ ತಂಡದಲ್ಲಿ ಸೇರಿಕೊಂಡು 2017ನೇ ಇಸವಿಯಲ್ಲಿ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿಯೂ ಭಾಗಿಯಾಗಿದ್ದನು. ಈ ಪ್ರಕರಣದಲ್ಲಿಯೂ ದಸ್ತಗಿರಿ ಆಗದೆ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಬಳ್ಳಾರಿಯ ಹೊಸಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿಯೂ ಭಾಗಿಯಾಗಿದ್ದು, ಆರೋಪಿ ಸೂಫಿಯಾನ್ @ ಕೊಟ್ರೇಶಿ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಸುರತ್ಕಲ್‌ನ ಲಿಪ್ಟಿ ಸಪ್ಪಾನ್ ಕೊಲೆ ಪ್ರಕರಣ, ಬಳ್ಳಾರಿ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವೃದ್ಧೆಯ ಕೊಲೆ ಪ್ರಕರಣ, ಹೊಸಪೇಟೆಯಲ್ಲಿ ಬೈಕ್ ಕಳವು ಪ್ರಕರಣ, ಬಜ್ಪೆ ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಹಣ ವಸೂಲಿ ಮಾಡಿದ ಪ್ರಕರಣ.

ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸಿಸಿಬಿ ಪೊಲೀಸರು ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ.