ಕಾಂಗ್ರೆಸ್ ಪಕ್ಷಕ್ಕೆ ದ.ಕ. ಜಿಲ್ಲಾ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ

ಕರಾವಳಿ

ಈ ಹಿಂದಿನ ಎಲ್ಲಾ ನೋವುಗಳನ್ನು ಬಿಟ್ಟು, ಈ ರಾಜ್ಯದ ಮುಸ್ಲಿಂ ಮತದಾರರು ಶೇಕಡ 88 ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ತಮಗೆಲ್ಲಾ ಅಧಿಕಾರ ಕೊಟ್ಟಿದ್ದಾರೆ. ತಮಗೆ ಅಧಿಕಾರ ಸಿಕ್ಕಿದ್ದೆ ಹೊರತು ಈ ರಾಜ್ಯದ ಮುಸ್ಲಿಂ ಜನಪ್ರತಿನಿಧಿಗಳಿಗೆ, ಕಾರ್ಯಕರ್ತರಿಗೆ ಯಾವುದೇ ರೀತಿಯ ಅಧಿಕಾರ ಬಿಡಿ, ಈ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿಲ್ಲ. ಇದಕ್ಕೆಲ್ಲಾ ಕಾರಣ ಈ ರಾಜ್ಯದಲ್ಲಿ ಪರ್ಯಾಯ ಜಾತ್ಯತೀತ ಪಕ್ಷ ಇಲ್ಲದೆ ಇರುವುದನ್ನು ಮನಗಂಡು, ಈ ಸಮುದಾಯದ ಬಗ್ಗೆ ಕಾಳಜಿ ಇಲ್ಲದೆ ಇರಬಹುದು ಅನ್ನುವ ಅಭಿಪ್ರಾಯ ಈ ಜಿಲ್ಲೆಯ ಮುಸ್ಲಿಂ ಜನಪ್ರಧಿನಿಧಿಗಳದ್ದು.

ಜಿಲ್ಲೆಯ ಹಿಂದುತ್ವವಾದಿಗಳು ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದರೂ ಜಿಲ್ಲೆಯಲ್ಲಿ ಅವರದೇ ಕಾರುಬಾರು. ತಮ್ಮ ಕೋಮು ರಾಜಕೀಯ ಲಾಭಕ್ಕಾಗಿ ಪ್ರಚೋದನಕಾರಿ ಭಾಷಣ, ಬಹಿರಂಗವಾಗಿ ಮುಸ್ಲಿಮರನ್ನು ಹೀಯಾಳಿಸಿ ಗಲಾಟೆಗೆ ಆಹ್ವಾನಿಸುವುದು, ಮುಸ್ಲಿಮರ ಧರ್ಮದ ಬಗ್ಗೆ, ಪ್ರವಾದಿಯವರ ಬಗ್ಗೆ ಅವಹೇಳನಾಕಾರಿಯಾದ ಮಾತುಗಳನ್ನಾಡಿ ಪ್ರಚೋದನೆ, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮುಸ್ಲಿಮರನ್ನು ಕೆಣಕಿ ಕಾಲ್ಕೆರೆದು ದೊಂಬಿ ಎಬ್ಬಿಸಿ, ಈ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯ ಸ್ವಾಭಿಮಾನದಿಂದ ಬದುಕಲು ತಡೆಯಾಗುತ್ತಿದ್ದು, ನಮ್ಮ ಗ್ರಾಮಗಳಲ್ಲಿ ಮತ ನೀಡಿದ ನಮ್ಮ ಸಮುದಾಯದ ಮತದಾರರಿಗೆ ನಮ್ಮಿಂದ ಉತ್ತರ ಕೊಡಲು ಸಾಧ್ಯವಿಲ್ಲ ಅನ್ನುವುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಇತ್ತೀಚೆಗೆ ನಡೆದ ಕೇರಳ ರಾಜ್ಯದ ವಯನಾಡ್ ಬಳಿಯ ಅಶ್ರಫ್ ಎಂಬ ಮಾನಸಿಕ ಅಸ್ವಸ್ತನನ್ನು ಮುಸ್ಲಿಂ ಎಂಬ ಕಾರಣಕ್ಕೆ ಗುಂಪುಗೂಡಿ, ಕ್ರೂರಿಯಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ ಹಿಂದುತ್ವವಾದಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಪೊಲೀಸ್ ಇಲಾಖೆಯಿಂದ ಇನ್ನೂ ಸಾಧ್ಯವಾಗಿಲ್ಲ ಅನ್ನುವಂಥದು ಬಹಳ ಖೇಧಕರ. ಈ ಪ್ರಕರಣದ ಮುಖ್ಯ ಪ್ರಭಾವಿ ಆರೋಪಿಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದವರು ಸಹಾಯ, ಸಹಕಾರ ನೀಡಿರುವುದು ಬಹಳ ಖೇದಕರದ ಸಂಗತಿ. ಆರೋಪಿಗಳನ್ನು ಬಂಧಿಸುವಲ್ಲಿ ಮೀನಮೇಷ ಮಾಡುವುದನ್ನು ನೋಡಿದರೆ, ಎಲ್ಲೊ ಒಂದು ಕಡೆ ಆರೋಪಿಗಳನ್ನು ರಕ್ಷಿಸುತ್ತಾರೆ ಅನ್ನುವ ಗುಮಾನಿ ಉಂಟಾಗುತ್ತಿದೆ. ಪಾಪ ನತದೃಷ್ಟ ಅಶ್ರಫ್ ಕೊಲೆಯಾದಾಗ ನಮ್ಮ ಪಕ್ಷದ ಯಾವ ಶಾಸಕರುಗಳು, ಸಚಿವರುಗಳು ಬಾರದೆ, ಆ ಕುಟುಂಬಕ್ಕೆ ಸಾಂತ್ವನ ಹೇಳುವಷ್ಟು ಸೌಜನ್ಯ ನಮ್ಮ ಪಕ್ಷಕ್ಕೆ ಇಲ್ಲದಾಯಿತೇ.?

ಮುಸ್ಲಿಮರ ನೋವನ್ನು ಕೇಳುವವರಿಲ್ಲ ಅನ್ನುವ ಮಾತು ಮುಸ್ಲಿಂ ಮತದಾರರಿಂದ ನಮಗೆ ಪ್ರೆಶ್ನೆ ಹಾಕಿ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದರಿಂದ ನಮಗೆ ನಮ್ಮ ನಮ್ಮ ವಾರ್ಡಿನಲ್ಲಿ, ಸಮಾಜದಲ್ಲಿ, ಬೆಲೆ ಇಲ್ಲದಂತಾಗಿದೆ ಅಲ್ಲದೆ ಮುಂದಿನ ಪ್ರತಿ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲದಂತಾಗಿದೆ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ .

ಹಿಂದಿನ ಘಟನೆಗಳನ್ನು ನಾವು ಮೆಲಕು ಹಾಕದೆ ನೇರವಾಗಿ ಹೇಳಬೇಕಾದರೆ, ಇಂತಹ ಘಟನೆಗಳು ನಡೆಯಲು ಕಾರಣ ನಮ್ಮ ಜಿಲ್ಲಾಡಳಿತ. ಇಲ್ಲಿ ನಡೆಯುತ್ತಿರುವ ಸಭೆ-ಸಮಾರಂಭಗಳಲ್ಲಿ ಕೋಮು ಪ್ರಚೋದನೆ ಭಾಷಣಗಳು, ಸವಾಲುಗಳಿಗೆ ಕಡಿವಾಣ ಹಾಕಿ, ಅಂಥವರನ್ನು ಗೂಂಡಾ ಕಾಯ್ದೆಯ ಮುಖೆನ ಕ್ರಮ ಕೈಗೊಂಡಿದ್ದಲ್ಲಿ ಅವರ ಹಿಂದಿನ ಸಾಲಿನ ಗೂಂಡಾ ನಾಯಕರುಗಳಿಗೆ ನಡುಕ ಹುಟ್ಟಿಸಬಹುದಿತ್ತು. ಈ ಜಿಲ್ಲೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿ ಮಾಡಲು ನಮ್ಮ ಸರಕಾರದಿಂದ ಸಾದ್ಯವಾಗಿಲ್ಲದಿರುವುದೇ ಜಾತ್ಯತೀತ ಮತದಾರರಿಗೆ ಬಹಳ ಬೇಸರವಾಗಿರುವುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಈ ಎಲ್ಲಾ ನೋವುಗಳನ್ನು ಮತೊಮ್ಮೆ ನುಂಗಿ ಹೇಳುತ್ತಿದ್ದೇವೆ,
ಹಿಂದುತ್ವವಾದಿಗಳ ಅಟ್ಟಹಾಸಕ್ಕೆ ಬಲಿಯಾದ ನಮ್ಮ ಸಹೋದರ ಮಾನಸಿಕ ಅಸ್ವಸ್ತ ಅಶ್ರಫ್ ರವರ ಕೊಲೆಗೆ ಕಾರಣರಾದ ಬಾಕಿ ಉಳಿದ ಪ್ರಭಾವಿಗಳನ್ನು ರಕ್ಷಿಸದೆ, ಅವರ ಕುಟುಂಬ ನಿರ್ವಹಣೆಗೆ ನಮ್ಮ ಸರಕಾರದಿಂದ ಗರಿಷ್ಟ ಪ್ರಮಾಣದ ಪರಿಹಾರ ಕೊಡುವುದರೊಂದಿಗೆ, ನಿನ್ನೆ ನಡೆದ ಸುಹಾಸ್ ಶೆಟ್ಟಿ ಅಂತಿಮ ಶವ ಮೆರವಣಿಗೆ ಮೂಲಕ ಕೊಂಡೊಯ್ಯುವಾಗ ಅಲ್ಲಲ್ಲಿ ನಡೆದ ಚೂರಿ ಇರಿತ ಹಾಗೂ ಅಹಿತಕರ ಘಟನೆಗೆ ಕಾರಣರಾದ ನಾಯಕರುಗಳ ಹೆಡೆಮುರಿ ಕಟ್ಟಿ ಅವರಿಗೆ ಕಾನೂನಿನ ರಚಿಯನ್ನು ತೋರಿಸಿ, ಜಿಲ್ಲೆಯ ಆಡಳಿತ ನಡೆಸಲು ದಷ್ಟ ಅಧಿಕಾರಿಗಳನ್ನು ನೇಮಿಸಿ, ಜಿಲ್ಲೆಯಲ್ಲಿ ಶಾಂತಿ ನೆಲಸಿ, ಸಮುದಾಯ ನೆಮ್ಮದಿಯ ವಾತಾವರಣದಲ್ಲಿ ಬದುಕುವ ಹಕ್ಕನ್ನು ನೀಡಬೇಕಾಗಿ ತಮ್ಮಲ್ಲಿ ಮನವಿ ಸಲ್ಲಿಸುತ್ತಿದ್ದೇವೆ .

ಕೊನೆಯದಾಗಿ ಈ ಮೇಲಿನ ಮನವಿ ಸ್ವೀಕರಿಸಿ ಖಾಲಿ ಆಶ್ವಾಸನೆಗೆ ನಾವು ಬಗ್ಗದೆ, ಈ ಹಿಂದಿನ ಮನವಿಯಂತೆ ಕಸದ ಬುಟ್ಟಿಗೆ ಸೇರಿದರೆ, ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಮುಸ್ಲಿಂ ಜನಪ್ರತಿನಿಧಿಗಳಾದ ನಾವೆಲ್ಲಾ ಸಾಮೂಹಿಕ ರಾಜೀನಾಮೆ ನೀಡಿ ಮುಂಬರುವ ಪ್ರತಿ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಮಾತ್ರವಲ್ಲದೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಅನ್ನುವ ಎಚ್ಚರಿಕೆಯ ಮಾತನ್ನು ಈ ಮೂಲಕ ಹೇಳುತ್ತಿದ್ದೇವೆ.

ದ.ಕ. ಜಿಲ್ಲಾ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟ