ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಮ್ಮೆ ಇಂತಹ ದಾಳಿ ನಡೆದರೆ ಯಾವುದೇ ಒತ್ತಡಕ್ಕೂ ಮಣಿಯದೆ “ಅನಿಯಂತ್ರಿತ ಪ್ರತಿದಾಳಿ” ನಡೆಸುವುದಾಗಿ ಇರಾನ್ ಸ್ಪಷ್ಟ ಎಚ್ಚರಿಕೆ ನೀಡಿದೆ. ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿ ನಡೆಸಿದರೆ ಗಲ್ಫ್ ಪ್ರದೇಶದ ತೈಲ ಹಾಗೂ ಅನಿಲ ವಲಯವನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಇಸ್ರೇಲ್’ಗೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಈ ಎಚ್ಚರಿಕೆ ನೀಡಿದ್ದು, “ಇಸ್ಲಾಮಿಕ್ ಗಣರಾಜ್ಯದ ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡುವ ಮೂಲಕ ನೀವು ದೊಡ್ಡ ತಪ್ಪು ಮಾಡಿದ್ದೀರಿ. ಅದರ ಪ್ರತಿಕ್ರಿಯೆಯನ್ನು ಈಗಾಗಲೇ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಿದೆ. “ಇದೇ ದಾಳಿ ಮತ್ತೆ ಪುನರಾವರ್ತನೆಯಾದರೆ, ನಿಮ್ಮ ಇಂಧನ ಮೂಲಸೌಕರ್ಯ ಹಾಗೂ ನಿಮ್ಮ ಮಿತ್ರ ರಾಷ್ಟ್ರಗಳ ಮೇಲಿನ ದಾಳಿಗಳು ಸಂಪೂರ್ಣ ನಾಶವಾಗುವವರೆಗೆ ನಿಲ್ಲುವುದಿಲ್ಲ. ಇದೀಗ ನಡೆದಿರುವ ದಾಳಿಗಿಂತ ನಮ್ಮ ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ನಮ್ಮ ಎನರ್ಜಿ ಮೂಲಸೌಕರ್ಯಗಳ ಮೇಲೆ ಮತ್ತೆ ದಾಳಿ ನಡೆದರೆ ಯಾವುದೇ ತಡೆ ಇಲ್ಲದೆ ತೀವ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತೇವೆಂದು ಹೇಳಿದ್ದಾರೆ.
ಈಗಾಗಲೇ ನಡೆದ ಪ್ರತಿದಾಳಿಗಳಲ್ಲಿ ನಮ್ಮ ಶಕ್ತಿಯ “ಸ್ವಲ್ಪ ಭಾಗ”ವನ್ನು ಮಾತ್ರ ಬಳಸಿದ್ದೇವೆ. ಅಂತರರಾಷ್ಟ್ರೀಯ ಒತ್ತಡದಿಂದ ಇದುವರೆಗೆ ನಿಯಂತ್ರಣ ತೋರಿಸಿದ್ದೇವೆ, ಆದರೆ, ಮುಂದಿನ ದಾಳಿಯಲ್ಲಿ ಆ ನಿಯಂತ್ರಣ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಆತಂಕವನ್ನು ಉಂಟುಮಾಡಿದ್ದು, ತೈಲ ಮತ್ತು ಅನಿಲ ಸರಬರಾಜಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಗಲ್ಫ್ ಪ್ರದೇಶದಲ್ಲಿ ಭದ್ರತೆ ಕಠಿಣಗೊಳ್ಳುವ ಜೊತೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
