ಭಾರತೀಯ ಸಂಸದೀಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಪ್ರಸ್ತುತ ಲೋಕಸಭೆಯಲ್ಲಿರುವ 543 ಸದಸ್ಯರ ಬಲವನ್ನು ಬರೋಬ್ಬರಿ 850ಕ್ಕೆ ಏರಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ದಶಕಗಳಿಂದ ಬಾಕಿ ಉಳಿದಿರುವ ‘ಮಹಿಳಾ ಮೀಸಲಾತಿ’ ಕಾನೂನನ್ನು ಜಾರಿಗೊಳಿಸಲು ಮತ್ತು ಹೊಸ ಕ್ಷೇತ್ರ ಪುನರ್ ವಿಂಗಡಣೆಗೆ ಹಾದಿ ಸುಗಮಗೊಳಿಸಲು ಮೋದಿ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.
ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯಂತೆ ಲೋಕಸಭೆಯ ಒಟ್ಟು ಬಲ 850 ಆಗಲಿದೆ. ಇದರಲ್ಲಿ 815 ಸ್ಥಾನಗಳನ್ನು ವಿವಿಧ ರಾಜ್ಯಗಳಿಗೆ ಮತ್ತು 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಮುಂಬರುವ ಏಪ್ರಿಲ್ 16 ರಿಂದ ನಡೆಯಲಿರುವ ಸಂಸತ್ತಿನ ವಿಶೇಷ ಮೂರು ದಿನಗಳ ಅಧಿವೇಶನದಲ್ಲಿ ಈ ಸಂಬಂಧಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಈ ಬದಲಾವಣೆಗಳು 2029 ರ ಲೋಕಸಭಾ ಚುನಾವಣೆಯಿಂದ ಜಾರಿಗೆ ಬರುವ ನಿರೀಕ್ಷೆಯಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕ್ಷೇತ್ರಗಳ ಪುನರ್ ವಿಂಗಡಣೆ ಅತ್ಯಗತ್ಯವಾಗಿದೆ. ಸರ್ಕಾರವು 2011 ರ ಜನಗಣತಿಯ ಆಧಾರದ ಮೇಲೆ ಈ ಪ್ರಕ್ರಿಯೆಯನ್ನು ನಡೆಸಲು ಯೋಜಿಸಿದೆ. ಸೀಟುಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಮೀಸಲಾತಿ ಜಾರಿಗೊಳಿಸಿದರೂ ಸಹ, ಪುರುಷ ಅಭ್ಯರ್ಥಿಗಳ ಅವಕಾಶಕ್ಕೆ ದೊಡ್ಡ ಮಟ್ಟದ ಧಕ್ಕೆ ಬಾರದಂತೆ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ತಂತ್ರವಾಗಿದೆ. ಸರ್ಕಾರದ ಈ ದಿಢೀರ್ ನಡೆಗೆ ವಿರೋಧ ಪಕ್ಷಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
