ಬೆಳ್ತಂಗಡಿ: ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿ, ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ ಎಂಬವರು ದಿನಾಂಕ:22-04-2026 ರಂದು ಸಂಜೆ ಕಾಲೇಜಿನಿಂದ ತನ್ನ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಎಂಬವರೊಂದಿಗೆ ಪುತ್ತೂರು ಕಸಬಾ ಗ್ರಾಮದ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿರುವಾಗ, ಪರಿಚಯಸ್ಥರಾದ ಬಿ. ಕೆ ಮೊಯಿನುದ್ದೀನ್, ಮೋಹದ್ ಹಾಗೂ ಇತರ 5 ಜನರು ಬಂದು ವಿಧ್ಯಾರ್ಥಿ ಆದಿಲ್ ಹುಸೈನ್ ಗೆ ಹಲ್ಲೆ ನಡೆಸಿರುತ್ತಾರೆ. ಜೊತೆಯಲ್ಲಿದ್ದ ಸ್ನೇಹಿತರು ಹಲ್ಲೆಯ ಬಗ್ಗೆ ಪ್ರಶ್ನಿಸಿದಾಗ ಅವರಿಗೂ ಅರೋಪಿಗಳು ಜೀವ ಬೆದರಿಕೆ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ಗಲಾಟೆಯನ್ನು ಬಿಡಿಸಲು ಬಂದಾಗ ಆರೋಪಿಗಳು ಪಿರ್ಯಾದಿದಾರರಿಗೆ ಅವ್ಯಾಚವಾಗಿ ಬೈದು, ಜೀವಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿರುತ್ತಾರೆ.
ಹಲ್ಲೆಯಿಂದಾದ ಗಾಯಗೊಂಡ ಆದಿಲ್ ಹುಸೈನ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿರುತ್ತಾರೆ. ಕೆಲವು ತಿಂಗಳ ಹಿಂದೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಆರೋಪಿ ಮೊಯಿನುದ್ದೀನ್ ಮತ್ತು ಇತರರು ಗಲಾಟೆ ಮಾಡಿ, ಹಲ್ಲೆ ಮಾಡುತ್ತಿರುವಾಗ ಆದಿಲ್ ಹುಸೈನ್ ಗಲಾಟೆ ಮಾಡದಂತೆ ತಡೆದಿರುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ಆದಿಲ್ ಹುಸೈನ್ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಸದ್ರಿಯವರು ನೀಡಿರುವ ದೂರಿನಂತೆ ಅ.ಕ್ರ : 49/2026, ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
