ರಾಜ್ಯ ಚುನಾವಣಾ ಆಯೋಗದ ಮಹತ್ವದ ಆದೇಶ; ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ

ರಾಜ್ಯ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸಬೇಕಾದ ಪ್ರಮಾಣಪತ್ರದ ನಮೂನೆಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಸೇರ್ಪಡೆಗೊಳಿಸಿ ಆಯೋಗವು ಈ ಹೊಸ ತಿದ್ದುಪಡಿ ಆದೇಶವನ್ನು ನೀಡಿದೆ. ಆಯೋಗದ ಆದೇಶ ಸಂಖ್ಯೆ: SECK/ULB/OTHR/1/2026-ULB ರನ್ವಯ, ನಾಮಪತ್ರದ ಪ್ರಮಾಣಪತ್ರದ ಭಾಗ-ಎ ಮತ್ತು ಭಾಗ-ಬಿ ನಲ್ಲಿ ಹೊಸ ಅಂಶಗಳನ್ನು ಅಳವಡಿಸಲಾಗಿದೆ. ಯಾವುದೇ ಶಾಸನಬದ್ಧ ಪ್ರಾಧಿಕಾರ ಅಥವಾ ಸ್ಥಳೀಯ ಪ್ರಾಧಿಕಾರವು ಅಭ್ಯರ್ಥಿಯನ್ನು ಈ ಹಿಂದೆ ಅನರ್ಹಗೊಳಿಸಿದ್ದರೆ, ಆ ಬಗ್ಗೆ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ನೀಡಬೇಕೆಂದು ಸೂಚಿಸಲಾಗಿದೆ.

ಅಭ್ಯರ್ಥಿಯು ತನ್ನ ಮತ್ತು ತನ್ನ ಅವಲಂಬಿತರ ಆಸ್ತಿ ವಿವರ, ಕ್ರಿಮಿನಲ್ ಹಿನ್ನೆಲೆ, ಶೈಕ್ಷಣಿಕ ಅರ್ಹತೆ ಹಾಗೂ ಸರ್ಕಾರಕ್ಕೆ ಸಲ್ಲಿಸಬೇಕಾದ ಬಾಕಿ ಹಣದ ವಿವರಗಳನ್ನು ಈ ನವೀಕೃತ ನಮೂನೆಯಲ್ಲಿ ಭರ್ತಿ ಮಾಡಬೇಕಾಗುತ್ತದೆ. ಈ ಹೊಸ ನಿಯಮವು ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಬಿಳಿ ಹಾಳೆಯ ಮೇಲೆ ಸಿದ್ಧಪಡಿಸಿ ಚುನಾವಣಾ ಅಧಿಕಾರಿಗೆ ಸಲ್ಲಿಸಬಹುದು, ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ ನಗರ ಪ್ರದೇಶದ ಅಭ್ಯರ್ಥಿಗಳು ನಿಗದಿಪಡಿಸಿದ ಮುದ್ರಿತ ದಸ್ತಾವೇಜು ಹಾಳೆಯಲ್ಲಿಯೇ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಸುಳ್ಳು ಮಾಹಿತಿ ನೀಡುವುದು ಅಥವಾ ಮಾಹಿತಿಯನ್ನು ಮರೆಮಾಚುವುದು ನಾಮಪತ್ರ ತಿರಸ್ಕೃತಗೊಳ್ಳಲು ಕಾರಣವಾಗಬಹುದು ಎಂದು ಆಯೋಗವು ಎಚ್ಚರಿಸಿದೆ.