ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರು ಇನ್ನು ಮುಂದೆ ಟೋಲ್ ಪ್ಲಾಜಾಗಳ ಬಳಿ ವಾಹನ ನಿಲ್ಲಿಸಿ ಹಣ ಪಾವತಿಸುವ ದಿನಗಳು ಅಂತ್ಯವಾಗಲಿವೆ. ಕೇಂದ್ರ ರಸ್ತೆ ಸಾರಿಗೆ ಸಚಿವರು ದೇಶಾದ್ಯಂತ ಹೊಸ ತಂತ್ರಜ್ಞಾನ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಘೋಷಿಸಿದ್ದಾರೆ. 2026ರ ಅಂತ್ಯದೊಳಗೆ ಪ್ರಸ್ತುತ ಇರುವ ಭೌತಿಕ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಗುರಿ ಸರ್ಕಾರ ಹೊಂದಿದೆ. ಈಗಿನ ಟೋಲ್ ಬೂತ್ಗಳ ಬದಲಿಗೆ ‘ಮಲ್ಟಿ-ಲೇನ್ ಫ್ರೀ ಫ್ಲೋ’ (MLFF) ಎಂಬ ಆಧುನಿಕ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಹೊಸ ತಂತ್ರಜ್ಞಾನದಲ್ಲಿ ಹೆದ್ದಾರಿಗಳ ಮೇಲ್ಭಾಗದಲ್ಲಿ ಅಳವಡಿಸಲಾದ ವಿಶೇಷ ಕ್ಯಾಮೆರಾಗಳು ಮತ್ತು ಸೆನ್ಸಾರ್ಗಳು ವಾಹನದ ನಂಬರ್ ಪ್ಲೇಟ್ ಹಾಗೂ ಫಾಸ್ಟ್ಟ್ಯಾಗ್ ಮಾಹಿತಿಯನ್ನು ವಾಹನ ಚಲಿಸುತ್ತಿರುವಾಗಲೇ ಸೆರೆ ಹಿಡಿಯುತ್ತದೆ. ವಾಹನ ನಿಲ್ಲಿಸುವ ಅಗತ್ಯವೇ ಇರುವುದಿಲ್ಲ. ಪ್ರಯಾಣಿಸಿದ ದೂರದ ಆಧಾರದ ಮೇಲೆ ನೇರವಾಗಿ ಬ್ಯಾಂಕ್ ಖಾತೆಯಿಂದ ಟೋಲ್ ಹಣ ಕಡಿತವಾಗಲಿದೆ.

ಪ್ರಸ್ತುತ ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ದಟ್ಟಣೆ ಮತ್ತು ಸಮಯ ವ್ಯರ್ಥ ಸಮಸ್ಯೆಗಳಿಗೆ ಈ ಹೊಸ ವ್ಯವಸ್ಥೆ ಪರಿಹಾರ ನೀಡಲಿದೆ ಎನ್ನಲಾಗಿದೆ. ವಿಶೇಷವಾಗಿ ದೂರ ಪ್ರಯಾಣ ಮಾಡುವ ವಾಹನ ಸವಾರರಿಗೆ ಇದು ಹೆಚ್ಚು ಅನುಕೂಲವಾಗಲಿದೆ. ಹೊಸ ವ್ಯವಸ್ಥೆಯಲ್ಲಿ ಪ್ರಯಾಣಿಸಿದಷ್ಟು ದೂರಕ್ಕೆ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಈಗಿನಂತೆ ನಿಗದಿತ ಮೊತ್ತದ ಟೋಲ್ ದರ ಇರುವುದಿಲ್ಲ. ಕೆಲವು ಮಾರ್ಗಗಳಲ್ಲಿ ಟೋಲ್ ವೆಚ್ಚ ಕಡಿಮೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಈ ತಂತ್ರಜ್ಞಾನ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದೆ.
