ಮಂಗಳೂರಿನಲ್ಲಿ ತುಳು ಭವನ ಸ್ವಂತ ಕಟ್ಟಡವನ್ನು ಹೊಂದಿ ಕಾರ್ಯಾಚರಿಸುತ್ತಿದೆ. ಆದರೆ ಕರಾವಳಿ ಭಾಗದಲ್ಲಿ ಪ್ರಮುಖವಾಗಿರುವ ಬ್ಯಾರಿ ಹಾಗೂ ಕೊಂಕಣಿ ಭಾಷೆಗಳಿಗೆ ಅಕಾಡೆಮಿ ಏನೂ ಸಿಕ್ಕಿದೆ. ಆದರೆ ಕೊಂಕಣಿ ಭವನ, ಬ್ಯಾರಿ ಭವನ ಮೇಲೇರದೆ ಹಾಗೆಯೇ ಉಳಿದಿದೆ. ಇದು ಕರಾವಳಿಯನ್ನು ಪ್ರತಿನಿಧಿಸುತ್ತಿರುವ ಶಾಸಕರು ಇಚ್ಛಾಶಕ್ತಿಯ ಕೊರತೆ ಅಲ್ಲದೇ ಮತ್ತೇನು..?
ಬರೋಬ್ಬರಿ 1200 ವರ್ಷಗಳ ಇತಿಹಾಸದ ದಾಖಲೆಯನ್ನು ಹೊಂದಿರುವ ಬ್ಯಾರಿ ಭಾಷೆ 25 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಕರಾವಳಿ ಕರ್ನಾಟಕವಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಬ್ಯಾರಿಗಳ ಜನಸಂಖ್ಯೆ ಧಾರಾಳವಿದೆ. ಬ್ಯಾರಿ ಸಾಹಿತ್ಯ ಸಂಸ್ಕೃತಿಯ ಏಳಿಗೆಗಾಗಿ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸರಕಾರವೇನೂ ಘೋಷಿಸಿ ದಶಕಗಳೇ ಕಳೆದಿದೆ. ಆದರೆ ಭಾಷೆ, ಸಾಂಸ್ಕೃತಿಕತೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ಬ್ಯಾರಿ ಭವನ ನಿರ್ಮಾಣವಾಗದೆ ಇನ್ನೂ ಮೀನಮೇಷ ಎಣಿಸುತ್ತಿದೆ. ಬ್ಯಾರಿ ಭವನ ನಿರ್ಮಾಣದ ಜಾಗ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬದಲಾಗುತ್ತಲೇ ಇದೆ. ಎರಡೆರಡು ಬಾರಿ ಶಿಲಾನ್ಯಾಸಗೊಂಡರೂ ಬ್ಯಾರಿಗಿಲ್ಲ ಬ್ಯಾರಿ ಭವನ ಅನ್ನುವಂತಾಗಿದೆ.

ಬ್ಯಾರಿ ಭವನ ನಿರ್ಮಾಣ ಹಲವು ಸವಾಲುಗಳ ಮೆಟ್ಟಿಲುಗಳನ್ನು ತುಳಿದು ಬಂದಿದೆ. ಈ ಹಿಂದೆ ಬಿಜೆಪಿ ಸರಕಾರ ಬ್ಯಾರಿ ಭವನ ನಿರ್ಮಾಣಕ್ಕೆ ಆರು ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿತು. ಅಕಾಡೆಮಿಯ 2-3 ಅಧ್ಯಕ್ಷರು ಬ್ಯಾರಿ ಭವನ ಜಾಗದ ತಕರಾರಿನಲ್ಲೇ ಕಾಲ ಕಳೆದರು. ಮೊದಲು ನೀರುಮಾರ್ಗ ಬೈತುರ್ಲಿ ಬಳಿಯಲ್ಲಿ ಜಾಗ ಪಕ್ಕಾ ಆದರೂ ಕಾಂಗ್ರೆಸ್ಸಿನ ಕಾರ್ಪೊರೇಟ್ ವೊಬ್ಬರು ಬ್ಯಾರಿ ಭವನ ನಿರ್ಮಾಣವಾಗುತ್ತದೆ ಎಂದು ಸ್ಥಳೀಯರನ್ನು ಛೂ ಬಿಟ್ಟು ಇಲ್ಲಿ ನಿರ್ಮಾಣವಾಗುವುದನ್ನು ತಡೆಯುವಲ್ಲಿ ಯಶಸ್ವಿಯಾದರು. ಬೈತುರ್ಲಿಯಲ್ಲಿ ಬ್ಯಾರಿ ಭವನಕ್ಕೆ ಅಡ್ಡಿಯಾಗುತ್ತಿದ್ದಂತೆ ಅಲ್ಲಿಂದ ತೊಕ್ಕೊಟ್ಟಿಗೆ ಶಿಫ್ಟಾಯಿತು. ತೊಕ್ಕೊಟ್ಟು ಬಸ್ ನಿಲ್ದಾಣದ ಹಿಂಬದಿಯ ಕಂದಾಯ ಪಶು ಕಟ್ಟಡಕ್ಕೆ ಕಾಯ್ದಿರಿಸಿದ ಜಾಗದಲ್ಲಿ 25 ಸೆಂಟ್ಸ್ ಜಾಗವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮಂಜೂರುಗೊಂಡಿದ್ದವು. ಶಿಲಾನ್ಯಾಸಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ಅಬ್ಬಕ್ಕ ಉತ್ಸವ ಸಮಿತಿ ಕ್ಯಾತೆ ತೆಗೆದು ಇಲ್ಲಿಯೂ ಬ್ಯಾರಿ ಭವನ ನಿರ್ಮಾಣ ತಡೆಯುವಲ್ಲಿ ಯಶಸ್ವಿಯಾದರು. ಎರಡೆರಡು ಕಡೆ ನಿರ್ಮಾಣದಿಂದ ವಂಚಿತವಾದ ಬ್ಯಾರಿ ಭವನ ಇದೀಗ ಅಸೈಗೋಳಿ ಹತ್ತಿರದ ತಿಪ್ಲೇಪದವಿಗೆ ಸ್ಥಳಾಂತರಗೊಂಡಿದೆ. 50 ಸೆಂಟ್ಸ್ ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ ಇನ್ನೂ ನಕ್ಷೆಯಲ್ಲೇ ಕಾಲ ಕಳೆಯುತ್ತಿದೆ. ಕರಾವಳಿಯ ಮುಸ್ಲಿಂ ಜನಪ್ರತಿನಿಧಿಯೊಬ್ಬರು ಸರಕಾರದ ಉನ್ನತ ಮಟ್ಟದ ಸ್ಥಾನದಲ್ಲಿದ್ದರೂ, ಬ್ಯಾರಿ ಭವನ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿರುವುದು ದುರದೃಷ್ಟಕರ. ಅಕಾಡೆಮಿ ಅಧ್ಯಕ್ಷರಾಗಿರುವ ಉಮರ್ ಯು ಎಚ್ ಅವಧಿಯಲ್ಲಾದರೂ ಬ್ಯಾರಿ ಭವನ ನಿರ್ಮಾಣಗೊಳ್ಳಲಿ..
ಇನ್ನು ಕೊಂಕಣಿ ಭಾಷೆಯ ಅಭಿವೃದ್ಧಿಗೆ ಪೂರಕವಾಗಿ ಕರ್ನಾಟಕ ಕೊಂಕಣಿ ಅಕಾಡೆಮಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೊಂಕಣಿ ಭವನದ ಕಾಮಗಾರಿ ಕೆಲ ವರ್ಷಗಳಿಂದ ಅರ್ಧದಲ್ಲೇ ಸ್ಥಗಿತಗೊಂಡಿದೆ. ಮಂಗಳೂರಿನ ಉರ್ವಾ ಸ್ಟೋರ್ ಬಳಿ 35 ಸೆಂಟ್ಸ್ ಜಾಗದಲ್ಲಿ ಕೊಂಕಣಿ ಭವನ ನಿರ್ಮಾಣ ಆರಂಭಗೊಂಡಿತ್ತು. ಅಂದಿನ ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಶಿಲಾನ್ಯಾಸ ನೆರವೇರಿಸಿದ್ದರು. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಭವನ ನಿರ್ಮಾಣ ಗೊಂಡು ಉದ್ಘಾಟನೆ ಆಗಬೇಕಿತ್ತು. ಆದರೆ ಅನುದಾನದ ಕೊರತೆಯಿಂದ ಸ್ಥಗಿತಗೊಂಡ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

ಕೊಂಕಣಿ ಭವನ ಕಟ್ಟಡ ಅರ್ಧದಲ್ಲೇ ನಿಂತಿದೆ. ಸದ್ಯ ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿದೆ. ಕಟ್ಟಡದ ತಳಭಾಗದ ಅಲ್ಲಲ್ಲಿ ಮಣ್ಣು ರಾಶಿ ಹಾಕಲಾಗಿದೆ. ಸುತ್ತಲೂ ಗಿಡಗಂಟಿ ಬೆಳೆದುಕೊಂಡಿದ್ದು, ರಸ್ತೆ ಬದಿಯೇ ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿರುವುದರಿಂದ ಕುಡುಕರ ಅಡ್ಡೆಯಾಗಿಬಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಕಣಿ ಭಾಷಿಕ ಪ್ರಭಾವಿ ಶಾಸಕರಿದ್ದರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕೊಂಕಣಿ ಅಕಾಡೆಮಿ ಅಧ್ಯಕ್ಷರು ಕೊಂಕಣಿ ಭವನ ತಲೆ ಎತ್ತಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕೊಂಕಣಿ ಭವನ ಕಾರ್ಯಾರಂಭಗೊಳ್ಳುವುದು ಕನಸಾಗಿಯೇ ಉಳಿದಿದೆ.
