ಆರೋಪಿಗಳಿಗೆ ಜಾಮೀನು ಬೇಕಿದ್ದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ ಸಾಕು.. ವೆನ್ಲಾಕ್ ನಲ್ಲಿ ನಡೆಯುತ್ತಿದೆ ಮೆಗಾ ಡೀಲಿಂಗ್.. ಸೆಟ್ಟಿಂಗ್.!
ಮಂಗಳೂರು ತುಂಬಾ ಖಾಸಗಿ ಆಸ್ಪತ್ರೆಗಳದ್ದೇ ದರ್ಬಾರ್. ರೋಗಿಯೊಬ್ಬ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಒಳಹೊಕ್ಕು ಹೊರಬರುವ ಹೊತ್ತಿಗೆ ಲಕ್ಷಗಟ್ಟಲೆ ಬಿಲ್ ಪಾವತಿಸಬೇಕಾಗುತ್ತದೆ. ಬಡವರಿಗಂತೂ ಚಿಕಿತ್ಸೆ ಪಡೆಯಲು ಇಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗಳು ಗಗನ ಕುಸುಮ.
ಮಂಗಳೂರಿನಲ್ಲಿ ಬಡವರಿಗೆ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಇರುವ ಸರ್ಕಾರಿ ಆಸ್ಪತ್ರೆ ಇದು. ಕೆಲವು ವರ್ಷಗಳ ಹಿಂದೆ ಈ ಆಸ್ಪತ್ರೆಯ ಸ್ಥಿತಿ ನೋಡಿದಾಗ ಇಂದೋ ನಾಳೆಯೋ ಬೀಳುವ ಸ್ದಿತಿಯಲ್ಲಿತ್ತು. ಖಾಸಗಿಯವರ ತೆಕ್ಕೆಗೆ ಕೊಟ್ಟ ನಂತರ ಆಸ್ಪತ್ರೆಯ ಕಟ್ಟಡಗಳು ಸುಧಾರಿಸಿದೆ. ಟೈಲ್ಸ್, ಮಾರ್ಬಲ್ ಹಾಕಿ ಸುಂದರವಾಗಿ ಮಾಡಿದ್ದಾರೆ. ಆಸ್ಪತ್ರೆಯೇನೂ ಚೆಂದವಾಗಿದೆ. ಆದರೆ ಅಲ್ಲಿನ ಚಿಕಿತ್ಸೆಯ ಗುಣಮಟ್ಟ ಅಂದು ಹೇಗಿತ್ತೋ.. ಇಂದು ಹಾಗೆಯೇ ಇದೆ.
ವೆನ್ಲಾಕ್ ಆಸ್ಪತ್ರೆಯ ಪರಿಸ್ಥಿತಿ ಬದಲಾಗುವಂತೆ ಕಾಣುತ್ತಿಲ್ಲ. ವರ್ಷ ವರ್ಷ ಸರ್ಕಾರ ಕೋಟಿಗಟ್ಟಲೆ ಅನುದಾನ ಘೋಷಿಸುತ್ತಿದೆ. ಆದರೆ ವೆನ್ಲಾಕ್ ಆಸ್ಪತ್ರೆಯ ಹಣೆಬರಹ ಹಾಗೆಯೇ ಇದೆ. ಕೆಲವೊಂದು ಬಾರಿ ಇಲ್ಲಿ ಚಿಕಿತ್ಸೆಯನ್ನು ನಿರಾಕರಿಸಲಾಗುತ್ತಿದೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ. ಇಲ್ಲಿನ ವೈದ್ಯರು ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ ಇಲ್ಲಿ ಸ್ಪೆಷಾಲಿಟಿ ಇಲ್ಲ, ತಾವು ಸೂಚಿಸಿದ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಒತ್ತಡ ಹೇರಲಾಗುತ್ತಿದೆಯಂತೆ. ಖಾಸಗಿ ಆಸ್ಪತ್ರೆ ಜೊತೆ ಕೆಲವು ವೈದ್ಯರು ಸೆಟ್ಟಿಂಗ್ ನಡೆಸುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.
ರೋಗಿಗಳಿಗೆ ತುರ್ತಾಗಿ ರಕ್ತ ಬೇಕಿದ್ದರೂ, ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತನಿಧಿ ಇದ್ದರೂ, ಇಲ್ಲಿ ರಕ್ತ ಸ್ಟಾಕ್ ಇಲ್ಲ, ಬೇರೆ ರಕ್ತನಿಧಿಯಿಂದ ರಕ್ತ ತನ್ನಿ ಅನ್ನುವ ಉತ್ತರ ಬರುತ್ತದೆಯಂತೆ. ಇಲ್ಲಿನ ರಕ್ತವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆಯಂತೆ. ವೆನ್ಲಾಕ್ ಅನ್ನು ದಂಧೆಕೋರರು ಬಿಟ್ಟಿಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಈ ಹಿಂದೆ ಜಿಲ್ಲೆಯ ಪ್ರಭಾವಿ ಶಾಸಕರೇ ಆರೋಗ್ಯ ಮಂತ್ರಿಯಾಗಿದ್ದರು. ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದು ವೆನ್ಲಾಕ್ ಅಭಿವೃದ್ಧಿಪಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಈಗಿನ ಆರೋಗ್ಯ ಮಂತ್ರಿ ಕಂ ಜಿಲ್ಲಾ ಉಸ್ತುವಾರಿ ಗಾಳಿಪಟ ಬಿಡಲು, ದೊಡ್ಡವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಮಾಡಲು ಮಂಗಳೂರಿಗೆ ಅತಿಥಿ ತರಹ ಬಂದು ಹೋಗುತ್ತಿದ್ದಾರೆ. ಬಡವರ ಆಸ್ಪತ್ರೆಯ ಗೋಳು ಇವರಿಗೆ ಕೇಳಿಸುತ್ತಿಲ್ಲ.
ವೆನ್ಲಾಕ್ ಆಸ್ಪತ್ರೆಯ ಖರಾಬ್ ಕಥೆ ಜಗಜ್ಜಾಹೀರವಾದರೂ, ಈಗ ಹೊಸತೊಂದು ದಂಧೆ ನಡೆಯುತ್ತಿದೆ ಅನ್ನುವ ಮಾತುಗಳಿವೆ. ಬಡವರಿಗೆ ಚಿಕಿತ್ಸೆ ನೀಡುವ ಬದಲು ಆರೋಪಿಗಳಿಗೆ ಡುಪ್ಲಿಕೇಟ್ ಸರ್ಟಿಫಿಕೇಟ್ ನೀಡುವ ಆಸ್ಪತ್ರೆಯಾಗಿ ಬದಲಾಗಿದೆ. ಖೈದಿಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ ವೈದ್ಯರನ್ನು ಸೆಟ್ಟಿಂಗ್ ಮಾಡಿ ಇಲ್ಲದ ರೋಗ ಇದೆ ಎಂದು ಬಿಂಬಿಸಿ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಖೈದಿಗಳು, ಆರೋಪಿಗಳ ಜಾಮೀನಿಗೆ ಸಹಕಾರಿಯಾಗುತ್ತಿದೆ. ಇದರ ಹಿಂದೆ ದೊಡ್ಡ ದೊಡ್ಡ ಕುಳಗಳು, ಜಿಲ್ಲೆಯ ಕೆಲವು ರಾಜಕರಣಿಗಳು ಕೈಯಾಡಿಸುತ್ತಾರೆ. ನಿಮಗೆ ಜಾಮೀನು ಬೇಕಾ.. ವೆನ್ಲಾಕ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ ಸಾಕು, ಮಿಕ್ಕೆಲ್ಲಾ ಕೆಲಸವನ್ನು ಇಲ್ಲಿನ ಕೆಲ ವೈದ್ಯರೇ ಮಾಡಿ ಕೊಡುತ್ತಾರೆ. ಅವರಿಗೆ ಬೆಂಗಾವಲಾಗಿ ರಾಜಕರಣಿಗಳಿದ್ದಾರೆ. ಇತ್ತೀಚೆಗೆ ಆರೋಗ್ಯವಂತ ಕ್ರಿಮಿನಲ್ ನೊಬ್ಬನಿಗೆ ಸರ್ಟಿಫಿಕೇಟು ನೀಡಲು ರಾಜಕರಣಿಯೊಬ್ಬರು ಶಿಫಾರಸು ಮಾಡಿ, ಆತನನ್ನು ದಾಖಲೆ ಮುಖಾಂತರ ರೋಗಿಯನ್ನಾಗಿ ಮಾಡುವಲ್ಲಿ ಸಹಕಾರ ನೀಡಿ ಯಶಸ್ವಿಯೂ ಆಗಿರುತ್ತಾರೆ.
