ಗುರುಪುರ ಬೆಳ್ಳಿಬೆಟ್ಟುವಿನಲ್ಲಿ ಕುಸಿಯುವ ಭೀತಿಯಲ್ಲಿ ಐದಾರು ಮನೆಗಳು.. ದುರಂತ ನಡೆದರೆ ಯಾರು ಹೊಣೆ.?

ಕರಾವಳಿ

ಮಂಜನಾಡಿ, ನಾಗುರಿ ರೀತಿಯ ದುರಂತ ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಲಿ

ಮಂಗಳೂರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ಹಲವು ಅನಾಹುತಗಳು ನಡೆದಿದೆ. ಜಿಲ್ಲಾಡಳಿತ ಅನಾಹುತ ನಡೆಯುವ ಮುನ್ನ ಎಚ್ಚೆತ್ತುಕೊಳ್ಳದೆ ಇರುವುದರಿಂದ ಹಲವು ಸಾವು ನೋವುಗಳು ಸಂಭವಿಸಿದೆ. ಜನಪ್ರತಿನಿಧಿಗಳು ದುರಂತ ನಡೆದ ನಂತರ ತಂಡೋಪತಂಡವಾಗಿ ಬಂದು ಕಣ್ಣೀರು ಸುರಿಸಿ ಸಹಾಯಧನ ನೀಡುತ್ತಾ ತಮ್ಮ ಕರ್ತವ್ಯ ಮುಗಿಯಿತು ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಪಾಯ ನಡೆಯಲಿದೆ ಅನ್ನುವ ಖಾತರಿ ಇದ್ದಾಗ ಸಂಬಂಧಪಟ್ಟ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಎಷ್ಟೋ ಜೀವವನ್ನು ಉಳಿಸಬಹುದು ಅಲ್ವಾ.

ಇದೀಗ ಮಂಗಳೂರು ತಾಲೂಕಿನ ಗುರುಪುರ ಪಂಚಾಯತ್ ವ್ಯಾಪ್ತಿಯ ಬೆಳ್ಳಿಬೆಟ್ಟುವಿನ ಆನೆ ಬಳಿ ಐದಾರು ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಮಳೆ ಇನ್ನಷ್ಟು ತೀವ್ರವಾದರೆ ಇಲ್ಲಿನ ಮನೆಗಳು ಸಂಪೂರ್ಣ ಕುಸಿದು ಜೀವ ಹಾನಿಯಂತಹ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇದೆ. ಇಲ್ಲಿಯೇ ಪಕ್ಕದ ಖಾಸಗಿ ಜಾಗದ ಮಾಲಕರು ಗುಡ್ಡವನ್ನು ಅವೈಜ್ಞಾನಿಕವಾಗಿ ಸಮತಟ್ಟು ಮಾಡಿದ ಪರಿಣಾಮ ಇಲ್ಲಿನ ಧರೆ ಕುಸಿಯುವ ಭೀತಿ ಎದುರಾಗಿದ್ದು, ಐದಾರು ಮನೆಗಳ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಇಂದೋ ನಾಳೆಯೋ ಗುಡ್ಡ ಕುಸಿದು ದುರಂತ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ.

ಈ ಪ್ರದೇಶದಲ್ಲಿ ವಾಸಿಸುವ ಜನರು ಬಡವರು, ಅನಾರೋಗ್ಯಕ್ಕೆ ತುತ್ತಾದವರು ಇದ್ದಾರೆ. ವೃದ್ಧರು, ಮಕ್ಕಳಿದ್ದಾರೆ. ಜೀವ ಪಣಕ್ಕಿಟ್ಟು ವಾಸಿಸುತ್ತಿದ್ದಾರೆ. ಖಾಸಗಿ ಜಾಗದವರು ಮಾಡಿದ ತಪ್ಪಿಗೆ ಪರಿತಪಿಸುತ್ತಿದ್ದಾರೆ. ಇಲ್ಲಿ ದುರಂತ ನಡೆದರೆ ಯಾರು ಹೊಣೆ.?

ಕೆಳಗಿನ ಮನೆಯ ಮಾಲೀಕರು ಅವೈಜ್ಞಾನಿಕವಾಗಿ ಗುಡ್ಡ ಅಗೆದ ಪರಿಣಾಮ ಮೇಲ್ಭಾಗದ ಜಾಗದಲ್ಲಿ ಇರುವ ಮನೆಗಳು ಅಗೆದ ಮಣ್ಣು ಕುಸಿಯುತ್ತಿರುವುದರಿಂದ ಮನೆಗಳೇ ಧರಾಶಾಹಿಯಾಗುವ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಇಲ್ಲಿಯೇ ವಾಸಿಸುವ ಕುಟುಂಬಗಳು ಯಾರದ್ದೋ ತಪ್ಪಿಗಾಗಿ ಸಂಕಷ್ಟ ಎದುರಿಸುವಂತಾಗಿದೆ. ಅವೈಜ್ಞಾನಿಕವಾಗಿ ಗುಡ್ಡ ಸಮತಟ್ಟು ಮಾಡುವ ಸಂದರ್ಭ ಇಲ್ಲಿನ ನಿವಾಸಿಗಳು ಜಾಗದ ಮಾಲಕರಿಗೆ ಗುಡ್ಡ ಅಗೆಯದಂತೆ ವಿನಂತಿ ಮಾಡಿಕೊಂಡಿದ್ದರು, ಸ್ಥಳೀಯ ಗುರುಪುರ ಪಂಚಾಯತ್ ಗೆ ಮಾಹಿತಿ ನೀಡಿದ್ದರು. ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ‘ಅದು ನಮ್ಮ ಖಾಸಗಿ ಜಾಗ ಕೇಳಲು ನೀವ್ಯಾರು’ ಎಂದು ದರ್ಪದ ಮಾತುಗಳನ್ನು ಜಾಗದ ಮಾಲಕರು ಆಡಿದ್ದಾರಂತೆ. ಪಂಚಾಯತ್ ನವರು ಅಷ್ಟಕ್ಕೆ ಸುಮ್ಮನಾಗಿದ್ದಾರೆ. ಒಂದು ವೇಳೆ ಮನೆ ಕುಸಿದು ಜೀವ ಹಾನಿಯಾದರೆ ಅದಕ್ಕೆ ಯಾರು ಹೊಣೆ ಹೊರಬೇಕು.

ಕಳೆದ ವರ್ಷ ಮಂಜನಾಡಿಯಲ್ಲಿ ಖಾಸಗಿಯವರು ಅವೈಜ್ಞಾನಿಕವಾಗಿ ಗುಡ್ಡ ಅಗೆದ ಪರಿಣಾಮ ಗುಡ್ಡ ಜರಿದು ಎರಡು ಪುಟ್ಟ ಮಕ್ಕಳು ಹಾಗೂ ವೃದ್ಧೆಯೊಬ್ಬರು ದುರಂತ ಸಾವಿಗೀಡಾಗಿದ್ದರು. ಮಹಿಳೆಯೊಬ್ಬರು ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಮನೆಯ ಮೇಲ್ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ನಡೆದಿದ್ದ ಭೂ ಅಗೆತವೇ ದುರಂತಕ್ಕೆ ಕಾರಣವಾಗಿತ್ತು. ಮೊನ್ನೆಯಷ್ಟೇ ಕಂಕನಾಡಿ ನಾಗುರಿ ಸಮೀಪ ಮನೆಯ ಹಿಂಭಾಗದ ಗುಡ್ಡ ಕುಸಿದು ಕಾಂಪೌಂಡ್ ಗೋಡೆ ಸಹಿತ ಮನೆಗೆ ಬಿದ್ದ ಪರಿಣಾಮ ಏನೋ ಅರಿಯದ ಮುಗ್ಧ ಕಂದಮ್ಮಗಳು ಜೀವ ತೆತ್ತಿದ್ದರು. ಈ ಎರಡು ಘಟನೆಗಳು ಮಾಸುವ ಮುನ್ನವೇ ಮತ್ತೊಂದು ದುರಂತಕ್ಕೆ ಬಾಯ್ತೆರೆದು ನಿಂತಿದೆ ಗುರುಪುರದ ಬೆಳ್ಳಿಬೆಟ್ಟು.

ಇನ್ನಾದರೂ ಸ್ಥಳೀಯ ಶಾಸಕರು, ಸಂಬಂಧ ಪಟ್ಟ ಇಲಾಖೆಗಳು, ಗ್ರಾಮ ಪಂಚಾಯತ್ ಗುರುಪುರ ಬೆಳ್ಳಿಬೆಟ್ಟುವಿನಲ್ಲಿ ವಾಸಿಸುವ ಐದಾರು ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆಗಳು ಹಾನಿಯಾಗದಂತೆ ತುರ್ತಾಗಿ ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಿಸಬೇಕಿದೆ. ದುರಂತ ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಲಿ.