ಜಾತಿ ಗಣತಿಯ ಅಂತಿಮ ವರದಿ; ಅತೀ ದೊಡ್ಡ ಸಮುದಾಯವಾಗಿ ಮುಸ್ಲಿಮರು, ಸರ್ಕಾರಕ್ಕೆ ಅಗ್ನಿಪರೀಕ್ಷೆ

ರಾಜ್ಯ

ಸಿದ್ದರಾಮಯ್ಯನವರ ಕೈ ಸೇರಿದ, ರಾಜ್ಯ ರಾಜಕಾರಣದ ದಿಕ್ಸೂಚಿಯನ್ನೇ ಬದಲಿಸಬಲ್ಲ ವರದಿ

ರಾಜ್ಯ ರಾಜಕಾರಣದ ದಿಕ್ಸೂಚಿಯನ್ನೇ ಬದಲಿಸಬಲ್ಲ ಸಾಮರ್ಥ್ಯವಿರುವ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯ್ಕ ಅವರು ಸಲ್ಲಿಸಿರುವ ಈ ವರದಿಯು ರಾಜ್ಯದ ಸಮುದಾಯಗಳ ಬಲಾಬಲದ ನೈಜ ಚಿತ್ರಣವನ್ನು ಬಿಚ್ಚಿಟ್ಟಿದ್ದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯವು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯ ಶೇಕಡಾ 14 ರಷ್ಟು ಅಂದರೆ ಬರೋಬ್ಬರಿ 80.14 ಲಕ್ಷ ಜನಸಂಖ್ಯೆಯೊಂದಿಗೆ ಮುಸ್ಲಿಮರು ರಾಜ್ಯದ ಅತೀ ದೊಡ್ಡ ಸಮುದಾಯವಾಗಿ ಹೊರಹೊಮ್ಮಿದ್ದಾರೆ. ಇದುವರೆಗೆ ಪ್ರಬಲ ಸಮುದಾಯಗಳೆಂದು ಗುರುತಿಸಿಕೊಂಡಿದ್ದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಹಿಂದಿಕ್ಕಿ ಮುಸ್ಲಿಂ ಸಮುದಾಯ ಮೊದಲ ಸ್ಥಾನಕ್ಕೇರಿರುವುದು ರಾಜ್ಯ ರಾಜಕಾರಣದ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ.

ವರದಿಯ ಪ್ರಕಾರ ಮುಸ್ಲಿಂ ಸಮುದಾಯದ ನಂತರದ ಸ್ಥಾನದಲ್ಲಿ ವೀರಶೈವ ಲಿಂಗಾಯತರು ಇದ್ದಾರೆ. ಅವರ ಸಂಖ್ಯೆ 65 ಲಕ್ಷ ಅಂದರೆ ಶೇಕಡಾ 11 ರಷ್ಟಿದೆ. ಇನ್ನು ರಾಜ್ಯದ ಪ್ರಭಾವಿ ಸಮುದಾಯವಾದ ಒಕ್ಕಲಿಗರು 60 ಲಕ್ಷ ಸಂಖ್ಯೆಯೊಂದಿಗೆ ಶೇಕಡಾ 10 ರಷ್ಟು ಪಾಲು ಹೊಂದಿದ್ದಾರೆ. ಕುರುಬ ಸಮುದಾಯದ ಸಂಖ್ಯೆ 45 ಲಕ್ಷ ಅಂದರೆ ಶೇಕಡಾ 8 ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದ ಒಟ್ಟು 6.14 ಕೋಟಿ ಜನರ ಪೈಕಿ 5.86 ಕೋಟಿ ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಮಾಹಿತಿಯನ್ನು ನೀಡಿದ್ದಾರೆ.

ಕೇವಲ ಜನಸಂಖ್ಯೆಯ ಅಂಕಿ ಅಂಶಗಳನ್ನು ನೀಡುವುದಷ್ಟೇ ಅಲ್ಲದೆ ಈ ವರದಿಯು ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇಕಡಾ 32 ರಿಂದ ಶೇಕಡಾ 42 ಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಬಲ ಶಿಫಾರಸು ಮಾಡಿದೆ. ಒಂದು ವೇಳೆ ಸರ್ಕಾರ ಈ ಶಿಫಾರಸನ್ನು ಒಪ್ಪಿಕೊಂಡರೆ ರಾಜ್ಯದ ಮೀಸಲಾತಿ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಒಟ್ಟು 13 ಅಧ್ಯಾಯಗಳನ್ನು ಒಳಗೊಂಡಿರುವ ಈ ವರದಿಯು ರಾಜ್ಯದ ಪ್ರತಿಯೊಂದು ಜಾತಿಯ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿಯನ್ನು ಕೂಲಂಕಷವಾಗಿ ವಿಶ್ಲೇಷಿಸಿದೆ. ರಾಜ್ಯ ರಾಜಕಾರಣದ ಮುಂದಿನ ದಿನಗಳು ಈ ಜಾತಿ ಗಣತಿ ವರದಿಯ ಸುತ್ತಲೇ ಸುತ್ತಲಿವೆ ಎಂಬುದರಲ್ಲಿ ಅನುಮಾನವಿಲ್ಲ. ಸಿದ್ದರಾಮಯ್ಯನವರು ಅಧಿಕಾರದಿಂದ ನಿರ್ಗಮಿಸುವ ಸಮಯದಲ್ಲಿ ಜಾತಿ ಗಣತಿಯ ಅಂತಿಮ ವರದಿಯನ್ನು ಪಡಕೊಂಡು ಚಾಣಕ್ಯ ನಡೆ ಅನುಸರಿಸಿದ್ದಾರೆ. ಈ ವರದಿಯು ಸಿದ್ದರಾಮಯ್ಯನವರ ಮುಂದಿನ ರಾಜಕೀಯ ತಂತ್ರಗಾರಿಕೆಗೂ ಸಹಕಾರಿಯಾಗಬಹುದು.

ಅತೀ ದೊಡ್ಡ ಸಮುದಾಯವಾಗಿ ಹೊರಹೊಮ್ಮಿರುವ ಮುಸ್ಲಿಮರ ಸ್ಥಿತಿಗತಿ ಮತ್ತು ಮೀಸಲಾತಿ ಏರಿಕೆಯ ಪ್ರಸ್ತಾವನೆ ಸರ್ಕಾರದ ಮುಂದಿರುವ ಅಗ್ನಿಪರೀಕ್ಷೆಯಾಗಿದೆ.