ಮಂಗಳೂರಿನಲ್ಲಿ ಎಂಡಿಎಂಎ ಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಲಶೇಖರ ಸಿಲ್ವರ್ ಗೇಟ್ ನಿವಾಸಿ ಜನನ್ ಜಗನ್ನಾಥ್ ಹಾಗೂ ಬೋಳಾರದ ನಿವಾಸಿ ಪರೀಕ್ಷಿತ್ ಎಂದು ಗುರುತಿಸಲಾಗಿದೆ.
ಜೂನ್ 8 ರಂದು ಮಂಗಳೂರು ಗೂಡ್ಸ್ ಶೆಡ್ ಪರಿಸರದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ದಕ್ಷಿಣ ಪೊಲೀಸರು ಆರೋಪಿಗಳಿಂದ 11.68 ಗ್ರಾಂ ಎಂಡಿಎಂಎ ಹಾಗೂ ರೂ 1100 ನಗದು, ಮೂರು ಮೊಬೈಲ್ ಫೋನ್ ಹಾಗೂ ಒಂದು ತೂಕ ಮಾಪನ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 122/2026 ರಡಿ ಎನ್ ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಮತ್ತು 22(ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಜೂನ್ 6 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ 116/2026 ರಡಿ ಕಲಂ 8 (ಸಿ) ಹಾಗೂ 22(ಸಿ) ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣಕ್ಕೆ ಸಂಬಂಧಿಸಿ ಪ್ರಣವ್ ಕೋಟ್ಯಾನ್ ಎಂಬಾತನನ್ನು ಬಂಧಿಸಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ಕಾರ್ ಸ್ಟ್ರೀಟ್ ನಿವಾಸಿ ಸುಶಾನ್ ಪೂಜಾರಿ ಎಂಬಾತನನ್ನು ಜೂನ್ 9 ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
