ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ಕ್ಲಿಯರೆನ್ಸ್: ದಲ್ಲಾಳಿಗಳ ಬಂಧನ; ಇಬ್ಬರು ಪೊಲೀಸರ ಅಮಾನತು

ಕರಾವಳಿ

ದಲ್ಲಾಳಿ ಎಕ್ಕಾರಿನ ಭರತ್, ಕೊಂಚಾರಿನ ಆನಂದ್ ಬಿಸ್ವಾಸ್ ಬಂಧಿತರು, ಪೊಲೀಸ್ ಸಿಬ್ಬಂದಿ ಮಂಜುನಾಥ ಮತ್ತು ಆಶಾ ಪ್ಲೇವಿಯಾ ಅಮಾನತು

ಬಜಪೆ: ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿ ಪಡೆಯದೆ 30ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅಮಾನತುಗೊಳಿಸಿದ್ದಾರೆ.

ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡು ತಾತ್ಕಾಲಿಕ ವಿಳಾಸ ಹೊಂದಿದ್ದ ಹೊರರಾಜ್ಯದ ಕಾರ್ಮಿಕರಿಗೆ ಪಿಸಿಸಿ ಅಗತ್ಯತೆ ಇದೆ. ಇವರು ಮಧ್ಯವರ್ತಿಗಳ ಮೂಲಕ ಬಜಪೆ ಠಾಣೆಯಿಂದ ಪಿಸಿಸಿ ಪಡೆದುಕೊಂಡಿದ್ದರು. ಆದರೆ, ಈ ರೀತಿ ಸರ್ಟಿಫಿಕೇಟ್ ಪಡೆದ 31 ಮಂದಿಯಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆ ಹಾಗೂ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾದವರಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಕೇಂದ್ರ ತನಿಖಾ ಸಂಸ್ಥೆಯೊಂದು ಈ ಲೋಪದ ಬಗ್ಗೆ ಮಂಗಳೂರು ಪೊಲೀಸರನ್ನು ಪ್ರಶ್ನಿಸಿದಾಗ ಇಲಾಖೆಯೊಳಗಿನ ಈ ದಂಧೆ ಬೆಳಕಿಗೆ ಬಂದಿದೆ.

ಪ್ರಾಥಮಿಕ ಇಲಾಖಾ ತನಿಖೆಯ ವೇಳೆ ಆಘಾತಕಾರಿ ಅಂಶಗಳು ಹೊರಬಂದಿದ್ದು, ಅಮಾನತುಗೊಂಡ ಸಿಬ್ಬಂದಿ ಬಜಪೆ ಠಾಣಾಧಿಕಾರಿಗಳ ಗಮನಕ್ಕೆ ತರದೆ ಅವರ ಲಾಗಿನ್ ಪಾಸ್‌ವರ್ಡ್ ಅನ್ನು ದುರುಪಯೋಗಪಡಿಸಿಕೊಂಡು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ವಿತರಿಸಿದ್ದಾರೆ ಎನ್ನಲಾಗಿದೆ. ಈ ಅಕ್ರಮ ದಂಧೆಯಲ್ಲಿ ಭಾಗಿಯಾದ ಇಬ್ಬರು ಬ್ರೋಕರ್ ಗಳಾದ ಎಕ್ಕಾರಿನ ಭರತ್, ಮತ್ತು ಬಜಪೆ ಕೊಂಚಾರಿನ ಆನಂದ್ ಬಿಸ್ವಾಸ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾಟಿಪಳ್ಳ ಸಮೀಪದ ಕೈಕಂಬ ಎಂಬಲ್ಲಿಯ ಖಾಸಾಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಮತಾ ಎಂಬ ಮಹಿಳೆಯ ಹೆಸರು ಈ ಅಕ್ರಮದಲ್ಲಿ ಕೇಳಿಬರುತ್ತಿದೆ.

ಈ ಅಕ್ರಮ ವ್ಯವಹಾರದಲ್ಲಿ ಬಜಪೆ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಆಶಾ ಪ್ಲೇವಿಯ ಹಾಗೂ ಹೆಡ್ ಕಾನ್ಸ್‌ಟೇಬಲ್ ಕೊರಚಾರ ಮಂಜುನಾಥ್ ಭಾಗಿಯಾಗಿಯಾಗಿರುವುದು ಸ್ವಷ್ಟವಾಗಿದೆ. ಕೊರಚಾರ ಮಂಜುನಾಥ ನೇರ ಭಾಗಿಯಾದ ಕಾರಣ ಬಂಧನದ ಸಾಧ್ಯತೆ ದಟ್ಟವಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಇಬ್ಬರು ಸಿಬ್ಬಂದಿ ಸೇರಿ ಒಟ್ಟು 31 ಮಂದಿಗೆ ನಿಯಮ ಉಲ್ಲಂಘಿಸಿ ಪಿಸಿಸಿ ನೀಡಿರುವುದು ಬೆಳಕಿಗೆ ಬಂದಿದೆ. ಪಿಸಿಸಿ ಅರ್ಜಿಯನ್ನು ವಿಚಾರಣೆ ನಡೆಸದೆ, ಸಾಕ್ಷದಾರರನ್ನು ವಿಚಾರಿಸದೆ,ಹೇಳಿಕೆ ಪಡೆಯದೆ, ವಾಸ್ತವ್ಯದ ಬಗ್ಗೆ ಯಾವುದೇ ದಾಖಲೆ ಪರಿಶೀಲಿಸದೆ, ಅರ್ಜಿದಾರರನ್ನು ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸದೆ, ಠಾಣಾಧಿಕಾರಿಯ ಸಹಿ ಪಡೆಯದೆ ವಿಲೇವಾರಿ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ಈ ಕುರಿತು ಮಾಹಿತಿ ಲಭಿಸಿದ ಬಳಿಕ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅದರ ಆಧಾರದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಅಸ್ಸಾಂ ಹಾಗೂ ಬಿಹಾರ್ ಮೂಲದ ಕೆಲವು ಕಾರ್ಮಿಕರಿಗೆ ಅಗತ್ಯ ಹಿನ್ನೆಲೆ ಪರಿಶೀಲನೆ ನಡೆಸದೆ ಪಿಸಿಸಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇವರಲ್ಲಿ ಕೆಲವರ ವಿರುದ್ಧ ಕ್ರಿಮಿನಲ್ ಚಟುವಟಿಕೆಗಳು ಹಾಗೂ ದೇಶವಿರೋಧಿ ಕೃತ್ಯಗಳ ಕುರಿತು ಮಾಹಿತಿ ಇರುವುದಾಗಿ ತಿಳಿದುಬಂದಿದ್ದು, ಇದು ಇಲಾಖೆಯ ಗಂಭೀರ ನಿರ್ಲಕ್ಷ್ಯವಾಗಿ ಪರಿಗಣಿಸಲಾಗಿದೆ. ಪ್ರಕರಣದ ಸಮಗ್ರ ತನಿಖೆಯ ಹೊಣೆಗಾರಿಕೆಯನ್ನು ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಲಾಗಿದೆ.

ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸಲು ಬಂದಿದ್ದ ಕೆಲವರು ತಾತ್ಕಾಲಿಕ ವಿಳಾಸದ ಆಧಾರದಲ್ಲಿ ಮಧ್ಯವರ್ತಿಗಳ ನೆರವಿನಿಂದ ಪೊಲೀಸರನ್ನು ಕೈವಶಮಾಡಿಕೊಂಡು ಪಿಸಿಸಿಯನ್ನು ಸುಲಭವಾಗಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಈ ರೀತಿಯಾಗಿ ಪ್ರಮಾಣಪತ್ರ ಪಡೆದ 31 ಮಂದಿಯಲ್ಲಿ ಕೆಲವರು ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧ ಹೊಂದಿದ್ದಾರೆ ಎನ್ನುವ ಮಾಹಿತಿ ಕೇಂದ್ರ ತನಿಖಾ ಸಂಸ್ಥೆಗೆ ಲಭಿಸಿದ ಬಳಿಕ ವಿಷಯ ಗಂಭೀರ ಸ್ವರೂಪ ಪಡೆದಿದೆ. ಬಜಪೆ ಠಾಣೆಯ ಅಧಿಕಾರಿಗಳ ಅಧಿಕೃತ ಲಾಗಿನ್ ಪಾಸ್‌ವರ್ಡ್ ಅನ್ನು ದುರ್ಬಳಕೆ ಮಾಡಿಕೊಂಡು ಪಿಸಿಸಿ ನೀಡಲಾಗಿದೆ ಎಂಬ ಅಂಶವೂ ತನಿಖೆಯಿಂದ ತಿಳಿದು ಬಂದಿದೆ. ಈ ಕಾರ್ಯಕ್ಕಾಗಿ ಮಧ್ಯವರ್ತಿಗಳಾದ ಭರತ್ ಎಕ್ಕಾರ್, ಆನಂದ್ ಬ್ಸ್ವಾಸ್, ಹಾಗೂ ಮಮತಾ ಹಣ ಸ್ವೀಕರಿಸಿರುವ ಆರೋಪವೂ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.