ಖಾತೆ ಬಗ್ಗೆ ಕ್ಯಾತೆ ತೆಗೆದ ಹಿರಿಯ ಸಚಿವ, ಕನಲಿ ಹೋದ ರಾಹುಲ್, ಟ್ರಂಫ್ ವಿರುದ್ದ ಸ್ಪರ್ಧಿಸಿ.
✍️. ಅರ್.ಟಿ.ವಿಠ್ಠಲಮೂರ್ತಿ
ಕಳೆದ ವಾರ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯಿಂದ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪ್ ಸೆಟ್ ಆಗಿದ್ದಾರಂತೆ. ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಹಲ ಶಾಸಕರು ಕಾಂಗ್ರೆಸ್ ಗೆ ಮತ ಹಾಕಿದ್ದು ಇದಕ್ಕೆ ಮುಖ್ಯ ಕಾರಣ.
ಅಂದ ಹಾಗೆ ಅವರು ಅಪ್ಚಸೆಟ್ ಅಗಲು ಪರಿಷತ್ ಚುನಾವಣೆಯಲ್ಲಿ ತಮ್ಮ ಪಕ್ಷದವರು ಅಡ್ಡ ಮತದಾನ ಮಾಡಿದ್ದಷ್ಟೇ ಕಾರಣವಲ್ಲ, ಬದಲಿಗೆ ಅವರ ಮನಸ್ಸು ಕೆಡಲು ಇನ್ನಷ್ಟು ಬೆಳವಣಿಗೆಗಳು ಕಾರಣವಾಗಿವೆ.
ಅದೆಂದರೆ ವಿಧಾನಪರಿಷತ್ ಚುನಾವಣೆಯ ನಂತರ ಅವರಿಗೆ ಕರ್ನಾಟಕದಿಂದ ಬಂದಿರುವ ರಿಪೋರ್ಟು ಮತ್ತು ಚುನಾವಣೆಗೂ ಮುನ್ನವೇ ಬಂದಿದ್ದ ಇನ್ನೊಂದು ರಿಪೋರ್ಟು.
ಮೂಲಗಳ ಪ್ರಕಾರ, ಚುನಾವಣೆಗೂ ಮುನ್ನ ಅಮಿತ್ ಶಾ ಅವರಿಗೆ ತಲುಪಿದ ವರದಿ, ‘ಕರ್ನಾಟಕದ ನೆಲೆಯಲ್ಲಿ ಬಿಜೆಪಿ ಬಲ ಹಿಗ್ಗುತ್ತಿದೆ. ಇದಕ್ಕೆ ಅಧಿಕಾರ ಹಂಚಿಕೆಗಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ನಡೆದ ಸಂಘರ್ಷವೇ ಮುಖ್ಯ ಕಾರಣ. ಇವತ್ತು ಸಿಎಂ ಹುದ್ದೆಗೆ ಪಟ್ಟು ಹಿಡಿದು ಡಿ.ಕೆ.ಶಿವಕುಮಾರ್ ಯಶಸ್ವಿಯಾದ ಮತ್ತು ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿದ ಬೆಳವಣಿಗೆ ರಾಜ್ಯದ ಅಹಿಂದ ವರ್ಗಗಳನ್ನು ಕೆರಳಿಸಿದೆ.

ಇದರ ಪರಿಣಾಮವಾಗಿ ಪ್ರಬಲ ಕುರುಬ ಸಮುದಾಯ ಸಾಲಿಡ್ಡಾಗಿ ಕಾಂಗ್ರೆಸ್ ವಿರುದ್ದ ತಿರುಗಿ ಬೀಳಲಿದೆ. ಇದೇ ರೀತಿ ಮುಸ್ಲಿಂ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ಜೆಡಿಎಸ್ ಪಾಳಯಕ್ಕೆ ಲಾಭ ತಂದುಕೊಡಲಿದೆ.
ಇನ್ನು ಬೋವಿ, ಲಂಬಾಣಿ ಸೇರಿದಂತೆ ಪರಿಶಿಷ್ಟ ಮತ ಬ್ಯಾಂಕಿನ ಹಲವು ಷೇರು ಹೋಲ್ಡರುಗಳು ಬಿಜೆಪಿ ಕಡೆ ವಾಲಿದ್ದಾರೆ. ಇದರ ಪರಿಣಾಮವಾಗಿ ಬಿಜೆಪಿ ಮಿತ್ರಕೂಟ ನಿರಾಯಾಸವಾಗಿ ಗೆಲುವುಗಳಿಸುತ್ತದೆ. ಅದಕ್ಕಿಂತ ಮುಖ್ಯವಾಗಿ ಕರ್ನಾಟಕದ ಅಧಿಕಾರ ಸೂತ್ರವನ್ನು ಹಿಡಿಯಲು ಅಗತ್ಯವಾದ 114 ರ ಮ್ಯಾಜಿಕ್ ನಂಬರ್ ಬಿಜೆಪಿಗೇ ದಕ್ಕಲಿದೆ’ಎಂದು ಹೇಳಿತ್ತು. ಆದರೆ ವಿಧಾನಪರಿಷತ್ತಿನ ಚುನಾವಣೆಯ ನಂತರ ಹೋದ ವರದಿ ಇದಕ್ಕೆ ತದ್ವಿರುದ್ದವಾದ ವಿಷಯಗಳನ್ನು ಹೇಳಿದೆ.
ಅದರ ಪ್ರಕಾರ, ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಹಲ ಮತಗಳು ಕಾಂಗ್ರೆಸ್ ಕಡೆ ಹೋದ ಬೆಳವಣಿಗೆ ಸರಳವಾಗಿಲ್ಲ. ಯಾಕೆಂದರೆ ಈ ಅಡ್ಡ ಮತದಾನಕ್ಕೆ ಪಕ್ಷದ ಶಾಸಕರಲ್ಲಿರುವ ಆಸೆಗಿಂತ ಮುಖ್ಯವಾಗಿ ಅವರಿಗಿರುವ ಅನಿವಾರ್ಯತೆಯೂ ಕಾರಣ. ಅಡ್ಡ ಮತದಾನ ಮಾಡಿದವರ ಪೈಕಿ ಒಬ್ಬರು ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಕಷ್ಟದ ಜಾಲದಿಂದ ಹೊರಬರಲು ಅವರು ತಮ್ಮ ಕೈಲಿರುವ ಯೋಜನೆಯೊಂದನ್ನು ಖಾಸಗಿ ಗ್ರೂಪ್ ಗೆ ವಹಿಸಲು ತಯಾರಾಗಿದ್ದಾರೆ. ಇದಕ್ಕೆ ಅನುಕೂಲವಾಗಲಿ ಅಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಇನ್ನು ಅಡ್ಡ ಮತದಾನ ಮಾಡಿದವರ ಪೈಕಿ ಇಬ್ಬರು ವಿವಿಧ ಮೊಕದ್ದಮೆಗಳ ಬಲೆಯಲ್ಲಿದ್ದು ಇದರಿಂದ ಬಚಾವಾಗಲು ಪರ್ಯಾಯ ಮಾರ್ಗ ಹಿಡಿದಿದ್ದಾರೆ. ಉಳಿದವರಿಗೆ ಖರ್ಜೂರದ ಮೇಲೆ ಆಸೆ ಹುಟ್ಟಿದ್ದು, ತಲಾ ಇಪ್ಪತ್ತು ಖರ್ಜೂರ ತಿಂದು ಹಾಲು ಕುಡಿದಿದ್ದಾರೆ.
ಹೀಗೆ ವಿಧಾನಪರಿಷತ್ ಚುನಾವಣೆಯ ನಂತರ ತಲುಪಿರುವ ಈ ರಿಪೋರ್ಟು ಮತ್ತೊಂದು ಆ್ಯಂಗಲ್ಲಿನಿಂದಲೂ ಚಿಂತೆ ಮೂಡಿಸಿದೆ. ಅದೆಂದರೆ ಕೆಲವೇ ಕಾಲದ ಹಿಂದೆ ಕಾಣುತ್ತಿದ್ದ ಕರ್ನಾಟಕದ ಮತ ಬ್ಯಾಂಕ್ ಸ್ವರೂಪ ಈಗ ಬೇರೆಯೇ ಆಗಿ ಕಾಣುತ್ತಿರುವುದು. ಯಾಕೆಂದರೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಅಧಿಕಾರ ಹಂಚಿಕೆಗಾಗಿ ನಡೆಯುತ್ತಿರುವ ಸಂಘರ್ಷ ಅಹಿಂದ ಮತ ಬ್ಯಾಂಕನ್ನು ಛಿದ್ರಗೊಳಿಸಲಿದೆ ಎಂದು ಆಗಿನ ವರದಿ ಹೇಳಿತ್ತು. ಆದರೆ ಈಗಿನ ವರದಿ ಅಂತಹ ಬೆಳವಣಿಗೆ ದೊಡ್ಡ ಮಟ್ಟದಲ್ಲಿ ನಡೆಯುವ ಸಾಧ್ಯತೆ ಕಡಿಮೆ ಅಂತ ಹೇಳುತ್ತಿದೆ.
ಅದರ ಪ್ರಕಾರ, ಸಿದ್ದರಾಮಯ್ಯ ಅವರು ಕೆಳಗಿಳಿದ ನಂತರ ಕುರುಬ ಮತ ಬ್ಯಾಂಕು ದೊಡ್ಡ ಮಟ್ಟದಲ್ಲಿ ಚೆದುರುವ ಸಾಧ್ಯತೆ ಕಡಿಮೆಯಾಗಿದೆ.
ಕಾರಣ? ರಾಜ್ಯ ಕಾಂಗ್ರೆಸ್ ನಲ್ಲಿ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ರಕ್ತಸಹಿತವಾಗಿದ್ದರೆ ಆಟ ಬೇರೆಯಾಗುತ್ತಿತ್ತು. ಆದರೆ ಈ ಪ್ರಕ್ರಿಯೆ ರಕ್ತರಹಿತ ಆಪರೇಷನ್ ಆಗಿದ್ದರಿಂದ ನಿರ್ದಿಷ್ಟ ಮತ ಬ್ಯಾಂಕಿನ ಮನಸ್ಸಿಗೆ ಗಾಯಗಳಾಗಿಲ್ಲ.

ಯಾಕೆಂದರೆ ವರಿಷ್ಟರು ಸೂಚಿಸಿದ ಕೂಡಲೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಸಿದ್ಧರಾಮಯ್ಯ ಅವರು ಡಿಕೆ ಸರ್ಕಾರದಲ್ಲಿ ತಮ್ಮ ಆಪ್ತರು ಷಾಮೀಲಾಗುವಂತೆ ಮಾಡಿದ್ದಾರೆ.
ಮೊದಲನೆಯದಾಗಿ ಡಾ.ಜಿ.ಪರಮೇಶ್ವರ್. ತಮ್ಮ ನಂತರ ಪರಮೇಶ್ವರ್ ಸಿಎಂ ಆಗಲಿ ಅಂತ ಸಿದ್ದರಾಮಯ್ಯ ಬಯಸಿದ್ದರಲ್ಲ? ಇದೇ ಕಾರಣಕ್ಕಾಗಿ ಡಿಕೆ ಸಂಪುಟದಲ್ಲಿ ಪರಮೇಶ್ವರ್ ಅವರಿಗೆ ಜಾಗ ಸಿಗದಂತೆ ಮಾಡುವ ತಂತ್ರ ಹೈಕಮಾಂಡ್ ಮಟ್ಟದಲ್ಲಿ ನಡೆದಿತ್ತು. ಆದರೆ ಈ ತಂತ್ರಕ್ಕೆ ಸೆಡ್ಡು ಹೊಡೆದ ಸಿದ್ಧರಾಮಯ್ಯ ಅವರು ಪರಮೇಶ್ವರ್ ಸಂಪುಟ ಸೇರುವಂತೆ ಮಾಡಿದ್ದಷ್ಟೇ ಅಲ್ಲ, ಉಪಮುಖ್ಯಮಂತ್ರಿಯಾಗುವಂತೆ ನೋಡಿಕೊಂಡರು. ಇನ್ನು ಡಿಕೆ ಸಂಪುಟದಲ್ಲಿ ಅವರ ಆಪ್ರರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಭೈರತಿ ಸುರೇಶ್ ಮಾತ್ರವಲ್ಲ, ಸ್ವತ: ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರೂ ಇದ್ದಾರೆ. ಹೀಗೆ ಡಿಕೆ ಸಂಪುಟದಲ್ಲಿ ಸಿದ್ಧರಾಮಯ್ಯ ಅವರ ಹಲ ಆಪ್ತರು ಇದ್ದಾರಷ್ಟೇ ಅಲ್ಲ, ಸಧ್ಯದಲ್ಲೇ ನಡೆಯಲಿರುವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಇನ್ನೂ ಹಲವರು ಸ್ಥಾನ ಪಡೆಯಲಿದ್ದಾರೆ. ಇಂತವರ ಪೈಕಿ ಕೆಲವರ ಮೇಲೆ ಸಿದ್ದರಾಮಯ್ಯ ಸಿಟ್ಟಾಗಿದ್ದರಾದರೂ ದಿನಕಳೆದಂತೆ ಅವರ ಮುನಿಸು ಕಡಿಮೆಯಾಗಿದೆ. ಹೀಗಾಗಿ ಇಂತವರಿಗೆ ಜಾಗ ಕೊಡುವಂತೆ ಅವರೀಗ ಪಟ್ಟು ಹಾಕಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದಾಗಲೀ, ಅಹಿಂದ ವರ್ಗಗಳು ದೊಡ್ಡ ಮಟ್ಟದಲ್ಲಿ ಕನಲಿವೆ ಎಂದಾಗಲೀ ಹೇಳಲು ಸಾಧ್ಯವಿಲ್ಲ ಎಂಬುದು ಈಗಿನ ವರದಿಯ ಸಾರ.
ಇದೇ ರೀತಿ ಅದು ಉಲ್ಲೇಖಿಸಿರುವ ಮತ್ತೊಂದು ಅಂಶವೆಂದರೆ ಬಿಜೆಪಿಯ ಮತ ಬ್ಯಾಂಕಿಗೇ ಕಾಂಗ್ರೆಸ್ ಲಗ್ಗೆ ಹಾಕಬಹುದು ಎಂಬುದು.
ಅದರ ಪ್ರಕಾರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಮತ ಬ್ಯಾಂಕಿನ ಗಣನೀಯ ಪ್ರಮಾಣದ ಷೇರು ಕಾಂಗ್ರೆಸ್ ಜತೆ ನಿಲ್ಲುವ ಸಾಧ್ಯತೆ ಜಾಸ್ತಿ. ಯಾಕೆಂದರೆ ಈ ಸಮುದಾಯದ ಹಲವು ಸ್ವಾಮೀಜಿಗಳು ಸಾಫ್ಟ್ ಸೆಕ್ಯುಲರ್ ಡಿ.ಕೆ.ಶಿವಕುಮಾರ್ ಅವರಿಗೆ ಹತ್ತಿರವಾಗಿದ್ದಾರೆ.
ಅದೇ ರೀತಿ ಧರ್ಮಸ್ಥಳದ ಎಪಿಸೋಡಿನಲ್ಲಿ ರಾಜ್ಯ ಬಿಜೆಪಿ ನಾಯಕರು ಅನುಸರಿಸಿದ ವಿಳಂಬ ಧೋರಣೆ ಮತ್ತು ಡಿ.ಕೆ.ಶಿವಕುಮಾರ್ ಕಟ್ಟರ್ ಆಗಿ ವೀರೇಂದ್ರ ಹೆಗಡೆಯವರ ಜತೆ ನಿಂತ ರೀತಿ ಹಿಂದೂ ಮತ ಬ್ಯಾಂಕಿನ ಮೇಲೂ ಪರಿಣಾಮ ಬೀರಿದ್ದು ಇದರ ಲಾಭ ಒಂದು ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಸಿಗುವುದು ಗ್ಯಾರಂಟಿ.’ ಯಾವಾಗ ಇಂತಹ ವರದಿ ತಮ್ಮ ಕೈ ತಲುಪಿತೋ? ಇದಾದ ನಂತರ ಅಮಿತ್ ಶಾ ಅಪ್ ಸೆಟ್ ಅಗಿದ್ದಾರೆ. ಪರಿಣಾಮ? ರಾಜ್ಯ ಬಿಜೆಪಿಗೆ ಮದ್ದು ಕೊಡುವ ಕೆಲಸಕ್ಕೆ ದೊಡ್ಡ ಮಟ್ಟದಲ್ಲಿ ಅವರು ಕೈ ಹಾಕಲಿದ್ದಾರೆ.
ಡಿಕೆಗೆ ಕೌಂಟರ್ ಯಾರು?
ಅಂದ ಹಾಗೆ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಐದನೇ ಅಭ್ಯರ್ಥಿಯನ್ನಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸುವಾಗ ಸುರ್ಜೇವಾಲ ಸೇರಿದಂತೆ ಹಲ ನಾಯಕರು ಅಚ್ಚರಿ ವ್ಯಕ್ತಪಡಿಸಿದ್ದರು.
‘ಇವತ್ತು ಕಂಫರ್ಟಬಲ್ ಅಗಿ ನಮ್ಮ ನಾಲ್ಕು ಅಭ್ಯರ್ಥಿಗಳು ಗೆಲ್ಲಬಹುದು. ಆದರೆ ಐದನೇ ಅಭ್ಯರ್ಥಿಯ ಗೆಲುವಿಗೆ ಎಲ್ಲಿಂದ ಮತಗಳನ್ನು ತರುತ್ತೀರಿ? ಅಂತ ಅವರು ಕೇಳಿದಾಗ ನೋಡುತ್ತಿರಿ ಅಂತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಾರ್ಯತಂತ್ರದ ವಿವರಗಳನ್ನು ಕೊನೆ ಘಳಿಗೆಯವರೆಗೆ ರಹಸ್ಯವಾಗಿಟ್ಟು ಧಿಘ್ಮೂಢರಾಗುವಂತೆ ಮಾಡಿದ್ದಾರೆ.
ವಾಸ್ತವವಾಗಿ ಅವರ ಈ ತಂತ್ರಗಾರಿಕೆಯ ಶೈಲಿ ಕಾಂಗ್ರೆಸ್ ವರಿಷ್ಟರಿಗೆ ಎಷ್ಟು ಖುಷಿ ಮೂಡಿಸಿದೆಯೋ ಬಿಜೆಪಿ ಪಾಳಯಕ್ಕೆ ಅಷ್ಟೇ ಚಿಂತೆ ಮೂಡಿಸಿದೆ. ಅಂದ ಹಾಗೆ 1990 ರಲ್ಲಿ ವೀರೇಂದ್ರಪಾಟೀಲರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರಲ್ಲ? ಆ ಸಂದರ್ಭದಲ್ಲಿ ಬಂಗಾರಪ್ಪ ಮುಂದಿನ ಸಿಎಂ ಆಗಲಿ ಅಂತ ಡಿಕೆ ಒಂದು ಲೆವೆಲ್ಲಿನಲ್ಲಿ ಲಾಬಿ ಮಾಡಿದ್ದರು. ಅವತ್ತಿಗಿನ್ನೂ ಅವರಿಗೆ ಇಪ್ಪತ್ತೆಂಟು ವರ್ಷ. ಇಷ್ಟು ಚಿಕ್ಕ ವಯಸ್ಸಿನ ಯುವಕ ತಮ್ಮ ಪರವಾಗಿ ಲಾಬಿ ಮಾಡಿದ ರೀತಿಯಿಂದ ಖುಷಿಯಾಗಿದ್ದ ಬಂಗಾರಪ್ಪ ತಮ್ಮ ಸಂಪುಟದಲ್ಲಿ ಡಿಕೆ ಬಂಧೀಖಾನೆ ಮಂತ್ರಿಯಾಗುವಂತೆ ನೋಡಿಕೊಂಡಿದ್ದರು.
1996 ರ ಹೊತ್ತಿಗೆ ಇಲ್ಲಿ ಜನತಾದಳ ಸರ್ಕಾರವಿತ್ತಲ್ಲ? ಆ ಸಂದರ್ಭದಲ್ಲಿ ರಾಜಕೀಯ ಅಜ್ಞಾತವಾಸದಲ್ಲಿದ್ದ ಎಸ್.ಎಂ.ಕೃಷ್ಣ ಅವರ ಮನೆಗೆ ಹೋದ ಡಿಕೆ: ‘ಸಾರ್, ಈಗ ರಾಜ್ಯಸಭೆಗೆ ಎಲೆಕ್ಷನ್ ಅನೌನ್ಸ್ ಅಗಿದೆ. ಕಾಂಗ್ರೆಸ್ಸಿನಿಂದ ನೀವು ಸ್ಪರ್ಧಿಸಿ’ ಎಂದಿದ್ದರು.
ಆಗೆಲ್ಲ ಹೌಹಾರಿದ ಕೃಷ್ಣ ಅವರು: ‘ನೀವೇನು ತಮಾಷೆ ಮಾಡುತ್ತಿದ್ದೀರಾ?ನಮ್ಮ ಪಕ್ಷಕ್ಕಿರುವ ಮತಗಳು ಕಡಿಮೆ. ಹೀಗಿರುವಾಗ ಗೆಲುವಿನಕನಸು ಕಾಣಲು ಸಾಧ್ಯವೇ ಇಲ್ಲ’ ಎಂದಿದ್ದರಂತೆ. ಅದರೆ ಪಟ್ಟು ಬಿಡದ ಡಿಕೆ ಪೆನ್ನು, ಪೇಪರು ಹಿಡಿದುಕೊಂಡು ತಮ್ಮ ರಣತಂತ್ರದ ವಿವರಗಳನ್ನು ದಾಖಲಿಸುತ್ತಾ ಹೋಗಿದ್ದಲ್ಲದೆ: ನೀವೀಗ ಒಂದು ಕೆಲಸ ಮಾಡಿದರೆ ಸಾಕು ಸಾರ್ ಎಂದಿದ್ದರು.
ಅದೇನು ಅಂತ ಕೃಷ್ಣ ಕೇಳಿದರೆ: ‘ನೀವು ಪ್ರಧಾನಿ ಪಿ.ವಿ. ನರಸಿಂಹರಾಯರ ಮೂಲಕ ಮುಖ್ಯಮಂತ್ರಿ ದೇವೇಗೌಡರಿಗೆ ಫೋನು ಮಾಡಿಸಿ. ‘ಜನತಾದಳದ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್ಸಿಗೆ ಕೊಡಿ ಅಂತ ಅವರು ಹೇಳಿದರೆ ದೇವೇಗೌಡರು ಇಲ್ಲ ಅನ್ನಲಾರರು’ ಅಂದಿದ್ದಾರೆ.
ಅದರ ಪ್ರಕಾರ ಹೆಜ್ಜೆ ಇಟ್ಟ ಕೃಷ್ಣ ಅವತ್ತು ದಳದ ಹೆಚ್ಚುವರಿ ಮತಗಳ ಬೆಂಬಲ ಪಡೆದು ರಾಜ್ಯಸಭೆ ಪ್ರವೇಶ ಮಾಡಿದ್ದರು. ಹೀಗೆ ತಾವು ರಾಜ್ಯಸಭೆ ಪ್ರವೇಶಿಸಲು ಕಾರಣರಾದ ಡಿ.ಕೆ.ಶಿವಕುಮಾರ್ ಅವರನ್ನು ಅವರು ಮರೆಯಲಿಲ್ಲ ಎಂಬುದು ಇತಿಹಾಸ.
ಅರ್ಥಾತ್, ಇಂತಹ ರಣತಂತ್ರಗಳನ್ನು ಹೆಣೆಯುವುದರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸುಧೀರ್ಘ ಅನುಭವವಿದೆ.
ಇವತ್ತು ರಾಷ್ಟ್ರಮಟ್ಟದಲ್ಲಿ ಸುಸ್ತಾಗಿರುವ ಕಾಂಗ್ರೆಸ್ಸಿಗೆ ಇದು ಆಶಾದಾಯಕವಾಗಿ ಕಾಣಿಸುತ್ತಿದ್ದರೆ, ಬಿಜೆಪಿ ಪಾಳಯ ಚಿಂತೆಗೆ ಬಿದ್ದಿದೆ.
ಯಾಕೆಂದರೆ ಈ ಹಿಂದೆ ಸಿದ್ಧರಾಮಯ್ಯ ಅವರಿದ್ದಾಗ ಮಾತ್ರವಲ್ಲ, ಈಗ ಡಿಕೆ ಬಂದ ನಂತರವೂ ಅದರ ಸಮಸ್ಯೆ ಹಾಗೇ ಮುಂದುವರಿದಿದೆ. ಅರ್ಥಾತ್, ತಮ್ಮ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕೌಂಟರ್ ಕೊಡಬಲ್ಲ ನಾಯಕ ಯಾರಿದ್ದಾರೆ.? ಎಂಬುದು. ಅವರ ಈ ಚಿಂತೆಗೆ ಉತ್ತರ ಹುಡುಕುವ ಕೆಲಸ ಬಿಜೆಪಿ ವರಿಷ್ಟರಿಂದ ಅಗಬೇಕಿದೆ.
ಲಾಸ್ಟ್ ಸಿಪ್
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಅವರನ್ನು ಡಿಕೆ ಸಂಪುಟದ ಹಿರಿಯ ಸಚಿವರೊಬ್ಬರು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೆದುರು ತಮ್ಮ ನೋವು ತೋಡಿಕೊಂಡ ಅವರು; ‘ನನ್ನಂತಹ ಅನುಭವಿಗೆ ಯೋಗ್ಯವಾದ ಖಾತೆ ಸಿಕ್ಕಿಲ್ಲ. ಹೀಗಾಗಿ ನನಗೆ ಇನ್ನೂ ಒಳ್ಳೆಯ ಖಾತೆ ಕೊಡಬೇಕು’ ಎಂದಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ? ಆಗ ರಾಹುಲ್ ಗಾಂಧಿ ಕನಲಿ ಹೋಗಿದ್ದಾರೆ. ಹಾಗಂತಲೇ: ‘ಓ! ಹೌದಾ? ಹಾಗಿದ್ದರೆ ಒಂದು ಕೆಲಸ ಮಾಡಿ. ಮುಂದೆ ನೀವು ಟ್ರಂಪ್ ಅವರ ವಿರುದ್ಧ ಸ್ಪರ್ಧಿಸಿ. ನಿಮಗೆ ಫುಲ್ ಸಪೋರ್ಟ್ ಮಾಡೋಣ’ ಎಂದರಂತೆ.
ಅವರು ಹೀಗೆ ಹೇಳಿದ್ದೇ ತಡ, ಬೆಚ್ಚಿ ಬಿದ್ದು ವಾಪಸ್ಸು ಬಂದ ಆ ಸಚಿವರು, ತಮಗೆ ಸಿಕ್ಕ ಖಾತೆಯ ಬಗ್ಗೆ ತುಟಿ ಪಿಟಿಕ್ ಅನ್ನುತ್ತಿಲ್ಲ.
