ತಡೆಬೇಲಿ ಹಾಗೂ ಹೊಸ ಸೇತುವೆಗೆ ಆಗ್ರಹಿಸಿ ಪೆರುವಾಯಿ ನಾಗರಿಕರಿಂದ ಪ್ರತಿಭಟನೆ
ಪೆರುವಾಯಿ ಜಂಕ್ಷನ್ ಬಳಿಯಿಂದ 500 ಮೀಟರ್ ದೂರದಲ್ಲಿರುವ ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ಪೇರಡ್ಕದಲ್ಲಿರುವ ಸೇತುವೆ ಹಾಗೂ ಪೆರುವಾಯಿ ಜಂಕ್ಷನ್ ನಿಂದ 150 ಮೀಟರ್ ದೂರದಲ್ಲಿರುವ ಪೆರುವಾಯಿ-ಮಾಣಿಲ ರಸ್ತೆಯಲ್ಲಿರುವ ಸೇತುವೆ ಈ ಭಾಗದ ಜನರ ಜೀವನಾಡಿಯಾಗಿದೆ. ಪ್ರತಿದಿನ ಸಾವಿರಾರು ವಾಹನಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು, ಕೃಷಿಕರು ಹಾಗೂ ಸಾರ್ವಜನಿಕರು ಈ ಮಾರ್ಗಗಳನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಈ ಸೇತುವೆಗಳು ಇಂದು ಕಾಲದ ಹೊಡೆತಕ್ಕೆ ಸಿಲುಕಿ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ.
ಈ ಸೇತುವೆಗಳು ನಿರ್ಮಾಣಗೊಂಡ ಕಾಲದಲ್ಲಿ ಇಷ್ಟೊಂದು ವಾಹನ ಸಂಚಾರ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಭಾರೀ ಲಾರಿಗಳು, ಬಸ್ಸುಗಳು, ಕಾರುಗಳು, ದ್ವಿಚಕ್ರ ವಾಹನಗಳು ಸೇರಿದಂತೆ ನೂರಾರು ವಾಹನಗಳು ಪ್ರತಿದಿನ ಈ ಸೇತುವೆಗಳ ಮೇಲೆ ಸಂಚರಿಸುತ್ತಿವೆ. ಆದರೆ ಸೇತುವೆಗಳ ಅಗಲ ಮಾತ್ರ ಅಂದಿನಂತೆಯೇ ಉಳಿದಿದೆ. ಎರಡೂ ಸೇತುವೆಗಳು ಅತ್ಯಂತ ಕಿರಿದಾಗಿದ್ದು, ಎರಡು ವಾಹನಗಳು ಎದುರು ಬದುರು ಬಂದಾಗ ವಾಹನ ಸವಾರರು ಆತಂಕ ಮತ್ತು ಜೀವಭಯದಲ್ಲೇ ಸಂಚರಿಸಬೇಕಾದ ದುಸ್ಥಿತಿ ಇದೆ.

“ಮಳೆಗಾಲ ಬಂದಾಗ ಈ ಪ್ರದೇಶದ ಜನರ ಆತಂಕ ಮತ್ತಷ್ಟು ಹೆಚ್ಚಾಗುತ್ತದೆ. ಪೇರಡ್ಕ ಸೇತುವೆ ತೀರಾ ಕೆಳಮಟ್ಟದಲ್ಲಿದ್ದು, ಭಾರೀ ಮಳೆಯ ಸಂದರ್ಭದಲ್ಲಿ ಸೇತುವೆಗಳ ಮೇಲೆಯೇ ನೀರು ಹರಿಯುವ ಪರಿಸ್ಥಿತಿ ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಶಾಲಾ ಮಕ್ಕಳು, ಪಾದಚಾರಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸೇತುವೆಗಳ ಇಂದಿನ ದುಸ್ಥಿತಿಯನ್ನು ನೋಡಿದಾಗ ಜನರಲ್ಲಿ ಭಯ ಮತ್ತು ಆತಂಕ ಮೂಡುವುದು ಸಹಜವಾಗಿದ್ದು, ಯಾವುದೇ ಕ್ಷಣದಲ್ಲಿ ದೊಡ್ಡ ದುರಂತ ಸಂಭವಿಸಬಹುದೆಂಬ ಆತಂಕ ಸದಾ ಕಾಡುತ್ತಿದೆ.”
ಈ ಬಗ್ಗೆ ಇಲಾಖೆಗಳಿಗೆ, ಜನಪ್ರತಿನಿದಿನಗಳಿಗೆ ನಾಗರಿಕರು ಹಲವಾರು ವರ್ಷಗಳಿಂದ ದೂರು ನೀಡುತ್ತಿದ್ದರೂ ಈವರೆಗೂ ಎಚ್ಚೆತ್ತುಕೊಂಡಿಲ್ಲ. ಇಲಾಖಾಧಿಕಾರಿಗಳ, ಜನಪ್ರತಿನಿಧಿಗಳ ಸೋಮಾರಿತನದಿಂದ ಬೇಸತ್ತ ನಾಗರಿಕರು ದಿನಾಂಕ 22/06/2026 ರಂದು ಪೆರುವಾಯಿ ಜಂಕ್ಷನಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯತ್ ಬಂಟ್ವಾಳ ವಿಭಾಗದ ಇಂಜಿನಿಯರ್ ತಾರಾನಾಥ್, ಮಂಗಳೂರು ವಿಭಾಗದ ಇಂಜಿನಿಯರ್ ವೇಣುಗೋಪಾಲ್ ಸ್ಥಳಕ್ಕೆ ಆಗಮಿಸಿದ್ದು ಜನರ ತೀವ್ರ ತೀವ್ರವಾಗಿ ಪ್ರತಿರೋಧ ವ್ಯಕ್ತವಾಗಿದೆ. ಪ್ರತಿಭಟನಾಕಾರರು ಇಂಜಿನಿಯರುಗಳನ್ನು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಲೋಕೋಪಯೋಗಿ ಇಲಾಖೆಯ ಬಂಟ್ವಾಳ ವಲಯ ಇಂಜಿನಿಯರ್ ಅವಿನಾಶ್ ಆಗಮಿಸಿದ್ದರು.
ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ವೇಣುಗೋಪಾಲ್ ಅವರು ಮಾತನಾಡುತ್ತಾ ಒಂದು ವಾರದಲ್ಲಿ ತಡೆಬೇಲಿ, ಎಚ್ಚರಿಕೆ ಫಲಕ ಹಾಕುತ್ತೇವೆ. 15ದಿನಗಳಲ್ಲಿ ತಡೆಗೋಡೆ ಕಾಮಗಾರಿ ಆರಂಭಿಸುತ್ತೇವೆ ಈಗಾಗಲೆ ಹೊಸ ಸೇತುವೆಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವೆ ಮತ್ತು ಗ್ರಾಮೀ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳನ್ನೂ ಸಲ್ಲಿಸಿದ್ಧೇವೆ. ಮುಂದಿನ ಹಂತದಲ್ಲಿ ಮಂಜೂರಾತಿ ಆದ ತಕ್ಷಣ ಹೊಸ ಸೇತುವೆ ನರ್ಮಾಣ ಮಾಡುತ್ತೇವೆ ಎಂದು ಲೋಕೋಪಯೊಗಿ ಇಲಾಖಯ ಇಂಜಿನಿಯರ್ ಅವಿನಾಶ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಊರಿನ ಪ್ರಮುಖರಾದ ಯತೀಶ್ ಪೆರುವಾಯಿ, ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು, ಮೋಕ್ಷಿತ್ ಪೆರುವಾಯಿ, ಮಂಜುನಾಥ ಆಚಾರ್ಯ ಅಶ್ವಥನಗರ,ಪ್ರಭಾಕರ ಶೆಟ್ಟಿ ಕಳಾಯ್ತಿಮಾರ್, ವಿನೀತ್ ಶೆಟ್ಟಿ ಕಾನ, ಅಶೋಕ್ ಮಾಣಿಲ, ಎಂ ಮಹಾಬಲ ಭಟ್ ಮುರುವ, ವಿಷ್ಣು ಕನ್ನಡಗುಳಿ, ಪ್ರಕಾಶ್ಚಂದ್ರ ಶೆಟ್ಟಿ ಎ ಕೆ ನಿಲಯ, ಶೇಖರ ಪೂಜಾರಿ ಕುಂಬಳಕೋಡಿ, ರಾಘವ ಮಾಸ್ಟರ್ ಬೆರಿಪದವು, ಗಿರೀಶ್ ಪಾಟಾಳಿ, ಮನೋಜ್ ಆಚಾರ್ಯ ಪೆರುವಾಯಿ, ಸವಿತಾ ಆಚಾರ್ಯ ಅಶ್ವಥನಗರ, ಸೂರ್ಯ ಪ್ರಭಾ ಎ.ಕೆ ನಿಲಯ, ಗಣೇಶ್ ರೈ ಅಡಿವಾಯಿ ನಾರಾಯಣ ನಾಯ್ಕ ಅಶ್ವಥನಗರ ಮುಂತಾದವರು
ಪ್ರತಿಭಟನೆಯ ನೇತೃತ್ವವಹಿಸಿದ್ದರು.
