ಸ್ವಪಕ್ಷೀಯರಿಂದಲೇ ವಿರೋಧ; ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಂಗಳೂರಿಗೆ ಒಳ್ಳೆಯದಾಗುತ್ತದೆ ಎಂದರೆ ವಿರೋಧ ಕಟ್ಟಿಕೊಳ್ಳಲು ಸಿದ್ಧ: ಕೃಷ್ಣ ಬೈರೇಗೌಡ

ರಾಜ್ಯ

ಪಾದಚಾರಿ ಮಾರ್ಗಗಳ ಮೇಲೆ ಬೆಳೆದು ನಿಂತಿರುವ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಒತ್ತಡಗಳು ಮತ್ತು ಸ್ವಪಕ್ಷೀಯರಿಂದಲೇ ವಿರೋಧಗಳು ವ್ಯಕ್ತವಾಗುತ್ತಿದ್ದರೂ ಸಹ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಗರದ ಸುಧಾರಣೆಗಾಗಿ ನಾನು ಎಷ್ಟೇ ನಿಷ್ಠುರವಾದಿಯಾಗಲು ಸಿದ್ಧ ಎಂದು ಘೋಷಿಸಿದರು. ಫುಟ್ಪಾತ್ ತೆರವು ವಿಚಾರದಲ್ಲಿ ಹಲವು ಕಡೆಗಳಿಂದ ನನ್ನ ಮೇಲೆ ಒತ್ತಡಗಳು ಬರುತ್ತಿವೆ. ಆದರೆ ಕೇವಲ ಸಿಹಿ ಮಾತುಗಳನ್ನಾಡುತ್ತಾ ಸುಮ್ಮನೆ ಕುಳಿತುಕೊಂಡರೆ ಬೆಂಗಳೂರು ಸುಧಾರಿಸಲು ಸಾಧ್ಯವಿಲ್ಲ. ನಗರ ಸುಧಾರಿಸಬೇಕೆಂದರೆ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಬೆಂಗಳೂರಿಗೆ ಒಳ್ಳೆಯದಾಗುತ್ತದೆ ಎಂದರೆ ನಾನು ವಿರೋಧಗಳನ್ನು ಕಟ್ಟಿಕೊಳ್ಳಲು ಕೂಡ ಸಿದ್ಧ ಎಂದು ಅವರು ಪ್ರತಿಪಾದಿಸಿದರು.

ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಬೆಂಬಲ ಸಿಗುತ್ತಿದೆ ಎಂದು ಹೇಳಿದ ಸಚಿವರು, ಸುಮಾರು ಶೇಕಡಾ 80 ರಷ್ಟು ಜನರು ಈ ಅಭಿಯಾನವನ್ನು ಮುಕ್ತವಾಗಿ ಬೆಂಬಲಿಸಿದ್ದಾರೆ. ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾತ್ರ ಇದನ್ನು ವಿರೋಧಿಸುತ್ತಿವೆ. ಜನಸಾಮಾನ್ಯರಿಗೆ ನಡೆಯಲು ಸುಗಮ ರಸ್ತೆ ಮತ್ತು ಪಾದಚಾರಿ ಮಾರ್ಗ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ದೊಡ್ಡ ಬಿಲ್ಡಿಂಗ್ ಮಾಲೀಕರು ಫುಟ್ಪಾತ್ ಅನ್ನು ತಮ್ಮ ಸ್ವಂತ ಸ್ವತ್ತಿನಂತೆ ಭಾವಿಸಿ ಪಾರ್ಕಿಂಗ್ ಮತ್ತು ವ್ಯಾಪಾರ ವಹಿವಾಟಿಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಅಂಗಡಿಗಳ ಮುಂದೆ ಅಕ್ರಮವಾಗಿ ಜಾಗವನ್ನು ಆಕ್ರಮಿಸಿಕೊಂಡು ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಇಂತಹ ಪ್ರಭಾವಿಗಳ ವಿರುದ್ಧ ಜಿಬಿಎ ಕಠಿಣ ಕ್ರಮ ಕೈಗೊಳ್ಳಲಿದೆ. ಯಾರೇ ಎಷ್ಟೇ ಪ್ರಭಾವಿಗಳಾಗಿದ್ದರೂ ಅಕ್ರಮ ಒತ್ತುವರಿ ತೆರವು ಕಾರ್ಯ ನಿಲ್ಲುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.