ಧನ್ಯವಾದ ಹೇಳಿದ್ರು ಕುಮಾರದ್ವಾಮಿ.?, ಡಿಕೆ ಮುಂದಿದೆ ರಿಯಲ್ ಸವಾಲು
✍️. ಆರ್.ಟಿ.ವಿಠ್ಢಲಮೂರ್ತಿ
ಕಳೆದ ವಾರ ಬಿಜೆಪಿಯ ಪ್ರಮುಖರನ್ನು ಕರೆಸಿಕೊಂಡಿದ್ದ ರಾಜ್ಯದ ಆರೆಸ್ಸೆಸ್ ನಾಯಕರು ಹಲವು ವಿಷಯಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಪೈಕಿ ಮುಖ್ಯವಾದುದು ಬಿಕೆ-ಪಿಕೆ ಚಿಂತೆ ನಿಮಗೇಕೆ.? ಎಂಬುದು. ಇದೇ ರೀತಿ ಅವರು ಆಕ್ಷೇಪ ವ್ಯಕ್ತಪಡಿಸಿದ ಎರಡನೇ ಸಂಗತಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ್ದು.
ಅಂದ ಹಾಗೆ ಆರೆಸ್ಸೆಸ್ ನಾಯಕರ ಆಕ್ಷೇಪಕ್ಕೆ ಕಾರಣವಾದ ಮೊದಲ ವಿಷಯವಿದೆಯಲ್ಲ? ಆ್ಯಕ್ಚುವಲಿ, ಈ ವಿಷಯದ ಬಗ್ಗೆ ಬಿಜೆಪಿಯ ರಾಜ್ಯ ನಾಯಕರು ಜಾಸ್ತಿ ಮಾತನಾಡುತ್ತಿದ್ದಾರೆ ಎಂಬುದು ಆರೆಸ್ಸೆಸ್ ನಾಯಕರ ಅಪಸ್ವರ.
ಅರ್ಥಾತ್, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತೆತ್ತಿದರೆ ಅರೆಸ್ಸೆಸ್ ವಿರುದ್ಧ ಮುಗಿಬೀಳುತ್ತಾರೆ.
ಅದೇ ರೀತಿ ತಾವಾಡಿದ ಮಾತಿಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದರೆ ಇನ್ನಷ್ಡು ಉಗ್ರರೂಪಿಗಳಾಗುತ್ತಾರೆ.
ಪರಿಣಾಮ? ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಅರೆಸ್ಸೆಸ್ ಅನ್ನು ರಾಜಕೀಯದ ರಣಾಂಗಣಕ್ಕೆ ಎಳೆ ತರುವಲ್ಲಿ ಬಿಕೆ-ಪಿಕೆ ಜೋಡಿ ಯಶಸ್ವಿಯಾಗುತ್ತಿದೆ. ಹೀಗೆ ಬಿಕೆ-ಪಿಕೆ ಜೋಡಿ ತಮ್ಮ ವಿರುದ್ಧ ಮಾಡುತ್ತಿರುವ ಧಾಳಿಯನ್ನು ದಕ್ಕಿಸಿಕೊಳ್ಳುವ ಶಕ್ತಿ ನಮಗಿದೆ. ಆದರೆ ಅರೆಸ್ಸೆಸ್ ವಿರುದ್ದ ಅವರು ಆರ್ಭಟಿಸಿದರು ಅಂತ ನೀವು ಆರೆಸ್ಸೆಸ್ ಪರವಾಗಿ ಹೋರಾಟಕ್ಕಿಳಿಯಬೇಡಿ. ಹಾಗಾದಾಗ ಬಿಕೆ-ಪಿಕೆ ಜೋಡಿ ತುಂಬ ಕಾಲ ಆರೆಸ್ಸೆಸ್ ವಿರುದ್ಧ ಮಾತನಾಡುತ್ತಾ ಕೂರಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಅವರ ಮಾತಿಗೆ ಜವಾಬು ಕೊಡುತ್ತೀರೋ? ಅಲ್ಲಿಯವರೆಗೆ ಇದು ಮುಂದುವರಿಯುತ್ತದೆ. ಮಾತು ನಿಲ್ಲಿಸಿದರೆ ಲೈಮ್ ಲೈಟಿನಿಂದ ಹಿಂದೆ ಸರಿಯುತ್ತದೆ ಎಂಬುದು ಆರೆಸ್ಸೆಸ್ ನಾಯಕರ ಮಾತು.
ಇನ್ನು ರಾಜ್ಯದ ಬಿಜೆಪಿ ನಾಯಕರ ಮುಂದೆ ಆರೆಸ್ಸೆಸ್ ವ್ಯಕ್ತಪಡಿಸಿದ ಮತ್ತೊಂದು ಚಿಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯದು.
ವಾಸ್ತವವಾಗಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ರಾಜ್ಯಗಳಲ್ಲಿ ನಡೆದಾಗ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದರು. ನಿಜವಾದ ಮತದಾರರು ಮತ್ತು ನಕಲಿ ಮತದಾರರನ್ನು ಗುರುತಿಸುವಲ್ಲಿ ಯಶಸ್ಸು ಕಂಡಿದ್ದರು. ಅಷ್ಟೇ ಅಲ್ಲ, ನಿಜವಾದ ಮತದಾರರು ಮತಪಟ್ಟಿಯಲ್ಲಿ ಉಳಿದುಕೊಳ್ಳಲು ಮತ್ತು ನಕಲಿ ಮತದಾರರು ಮತಪಟ್ಟಿಗೆ ಸೇರದಂತೆ ನೋಡಿಕೊಂಡಿದ್ದರು.

ಪರಿಣಾಮ? ಈ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತು.
ಅಂದ ಹಾಗೆ ಕರ್ನಾಟಕದಲ್ಲೂ ಈ ಕೆಲಸವನ್ನು ಮಾಡಲು ಆರೆಸ್ಸೆಸ್ ಈಗಾಗಲೇ ಫೀಲ್ಡಿಗಳಿದಿದೆ. ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೇಲಿಂದ ಮೇಲೆ ಕರ್ನಾಟಕಕ್ಕೆ ಬಂದು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಆದರೆ ಈ ವಿಷಯದಲ್ಲಿ ಆರೆಸ್ಸೆಸ್ ಎಷ್ಟು ಶ್ರಮ ಹಾಕುತ್ತಿದೆಯೋ? ಅದು ಬಿಜೆಪಿಯಿಂದ ಆಗುತ್ತಿಲ್ಲ. ಆದರೆ ಆಡಳಿತಾರೂಢ ಕಾಂಗ್ರೆಸ್ ಎಷ್ಟು ಅಗ್ರೆಸಿವ್ ಆಗಿದೆ ಎಂದರೆ ಹುಕ್ ಆರ್ ಕ್ರುಕ್ ತನ್ನ ಮತದಾರರು ಮತಪಟ್ಟಿಯಿಂದ ಹೊರಬೀಳಬಾರದು ಎಂದು ಹಗಲು-ರಾತ್ರಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ಈ ವಿಷಯದಲ್ಲಿ ಹಲವು ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾವು ಬಯಸಿದವರು ಮತದಾರರ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಲು ಸಜ್ಜಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಪರ ಮತದಾರರು ಮತಪಟ್ಟಿಯಿಂದ ಹೊರಹೋಗದಂತೆ ನೋಡಿಕೊಳ್ಳಲು ರಾಜ್ಯ ಬಿಜೆಪಿ ನಡೆಸಿರುವ ಪ್ರಯತ್ನ ಏನು? ಎಂಬುದು ಆರೆಸ್ಸೆಸ್ ನಾಯಕರ ಪ್ರಶ್ನೆ. ಹೀಗೆ ಆರೆಸ್ಸೆಸ್ ನಾಯಕರು ಆಡಿದ ಮಾತಿನಿಂದ ಎಚ್ಚೆತ್ತವರಂತೆ ಬಿಜೆಪಿಯ ನಾಯಕರು ಎಸ್.ಐ.ಆರ್ ನಲ್ಲಿ ಆಕ್ರಮ ನಡೆದಿದೆ ಎಂದು ಕೂಗಾಡಿದ್ದಾರಾದರೂ ಎಸ್.ಐ.ಆರ್ ವಿಷಯದಲ್ಲಿ ಕಾಂಗ್ರೆಸ್ ಪಾಳಯದ ದುಡಿಮೆ ಬಿಜೆಪಿಗಿಂತ ಫಾಸ್ಟ್ ಆಗಿದೆ ಎಂಬುದು ನಿಜ.
ಆಪರೇಷನ್ ವಿಜಯೇಂದ್ರ ಮುಂದಕ್ಕೆ?
ಈ ಮಧ್ಯೆ ಬಿಜೆಪಿ ಪಾಳಯದಿಂದ ತೇಲಿ ಬಂದ ಲೇಟೆಸ್ಟು ಸುದ್ದಿ ಎಂದರೆ ಆಪರೇಷನ್ ವಿಜಯೇಂದ್ರ ಕಾರ್ಯಾಚರಣೆ ಕೆಲ ದಿನಗಳ ಮಟ್ಟಿಗೆ ಮುಂದೂಡಿಕೆಯಾಗಿದೆ. ಕಾರಣ?ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕಾರ್ಯ ಮುಂದಕ್ಕೆ ಹೋಗಿರುವುದು.
ವಿಜಯೇಂದ್ರ ವಿರೋಧಿ ಪಾಳಯದ ಪ್ರಕಾರ, ಜುಲೈ ಆರರ ಸೋಮವಾರ ನರೇಂದ್ರಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ರಚನೆಯಾಗಬೇಕಿತ್ತು. ಆದರೆ ಮೋದಿಯವರು ಜುಲೈ ಹನ್ನೊಂದರವರೆಗೆ ಬ್ಯುಸಿ ಆಗಿರುವುದರಿಂದ ಈ ಕಾರ್ಯ ಮುಂದೂಡಲ್ಪಟ್ಟಿದೆ.
ಜುಲೈ ಹನ್ನೊಂದರ ನಂತರ ಕೇಂದ್ರ ಸಂಪುಟ ಪುನರ್ರಚನೆಗೆ ಅವರು ಕೈ ಹಾಕುತ್ತಾರಾ? ಎಂಬುದು ಡೌಟು. ಯಾಕೆಂದರೆ ಸಂಸತ್ತಿನ ಅಧಿವೇಶನ ತುಂಬ ಹತ್ತಿರದಲ್ಲಿರುವುದರಿಂದ ಅವರು ಸ್ವಲ್ಪ ಕಾಲ ಪುನರ್ರಚನೆಗೆ ಕೈ ಹಾಕದೆ ಇರಬಹುದು.

ಒಂದು ವೇಳೆ ಹಾಗಾಗದೆ ಜುಲೈ ಆರರಂದೇ ಸಂಪುಟ ಪುನರ್ರಚನೆಯಾಗಿದ್ದರೆ ಕೇಂದ್ರ ಸಂಪುಟದಲ್ಲಿರುವ ಕರ್ನಾಟಕದ ಇಬ್ಬರು ನಾಯಕರು ರಾಜ್ಯದಲ್ಲಿ ಪಕ್ಷದ ಕೆಲದಕ್ಕೆ ನಿಯೋಜಿತರಾಗುತ್ತಿದ್ದರು.
ಈ ಪೈಕಿ ಒಬ್ಬರು ವಿ.ಸೋಮಣ್ಣ. ಅವರನ್ನು ಪಕ್ಷದ ರಾಜ್ಯಾದ್ಯಕ್ಷ ಸ್ಥಾನಕ್ಕೆ ನಿಯೋಜಿಸಿ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಇಲ್ಲವೇ ಗದ್ದಿಗೌಡರ್ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವ ಕೆಲಸವಾಗುತ್ತಿತ್ತು.
ಆದರೆ ಈಗ ಸಂಪುಟ ಪುನರ್ರಚನೆ ಕಾರ್ಯ ಮುಂದಕ್ಕೆ ಹೋಗಿರುವುದರಿಂದ ಅಪರೇಷನ್ ವಿಜಯೇಂದ್ರ ಕಾರ್ಯಾಚರಣೆ ಮುಂದಕ್ಕೆ ಹೋಗಿದೆ. ಆದರೆ ಮುಂದಕ್ಕೆ ಹೋಗಿದ್ದರೂ ಆ ಕಾರ್ಯಾಚರಣೆ ಎನಿ ಟೈಮ್ ನಡೆದೇ ನಡೆಯುತ್ತದೆ ಎಂಬುದು ವಿಜಯೇಂದ್ರ ವಿರೋಧಿಗಳ ಮಾತು.
ಧನ್ಯವಾದ ಹೇಳಿದ್ರು ಕುಮಾರದ್ವಾಮಿ?
ಇನ್ನು ಕಳೆದ ವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ವಿವಿಧ ಜಿಲ್ಲೆಗಳ ನಾಯಕರೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದ ಶಾಸಕ, ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ಅವರಿಗೆ ಧನ್ಯವಾದ ಹೇಳಿದ್ದಾರಂತೆ. ಕಾರಣ? ಪ್ರದೀಪ್ ಈಶ್ವರ್ ನನ್ನ ಬಗ್ಗೆ ಮಾತನಾಡುವ ಮೂಲಕ ಕ್ಷೇತ್ರದಲ್ಲಿರುವ ನಮ್ಮ ಪಕ್ಷದ ಕಾರ್ಯಕರ್ತರು ಎಚ್ಚೆತ್ತುಕೊಳ್ಳುವಂತೆ, ಅಗ್ರೆಸಿವ್ ಆಗುವಂತೆ ಮಾಡಿದ್ದಾರೆ.
ಒಂದು ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಬಡಿದೆಬ್ಬಿಸುವ ಕೆಲಸ ಆಗಿದ್ದರೆ, ಇದಕ್ಕೆ ಕಸರಣರಾದ ಪ್ರದೀಪ್ ಈಶ್ವರ್ ಅವರಿಗೆ ನಾವು ಧನ್ಯವಾದ ಹೇಳಲೇಬೇಕು ಎಂದರಂತೆ ಕುಮಾರಸ್ವಾಮಿ.
ಅಂದ ಹಾಗೆ ಇಂತಹ ಸಭೆಯಲ್ಲೇ ಕುಮಾರಸ್ವಾಮಿ ಮತ್ತೊಂದು ಮಹತ್ವದ ಘೋಷಣೆ ಮಾಡಿದರಂತೆ. ಅವರ ಈ ಘೋಷಣೆಗೆ ಕೆಲ ಜಿಲ್ಲೆಗಳ ನಾಯಕರ ಒತ್ತಡವೇ ಕಾರಣ.
ಮೂಲಗಳ ಪ್ರಕಾರ, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಂತಿಂಥವರಿಗೇ ಟಿಕೆಟ್ ಕೊಡಬೇಕು.ಅವರಿಗೆ ಮನಿ ಪವರ್, ಮ್ಯಾನ್ ಪವರ್ ಇರುವುದರಿಂದ ಗೆದ್ದು ಬರುತ್ತಾರೆ’ ಎಂದು ಕೆಲ ನಾಯಕರು ಹೇಳಿದ್ದಾರೆ.
ಆದರೆ ಅವರ ಮಾತನ್ನು ಒಪ್ಪದ ಕುಮಾರಸ್ವಾಮಿ: ‘ಈಗ ಟ್ರೆಂಡ್ ಬದಲಾಗಿದೆ. ಮುಂದಿನ ಬಾರಿ ಲ್ಯಾಂಡ್ ತೋವರು, ಫಾರ್ಚುನರ್ ಕಾರುಗಳಲ್ಲಿ ಬರುವವರಿಗೆ ಮಾತ್ರ ಆದ್ಯತೆಯಲ್ಲ, ಜತೆಗೆ ಲುಂಗಿ ಉಟ್ಟುಕೊಂಡು ಜನರ ಮಧ್ಯೆ ಇರುವವರಿಗೂ ಟಿಕೆಟ್ ಕೊಡುತ್ತೇನೆ’ ಎಂದು ಘೋಷಿಸಿದ್ದಾರೆ.

ಡಿಕೆ ಮುಂದಿದೆ ರಿಯಲ್ ಸವಾಲು
ಇನ್ನು ಸಿಎಂ ಅಗಿ ಅಧಿಕಾರ ಸ್ವೀಕರಿಸಿದ ನಂತರ ಡಿ.ಕೆ.ಶಿವಕುಮಾರ್ ಇಡುತ್ತಿರುವ ಹೆಜ್ಜೆ ಗಮನಾರ್ಹವಾಗಿಯೇ ಇದೆ.
ಆದರೆ ಅವರು ವೇಗವಾಗಿ ಇಡುತ್ತಿರುವ ಹೆಜ್ಜೆಗಳಿಗೆ ದೊಡ್ಡ ಸವಾಲೂ ಇದೆ.ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಅವರ ಯಶಸ್ಸನ್ನು ನಿರ್ಧರಿಸುತ್ತದೆ. ಅಂದ ಹಾಗೆ ಅವರಿಗೆ ಎದುರಾಗಲಿರುವ ಆ ಸವಾಲಿನ ಹೆಸರು ಬರ. ವಾಸ್ತವವಾಗಿ ಮಳೆಗಾಲ ಶುರುವಾಗಿ ಒಂದು ತಿಂಗಳು ಕಳೆದರೂ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿಲ್ಲ. ಕೃಷಿಯಿಂದ ಹಿಡಿದು ಕರೆಂಟಿನ ತನಕ ಅಸರೆಯಾಗಬೇಕಿದ್ದ ಜಲಾಶಯಗಳು ಖಾಲಿ ಕೊಡಪಾನದಂತಾಗಿ ಹೋಗಿವೆ. ಹಾಗೆ ನೋಡಿದರೆ ಎಸ್.ಎಂ.ಕೃಷ್ಣ ಅವರ ಕಾಲ ರಿಪೀಟ್ ಅಗುವ ಲಕ್ಷಣ ಇದು.
ಆದರೆ ಅಂತಹ ಸಂಕಷ್ಟದ ಸನ್ನಿವೇಶವನ್ನು ಕೃಷ್ಣ ಅವರು ನಿಭಾಯಿಸಿದ ಬಗೆ ಅನನ್ಯ.ಅವತ್ತು ಇದು ಸಾಧ್ಯವಾಗಲು ಇದ್ದ ಮಹತ್ವದ ಕಾರಣವೆಂದರೆ ಕೃಷ್ಣ ಅವರು ಕೇಂದ್ರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರದೊಂದಿಗೆ ಹೊಂದಿದ್ದ ಬಾಂಧವ್ಯ. ಮತ್ತು ಈ ಬಾಂಧವ್ಯಕ್ಕೆ ಕೊಂಡಿಯಾಗಿ ಕೆಲಸ ಮಾಡಿದ ಕರ್ನಾಟಕದ ದಕ್ಷ ಅಧಿಕಾರಿಗಳ ಪಡೆ.
ಅದು ಎಸ್.ವಿ.ರಂಗನಾಥ್ ಅವರಿರಬಹುದು, ಭಟ್ಟಾಚಾರ್ಯ, ಕೆ.ಪಿ.ಕೃಷ್ಣನ್, ಬಾಲಸುಬ್ರಹ್ಮಣ್ಯ, ಕೆ.ಪಿ.ಸಿಂಗ್ ಅವರಿರಬಹುದು. ಒಟ್ಟಿನಲ್ಲಿ ಕೇಂದ್ರದ ಅಧಿಕಾರಷಾಹಿಯ ಜತೆ ಅದ್ಬುತ ಬಾಂಧವ್ಯ ಹೊಂದಿದ್ದ ಈ ಅಧಿಕಾರಿಗಳ ಪಡೆ ಎಸ್ಸೆಂ. ಕೃಷ್ಣ ಸರ್ಕಾರ ಎಡವದಂತೆ ನೋಡಿಕೊಂಡಿತು. ನೀರಿನಿಂದ ಹಿಡಿದು ವಿದ್ಯುತ್ತಿನವರೆಗೆ, ಕರ್ನಾಟಕಕ್ಕೆ ಅಗತ್ಯವಾದ ಹಣಕಾಸಿನಿಂದ ಹಿಡಿದು ವಿವಿಧ ಯೋಜನೆಗಳವರೆಗೆ ಎಲ್ಲ ರೀತಿಯ ನೆರವು ಹರಿದು ಬರುವಲ್ಲಿ ಈ ಅಧಿಕಾರಿಗಳ ಪಡೆ ವಹಿಸಿದ ಶ್ರಮ ಐತಿಹಾಸಿಕವಾದದ್ದು.
ಹೀಗಾಗಿ ಪುನರಾವರ್ತನೆಯಾಗುತ್ತಿರುವ ಕೃಷ್ಣರ ಕಾಲದ ಸಂಕಷ್ಟಗಳನ್ನು ಎದುರಿಸಲು ಸಿಎಂ ಡಿ.ಕೆ. ಶಿವಕುಮಾರ್ ಇಂತಹ ಅಧಿಕಾರಿಗಳ ಪಡೆಯನ್ನು ತಕ್ಷಣ ಗುರುತಿಸುವುದು ಮತ್ತು ಸ್ವತ: ತಾವೇ ಪ್ರಧಾನಿಯವರ ಕಾರ್ಯಾಲಯದ ಜತೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳುವುದು ಬೆಸ್ಟು. ಇಲ್ಲದಿದ್ದರೆ ಇನ್ನು ಅರು ತಿಂಗಳಲ್ಲಿ ಬರಗಾಲದ ವಿರಾಟ್ ರೂಪಕ್ಕೆ ಕರ್ನಾಟಕ ತತ್ತರಿಸಲಿದೆ.

ಅಂದ ಹಾಗೆ ಕರೆಂಟನ್ನೇ ತೆಗೆದುಕೊಳ್ಳಿ. ಕಳೆದ ಕೆಲ ವರ್ಷಗಳಲ್ಲಿ ಕರ್ನಾಟಕ ಮುಂಗಾರಿನಲ್ಲಿ ನೆರೆ ರಾಜ್ಯಗಳಿಗೆ ಪವರ್ ಸಫ್ಲೈ ಮಾಡುತ್ತಿತ್ತು. ಇದಕ್ಕೆ ಪ್ರತಿಯಾಗಿ ಹಿಂಗಾರಿನಲ್ಲಿ ಅವು ಕರ್ನಾಟಕಕ್ಕೆ ಪವರ್ ಸಪ್ಲೈ ಮಾಡುತ್ತಿದ್ದವು. ಆದರೆ ಈಗ ಕರ್ನಾಟಕಕ್ಕೆ ಮುಂಗಾರು ಕೈ ಕೊಡುವುದು ಸ್ಪಷ್ಟವಾಗಿದೆ. ಹೀಗಾಗಿ ತಮಿಳುನಾಡು, ಆಂಧ್ರಪ್ರದೇಶಗಳಿಗೆ ಇಲ್ಲಿಂದ ಪವರ್ ಸಪ್ಲೈ ಅಗುವುದಿಲ್ಲ. ಹೀಗಾಗಿ ಹಿಂಗಾರಿನಲ್ಲಿ ಅವು ಕರ್ನಾಟಕಕ್ಕೆ ಪವರ್ ಸಪ್ಲೈ ಮಾಡುವ ಸ್ತಿತಿ ಇರುವುದಿಲ್ಲ. ಹೋಗಲಿ ಎಂದರೆ ಈ ಹಿಂದಿನಂತೆ ಕೇಂದ್ರದ ವಿದ್ಯುತ್ ಸ್ಥಾವರಗಳಿಂದ ಪವರ್ ಸಪ್ಲೈ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷವನ್ನು ದಾಟುವುದೇ ಕಷ್ಟ.
ಅಂದ ಹಾಗೆ ಇದು ಕರೆಂಟ್ ಒಂದರ ಕತೆ.ಉಳಿದಂತೆ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ, ಕಾವೇರಿ ವಿವಾದ ಸೇರಿದಂತೆ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸುವ ಹಲವು ಸಮಸ್ಯೆಗಳಿವೆ. ಮತ್ತು ದುರ್ಬಲ ಬೊಕ್ಕಸದೊಂದಿಗೆ ಈ ಎಲ್ಲ ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕಾಗುತ್ತದೆ.ಹೀಗಾಗಿ ಈ ದೈತ್ಯ ಸವಾಲನ್ನು ಎದುರಿಸಲು ಡಿಕೆ ಬ್ಲೂ ಪ್ರಿಂಟು ರೆಡಿ ಮಾಡಿಕೊಳ್ಳಲೇಬೇಕು.
