ಸಂಡೆ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶ- ಯು.ಟಿ ಕಾದರ್ ಭರವಸೆ, ಸಭೆ ನಿಗದಿ ಮಾಡಲು ಆಯುಕ್ತರಿಗೆ ಸೂಚನೆ

ಕರಾವಳಿ

ಮಂಗಳೂರು : ನಗರದಲ್ಲಿ ಅನೇಕ ವರ್ಷಗಳಿಂದ ಪುರಭವನದ ಬಳಿ ವಾರದ ರಜಾದಿನದ ವ್ಯಾಪಾರ ನಡೆಯುತ್ತಿದ್ದ ಸಂಡೆ ಬಜಾರ್ ವ್ಯಾಪಾರಸ್ಥರನ್ನು ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಂಡೆ ಬಜಾರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಮನವಿ ನೀಡಿತ್ತು.

ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾದ ಯು.ಟಿ ಕಾದರ್ ಅವರು ಇಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ಸಂಡೆ ಬಜಾರ್ ವ್ಯಾಪಾರಸ್ಥರ ಅಹವಾಲು ಆಲಿಸಿ, ಸಂಡೆ ಬಜಾರ್ ವಾರದ ಒಂದು ದಿನಕ್ಕೆ ಸೀಮಿತವಾಗಿರುವ ವ್ಯಾಪಾರಕ್ಕೆ ಕಠಿಣ ಕ್ರಮಗಳು ಬೇಕಾಗಿಲ್ಲ ವ್ಯಾಪಾರಸ್ಥರಲ್ಲಿ ಲೋಪದೋಷಗಳಿದ್ದರೆ ಪರಿಹರಿಸಲು ಕ್ರಮ ಕೈಗೊಳ್ಳದೆ ನಿರ್ದಾಕ್ಷಿಣ್ಯ ಕ್ರಮದ ಅಗತ್ಯ ಇಲ್ಲ ಎಂದು ನಗರಪಾಲಿಕೆ ಆಯುಕ್ತರಿಗೆ ಉಸ್ತುವಾರಿ ಸಚಿವರಾದ ಯು.ಟಿ ಕಾದರ್ ಅವರು ದೂರವಾಣಿ ಮೂಲಕ ಸೂಚನೆ ನೀಡಿ ಕೂಡಲೇ ಈ ಬಗ್ಗೆ ಸಚಿವರ ಸಮ್ಮುಖದಲ್ಲಿ ಸಭೆ ನಿಗದಿಗೊಳಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಪ್ರಮುಖರಾದ ಸಂತೋಷ್ ಆರ್.ಎಸ್, ಹಂಝ ಮೊಹಮ್ಮದ್, ಎಂ.ಎನ್ ಶಿವಪ್ಪ, ವಿಜಯ್ ಜೈನ್, ಪಕೀರ ನಾಯ್ಕ್, ಸಿಕಂದರ್ ಬೇಗ್, ಮುತ್ತುರಾಜ್, ಗದಿಗಪ್ಪ, ಶಿವಾನಂದ, ಅಬ್ದುಲ್ ಕಾದರ್ ವಾಮಂಜೂರು ಉಪಸ್ಥಿತರಿದ್ದರು.