ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ರಾಜ್ಯದಲ್ಲಿ ಬರೋಬ್ಬರಿ 84 ಲಕ್ಷಕ್ಕೂ ಅಧಿಕ ದೋಷಪೂರಿತ ಮತದಾರರು ಪತ್ತೆ

ರಾಜ್ಯ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಭರದಿಂದ ಸಾಗಿದ್ದು, ರಾಜ್ಯದಲ್ಲಿ ಬರೋಬ್ಬರಿ 84 ಲಕ್ಷಕ್ಕೂ ಅಧಿಕ ದೋಷಪೂರಿತ ಮತದಾರರು ಪತ್ತೆಯಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಪರಿಶೀಲನೆ ವೇಳೆ ರಾಜ್ಯಾದ್ಯಂತ ಗೈರಾದ, ಸ್ಥಳಾಂತರಗೊಂಡ, ಮೃತಪಟ್ಟ, ನಕಲಿ ಮತ್ತು ಇತರೆ ವರ್ಗಕ್ಕೆ ಸೇರಿದ ಒಟ್ಟು 84,31,612 ಮತದಾರರನ್ನು ಪತ್ತೆಹಚ್ಚಲಾಗಿದೆ ಎಂದು ಅಂಕಿ-ಅಂಶಗಳ ವಿವರ ನೀಡಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 5,54,32,314 ಎನ್ಯುಮರೇಷನ್ ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ 4,26,75,861 ಫಾರಂಗಳು ಯಶಸ್ವಿಯಾಗಿ ಡಿಜಿಟಲೀಕರಣಗೊಂಡಿವೆ. ಈ ಮೂಲಕ ಶೇ. 76.99 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತ್ತೆಯಾಗಿರುವ ಒಟ್ಟು 84,31,612 ASDDO ಮತದಾರರಲ್ಲಿ, ನಾಪತ್ತೆಯಾದ ಮತದಾರರು 11,61,231, ಶಾಶ್ವತವಾಗಿ ಸ್ಥಳಾಂತರಗೊಂಡವರು 51,74,968, ಮೃತಪಟ್ಟ ಮತದಾರರು 14,99,799, ಎರಡು ಕಡೆ ಮತದಾನದ ಹಕ್ಕು ಹೊಂದಿದವರು 5,62,572, ಇತರೆ ವರ್ಗದ ಮತದಾರರು 33,042 ಜನರು ಎಂದು ವರ್ಗಿಕರಿಸಲಾಗಿದೆ.

ತಂತ್ರಜ್ಞಾನದ ನೆರವಿನಿಂದ ಈ ಬೃಹತ್ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಕಲಿ ಹಾಗೂ ದೋಷಪೂರಿತ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಅತ್ಯಂತ ಪಾರದರ್ಶಕ ಹಾಗೂ ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಿ. ಅನ್ಬುಕುಮಾರ್ ತಿಳಿಸಿದ್ದಾರೆ.