ಸುಲಿಗೆ ಪ್ರಕರಣ: ಅಜ್ಜಿಯನ್ನೇ ಯಮಾರಿಸಿದ ಮೊಮ್ಮಗನ ಬಂಧನ; ಎರಡು ಚಿನ್ನದ ಬಳೆಗಳು ವಶ

ಕರಾವಳಿ

ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟ್ವಾಳ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ 82 ವರ್ಷ ಪ್ರಾಯದ ಅವ್ವಮ್ಮ ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಮುಖ ಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ನುಗ್ಗಿ ಅವ್ವಮ್ಮರವರ ಕೈಯಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಕಸಿದು ಪರಾರಿಯಾಗಿದ್ದರು. ಅ ವೇಳೆಯಲ್ಲಿ ಅವ್ವಮ್ಮರವರ ಕೈಗೆ ಗಾಯವಾಗಿ ರಕ್ತ ಬರುತ್ತಿದ್ದು, ಈ ಬಗ್ಗೆ ಅವ್ವಮ್ಮರವರ ಮಗ ಸಾದಿಕ್ ‌ಎಂಬವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಠಾಣಾ ಅ.ಕ್ರ: 70/2026, ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ದಿನಾಂಕ: 16.08.2026 ರಂದು ಈ ಪ್ರಕರಣದ ಆರೋಪಿ, ಸದ್ರಿ ಅವ್ವಮ್ಮ ರವರ ಮೊಮ್ಮಗನಾದ ಬಂಟ್ವಾಳ ತೆಂಕಕಜೆಕಾರು ನಿವಾಸಿ ಶಬೀರ್ ಎಂಬಾತನನ್ನು ಬಂಧಿಸಿ, ಆತನನ್ನು ವಿಚಾರಣೆಗೊಳಪಡಿಸಿ, ಆತನಿಂದ ಎರಡು ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಬೆಳ್ತಂಗಡಿ ಪೊಲೀಸ್‌ ಉಪಾಧೀಕ್ಷಕರಾದ ಶ್ರೀಮತಿ ರೋಹಿಸಣಿ ಸಿ.ಕೆ ರವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಇನ್ಸ್ ಪೆಕ್ಟರ್ ರವಿ ಬಿ.ಎಸ್‌, ಪುಂಜಾಲಕಟ್ಟೆ ಠಾಣಾ ಪಿ.ಎಸ್‌.ಐ ರಾಜೇಶ್‌ ಕೆ.ವಿ, ಸಿಬ್ಬಂದಿಗಳಾದ ಎ ಎಸ್ ಐ ಬೆನ್ನಿಚ್ಚನ್‌, ಪ್ರವೀಣ್‌ ಮೂರುಗೋಳಿ, ರಾಜೇಶ್‌, ವಿಜಯ್‌ ಕುಮಾರ್‌, ರಾಹುಲ್‌ ರಾವ್‌, ನಾಗರಾಜ್‌, ರಜಿತ್‌, ಬಸವರಾಜ್‌, ಸತೀಶ್ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್‌ ಮತ್ತು ಸಂಪತ್‌ ರವರು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.