ದಕ್ಷಿಣ ಕನ್ನಡ, ಉಡುಪಿ ಕಾಂಗ್ರೆಸ್ ಗದ್ದುಗೆ ಗುದ್ದಾಟ.!

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರೀಶ್‍ ಕುಮಾರ್ ಬದಲಾವಣೆ ಪಕ್ಕಾ ಆಗಿದ್ದು, ಕಾರ್ಯಕರ್ತರು ಕೂಡಾ ಇದನ್ನೇ ಬಯಸಿದ್ದರು . ಹರೀಶ್ ಕುಮಾರ್ ನಂತರ ಯಾರು ಅನ್ನುವ ಪ್ರಶ್ನೆ ಇದೀಗ ಎದ್ದಿದೆ. ಬರೋಬ್ಬರಿ 50 ಕ್ಕಿಂತಲೂ ಅಧಿಕ ಮಂದಿ ಆಕಾಂಕ್ಷಿಗಳು ಅಧ್ಯಕ್ಷ ಹುದ್ದೆಯ ರೇಸ್‍ನಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಗತಕಾಲದ ವೈಭವ ಮರಳಿ ಪಡೆಯಬೇಕಾದರೆ ಯಂಗ್ ಅಂಡ್ ಡೈನಾಮಿಕ್ ನಾಯಕರು ಜಿಲ್ಲಾಧ್ಯಕ್ಷರಾಗಿ ಬರಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದಿಂದಲೂ ಗಟ್ಟಿಯಾಗಿದ್ದು, ಬಿಜೆಪಿ ಜೊತೆ ಅಡ್ಜಸ್ಟ್ ಮೆಂಟ್ ಟ್‍ಮೆಂಟ್ ಮಾಡದೆ ಬಿಜೆಪಿ ವಿರುದ್ಧ ತೊಡೆ ತಟ್ಟಿ ಪಕ್ಷ ಕಟ್ಟುವ ಡೈನಾಮಿಕ್ ನಾಯಕರು ಕಾಂಗ್ರೆಸ್ ಅಧ್ಯಕ್ಷರಾದರೆ ಕಾಂಗ್ರೆಸ್ ಮತ್ತೆ ಫೀನಿಕ್ಸ್ ನಂತೆ ಎದ್ದೇಳಬಹುದು. ಅದು ಬಿಟ್ಟು ಯೂಸ್‍ಲೆಸ್ ನಾಯಕರನ್ನು ಜಿಲ್ಲಾಧ್ಯಕ್ಷ ಮಾಡಿದರೆ ಪಕ್ಷ ಎದ್ದೇಳುವುದು ಬಿಡಿ, ಸಮಾಧಿಯಾಗುವುದು ಖಚಿತ. ಕಾಂಗ್ರೆಸ್ ಅದೇ ಹಳೆ ಮುಖಕ್ಕೆ ಮಣೆ ಹಾಕದೆ ಎರಡನೇ ಹಂತರ ನಾಯಕರ ಕೈಗೆ ಪಕ್ಷದ ಜವಾಬ್ದಾರಿ ಕೊಟ್ಟರೆ ಕಾಂಗ್ರೆಸ್ಸಿನಲ್ಲಿ ಮತ್ತಷ್ಟು ನಾಯಕರು ಸೃಷ್ಟಿಯಾಗಬಹುದು.

ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕವಾದ ನಂತರ ಕಳೆದ ಐದಾರು ವರ್ಷಗಳಿಂದ ಜಿಲ್ಲಾ ಮಟ್ಟದ ಪಕ್ಷದ ಹುದ್ದೆಯಲ್ಲಿ ಫೆವಿಕಲ್ ಗಮ್ ಅಂಟಿಕೊಂಡು ಕೂತಿರುವ ಕೆಲವರ ಬದಲಾವಣೆ ಪಕ್ಕಾ ಆದಂತಾಗಿದೆ. ‘ಸಂಘಟನ್ ಸೃಜನ್’ ಅಭಿಯಾನದ ಮೂಲಕ ಜಿಲ್ಲಾಧ್ಯಕ್ಷರ ಬದಲಾವಣೆಯ ಪರ್ವ ಆರಂಭವಾಗಿದೆ. ಇದರ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ ಸನ್ನಿಹಿತವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ ಸನ್ನಿಹಿತವಾಗಿದ್ದು, ಪೂರ್ವಭಾವಿಯಾಗಿ ಎಐಸಿಸಿ ಯಿಂದ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಮತ್ತು ಅಭಿಪ್ರಾಯ ಸಂಗ್ರಹ ಪ್ರಕ್ರಿಯೆಗೆ ಚಾಲನೆ ದೊರಕಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಹರೀಶ್ ಕುಮಾರ್ ಅವರೇ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಕಾಂಗ್ರೆಸ್ ಸೋಲಿನ ರುಚಿ ಉಣ್ಣುತ್ತಿದ್ದರೂ ಜಿಲ್ಲಾಧ್ಯಕ್ಷರ ತಲೆದಂಡ ಪಡೆಯದೆ ಅವರಿಗೆ ಪ್ರಮೋಶನ್ ನೀಡುತ್ತಾ ಬರಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹರೀಶ್ ಕುಮಾರ್ ಅವಧಿಯಲ್ಲಿ ಮಕಾಡೆ ಮಲಗಿದೆ.

ಪಕ್ಷದಲ್ಲಿ ಹತ್ತಾರು ಬಣಗಳು ಸೃಷ್ಟಿಯಾಗಿವೆ. ‘ಒರಿಯನ್ ತೂಂಡಾ ಒರಿಯಾಗಾಪುಜಿ’ ಅನ್ನುವಂತೆ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿದ್ದಾರೆ. ಪಕ್ಷ ಸಂಘಟನೆ ಬಿಡಿ, ಪಕ್ಷ ಬರ್ಬಾದ್ ಆಗಿ ಹೋಗಿದೆ. ಜಿಲ್ಲಾಧ್ಯಕ್ಷರ ವಾರ್ಡ್ ನಲ್ಲೇ ಕಾಂಗ್ರೆಸ್ ಪಾತಾಳಕ್ಕಿಳಿದಿದೆ. ವಾರ್ಡ್ ಗೆಲ್ಲಲಾಗದವರು ಇನ್ನೂ ಜಿಲ್ಲೆಯನ್ನು ಗೆಲ್ಲಿಸಲು ಸಾಧ್ಯನಾ..? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಲಗಾಡಿ ಆಗುತ್ತಿದ್ದರೂ ಜಿಲ್ಲಾಧ್ಯಕ್ಷರಿಗೆ ಮಾತ್ರ ಎಂಎಲ್‍ಸಿ ಇದೀಗ ಮೆಸ್ಕಾಂ ಅಧ್ಯಕ್ಷ ಸ್ಥಾನದ ಭಾಗ್ಯ ದೊರಕಿದೆ. ಬಹುಶಃ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಇಷ್ಟೊಂದು ಅವಕಾಶ ಲಭಿಸಿದ ಮತ್ತೊಬ್ಬ ನಾಯಕ ಇರಲಾರರು.

ಡಿಸಿಸಿ ಅಧ್ಯಕ್ಷ ರೇಸ್‍ನಲ್ಲಿ ಯುವ ನಾಯಕ ಮಿಥುನ್ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಎಂಎಲ್‍ಸಿ ಐವನ್ ಡಿ’ಸೋಜ, ಪದ್ಮರಾಜ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಎಂ.ಜಿ. ಹೆಗಡೆ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಆರ್.ಕೆ. ಮೊದಲಾದವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಶಶಿಧರ್ ಹೆಗ್ಡೆ ಹೆಸರು ಮುಂಚೂಣಿಯಲ್ಲಿದ್ದರೂ, ಮಿಥುನ್ ರೈ ಪ್ರಭಾವ ಬಳಸಿ ಅಧ್ಯಕ್ಷರಾಗಬಹುದು ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಲೋಕಸಭೆ, ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಈವರೆಗೂ ಗೆಲ್ಲಲಾಗದ ಮಿಥುನ್ ರೈ, ಚುನಾವಣಾ ರಾಜಕಾರಣಕ್ಕಿಂತ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ನಿಯಂತ್ರಿಸಿ ವಿರಾಜಮಾನರಾಗುವ ಆಸಕ್ತಿ ಹೊಂದಿದ್ದಾರೆ ಅನ್ನುವ ಮಾತುಗಳು ಕಾಂಗ್ರೆಸ್ ಮೂಲಗಳಿಂದ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಎಲ್ಲವೂ ಬೋಗಸ್. ರಾಜ್ಯ ಹಾಗೂ ಹೈಕಮಾಂಡ್ ನಾಯಕರ ಪ್ರಭಾವ ಜಾಸ್ತಿ ಯಾರಿಗಿದೆಯೋ ಅವರಿಗೆ ಹುದ್ದೆ ಖಚಿತ ಅನ್ನುವ ಮಾತುಗಳಿವೆ. ಜಿಲ್ಲಾಧ್ಯಕ್ಷ ‘ಲಕ್ಕ್’ ಯಾರಿಗೆ ಸಿಗುತ್ತದೆ ಅನ್ನುವುದು ಕಾದು ನೋಡೋಣ.

ಇನ್ನು ಉಡುಪಿ ಜಿಲ್ಲೆಯಲ್ಲೂ ಜಿಲ್ಲಾಧ್ಯಕ್ಷ ರೇಸ್‍ನಲ್ಲಿ ಭರ್ಜರಿ ಹೆಸರುಗಳು ಹರಿದಾಡುತ್ತಿದೆ. ಆಸ್ಕರ್ ಫೆರ್ನಾಂಡೀಸ್ ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಕೆಲ ದಶಕಗಳಿಂದ ಕೇಸರಿ ಪ್ರಾಬಲ್ಯ ಮೆರೆದಿದೆ. ಇಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಸೊನ್ನೆ ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರಿಗೆ ಅವಕಾಶ ಲಭಿಸದೆ ಇರುವುದರಿಂದ ಉಡುಪಿಯಲ್ಲಿ ಬಿಜೆಪಿ ಪತಾಕೆಯನ್ನು ತಡೆಯುವವರೇ ಇಲ್ಲವಾಗಿದೆ. ಆಸ್ಕರ್ ಫೆರ್ನಾಂಡೀಸ್ ತರುವಾಯ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಮಿಂಚುವ ಅವಕಾಶ ಇದ್ದ ಪ್ರಮೋದ್ ಮಧ್ವರಾಜ್ ಬಿಜೆಪಿ ಕೋಟೆಗೆ ಹಾರಿ ತಮ್ಮ ರಾಜಕೀಯ ಬದುಕನ್ನು ಅಂತ್ಯಕ್ಕೆ ತಂದಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸನ್ನು ಸಮರ್ಥವಾಗಿ ಮುನ್ನಡೆಸುವ ಅನೇಕ ನಾಯಕರಿದ್ದರೂ ಅವರಿಗೆ ಅವಕಾಶ ಲಭಿಸುತ್ತಿಲ್ಲ. ಅದರಲ್ಲಿ ಮೊದಲಿಗೆ ಕೇಳಿ ಬರುತ್ತಿರುವ ಹೆಸರು ಅಶೋಕ್ ಪೂಜಾರಿ ಬೀಜಾಡಿ, ಸಂಘಟನಾ ಅನುಭವ, ಪಕ್ಷ ನಿಷ್ಠೆ, ಸಮಾಜಸೇವೆ, ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅಶೋಕ್ ಪೂಜಾರಿಗೆ ಜಿಲ್ಲಾಧ್ಯಕ್ಷ ಸ್ಥಾನ ದೊರಕಿದರೆ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸಬಹುದು ಅನ್ನುವ ಮಾತುಗಳು ಹರಿದಾಡುತ್ತಿದೆ. ಪ್ರತಾಪ್‍ಚಂದ್ರ ಶೆಟ್ಟಿ ಗರಡಿಯಲ್ಲಿ ಪಳಗಿರುವ ಅಶೋಕ್ ಪೂಜಾರಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡವರು. ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ಪಕ್ಷ ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡಿದವರು. ತಾಲೂಕು ಪಂಚಾಯತ್ ಸದಸ್ಯರಾಗಿ, ಜನಾನುರಾಯಿಯಾಗಿದ್ದರು.

ಇನ್ನು ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೆಸರು ಕೂಡಾ ಉಡುಪಿ ಜಿಲ್ಲಾ ಅಧ್ಯಕ್ಷ ಗಾದಿಗೆ ಪ್ರಬಲವಾಗಿ ಕೇಳಿ ಬರುತ್ತಿದೆ. ಕುಂದಾಪುರ ಭಾಗದ ಪ್ರಭಾವೀ ನಾಯಕರಾಗಿರುವ ಕಾನ್ಮಕ್ಕಿ ಜನರೆಡೆಯಲ್ಲಿ ‘ಹರಿಯಣ್ಣ’ ಎಂದೇ ಫೇಮಸ್. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ಪಕ್ಕಾ ಎಂದೇ ಹೇಳಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿತ್ತು. ಆದರೂ ಪಕ್ಷಕ್ಕೆ ನಿಷ್ಠರಾಗಿದ್ದರು. ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಬಡ ಬಗ್ಗರ ಬಗ್ಗೆ ಅತೀವ ಕಾಳಜಿ ಹೊಂದಿರುವ ಇವರು ಸಾಧು ಸ್ವಭಾವದ ವ್ಯಕ್ತಿಯಾಗಿದ್ದಾರೆ. ಸಂಘಟನೆ ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಇದರ ಜೊತೆಗೆ ಸಹನಾ ಇಂಟರ್ ನ್ಯಾಷನಲ್ ಇದರ ಮಾಲಕರು, ಉದ್ಯಮಿಯಾಗಿರುವ ಸುರೇಶ್ ಶೆಟ್ಟಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ರಮೇಶ್ ಕಾಂಚನ್ ಅವರ ಹೆಸರು ಕೂಡಾ ಓಡಾಡುತ್ತಿದೆ. ಇದರ ಜೊತೆಗೆ ಮತ್ತೆ ಹಿರಿಯರಿಗೆ ಮಣೆ ಹಾಕಲಾಗುತ್ತಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದ್ದು, ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರಾಗಿ ಆಯ್ಕೆಯಾದರೂ ಅಚ್ಚರಿ ಇಲ್ಲ. ಎಲ್ಲದಕ್ಕೂ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.