ಪುತ್ತೂರು ಪೊಲೀಸರ ಕಾರ್ಯಾಚರಣೆ: ನಾಲ್ವರು ಕುಖ್ಯಾತ ಕಳ್ಳರ ಬಂಧನ; ಪುತ್ತೂರಿನಿಂದ ಕದ್ದ ವಾಹನ ತಮಿಳುನಾಡಿನಲ್ಲಿ ಆಂಬ್ಯುಲೆನ್ಸ್

ಕರಾವಳಿ

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡನ್ನೂರು ಕಾವು ಎಂಬಲ್ಲಿ ಓಮ್ನಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 94/2026, ರಂತೆ ಪ್ರಕರಣ ದಾಖಲಿಸಿಕೊಂಡು, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ರವರ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ PSI ಗುಣಪಾಲ ಜೆ ಮತ್ತು PSI ಸುಷ್ಮಾ.ಜಿ ಭಂಡಾರಿ ರವರ ನೇತೃತ್ವದ ತನಿಖಾ ತಂಡ ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.

ಪೊಲೀಸರ ತನಿಖಾ ತಂಡವು ಪ್ರಕರಣದ ಪತ್ತೆಗಾಗಿ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನಿಖೆ ನಡೆಸಿ, ಅಂತರ್ ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದ, ಕಾಸರಗೋಡು ಮೂಲದ ಅಬ್ದುಲ್ ಸಾಯಿಲ್ ಜೆ ಮೊಹಮ್ಮದ್ ಆಸೀಕ್, ಮೊಹಮ್ಮದ್ ಸಿರಾಜ್ ಹಾಗೂ ತಮಿಳುನಾಡು ಕರೂರು ನಿವಾಸಿ ಶಕ್ತಿವೇಲು ಜಿ ಎಂಬವರನ್ನು ಬಂಧಿಸಿ, ಆರೋಪಿಗಳಿಂದ ಕಳ್ಳತನ ಮಾಡಿದ ಓಮಿನಿ ಕಾರ್ ಹಾಗೂ ಕೆಟಿಎಂ ಬೈಕ್, ಸ್ವಾಧೀನಪಡಿಸಿಕೊಂಡಿದ್ದು, ಪಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 3.5 ಲಕ್ಷ ರೂಪಾಯಿಯೆಂದು ಅಂದಾಜಿಸಲಾಗಿದೆ.

ವಿಚಾರಣೆಯ ವೇಳೆ ಆರೋಪಿಗಳು ಓಮ್ನಿ ಕಾರ್ ನ್ನು ಕದ್ದು, ಕೇರಳ ರಾಜ್ಯಕ್ಕೆ ಕೊಂಡುಹೋಗಿ, ಕೇರಳದಿಂದ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾಡಿ, ತಮಿಳುನಾಡಿನಲ್ಲಿ ಸದ್ರಿ ವಾಹನವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ಕಂಡುಬಂದಿರುತ್ತದೆ.

ಆರೋಪಿಗಳ ವಿರುದ್ದ ಕೇರಳದ ಬದಿಯಡ್ಕ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವಾರು ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ, ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.