ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹಲವು ಗಣ್ಯ ಮತದಾರರ ಹೆಸರುಗಳು ನೋಟಿಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಪದ್ಮ ಶ್ರೀ ಪ್ರಶಸ್ತಿ ಪಡೆದವರಿಂದ ಹಿಡಿದು ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ವಿದೇಶಾಂಗ ಸಚಿವ ಎಸ್. ಜೈಶಂಕರ್, ಚುನಾವಣಾ ಆಯುಕ್ತ ಎಸ್.ಎಸ್. ಸಂಧು, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಸೇರಿದಂತೆ ಹಲವು ಪ್ರಮುಖರಿಗೆ ದಾಖಲೆಗಳ ಪರಿಶೀಲನೆಗಾಗಿ ನೋಟಿಸ್ ನೀಡಲಾಗಿದೆ. ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಹಿಂದಿನ ಮತದಾರರ ಪಟ್ಟಿಯೊಂದಿಗೆ ಹೆಸರು ಅಥವಾ ವಿವರಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗದಿರುವುದು ಹಾಗೂ ಹೆಸರು, ವಯಸ್ಸು ಅಥವಾ ಇತರ ದಾಖಲೆಗಳಲ್ಲಿ ಕಂಡುಬರುವ ತಾರ್ಕಿಕ ವ್ಯತ್ಯಾಸಗಳ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಅವರ ಪತ್ನಿ ಕೆ.ಎಸ್. ಜೈಶಂಕರ್ ಅವರ ಹೆಸರುಗಳು ಕೂಡ ನೋಟಿಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರಿಗೂ SIR ಅಡಿಯಲ್ಲಿ ನೋಟಿಸ್ ನೀಡಲಾಗಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ, ಮಾಜಿ ಚುನಾವಣಾ ಆಯುಕ್ತ ಅರುಣ್ ಗೋಯಲ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಹೈದರ್ ಮತ್ತು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಅವರೂ ಹೆಚ್ಚುವರಿ ಪುರಾವೆಗಳನ್ನು ಒದಗಿಸಬೇಕು ಎಂದು ಆಯೋಗ ನೋಟಿಸ್ ನೀಡಿದೆ.
ಹಿರಿಯ ವಕೀಲರಾದ ದುಷ್ಯಂತ್ ದವೆ, ಇಂದಿರಾ ಜೈಸಿಂಗ್, ಆನಂದ್ ಗ್ರೋವರ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಬಿ.ಎಸ್. ಗವಾಯಿ ರಾಮಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ, ಮಾಜಿ ಗೃಹ ಕಾರ್ಯದರ್ಶಿ ವಾಲ್ಮೀಕಿ ಪ್ರಸಾದ್, ಮಾಜಿ ಸಂಸದ ಪಿನಾಕಿ ಮಿಶ್ರಾ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಮತ್ತು ನಗರ ಯೋಜಕ ಕೆ.ಟಿ.ರವೀಂದ್ರನ್ ಅವರಿಗೂ ಆಯೋಗ ನೋಟಿಸ್ ನೀಡಿದೆ. 2002ರ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಾಣಿಕೆಯಾಗದೇ ಇರುವುದು ಮತ್ತು ಹೆಸರು-ವಯಸ್ಸಿನಲ್ಲಿ ವ್ಯತ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಸಿಬಲ್ ಹಾಗೂ ಅವರ ಪತ್ನಿ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಚುನಾವಣಾ ಆಯುಕ್ತ ಎಸ್.ಎಸ್. ಸಂಧು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ರವರಿಗೆ ನೋಟೀಸು ಜಾರಿ ಮಾಡಲಾಗಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಸೆಬಿ ಅಧ್ಯಕ್ಷ ತುಹಿನ್ ಕಾಂತ ಪಾಂಡೆ, ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ಮತ್ತು ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರಿಗೂ ಎಸ್ಐಆರ್ ಅಡಿಯಲ್ಲಿ ನೋಟೀಸ್ ನೀಡಲಾಗಿದೆ. ಅಲ್ಲದೆ, ಮೀನುಗಾರಿಕೆ ಕಾರ್ಯದರ್ಶಿ ಅಭಿಲಾಷ್ ಲಿಖಿ, ಅವರ ಪತ್ನಿ ಸುಕೃತಿ ಲಿಖಿ, ರಸಗೊಬ್ಬರ ಕಾರ್ಯದರ್ಶಿ ರಜತ್ ಕುಮಾರ್ ಮಿಶ್ರಾ ಮತ್ತು ಭೂ ಸಂಪನ್ಮೂಲ ಕಾರ್ಯದರ್ಶಿ ನರೇಂದ್ರ ಭೂಷಣ್ ಅವರ ಹೆಸರುಗಳೂ ಈ ಪಟ್ಟಿಯಲ್ಲಿವೆ. ಚುನಾವಣಾ ಆಯೋಗ ಕಮಿಷನರ್ ಎಸ್. ಎಸ್ ಸಂಧು ಹೆಸರಿನ ಸ್ಪೆಲ್ಲಿಂಗ್ ಮಿಸ್ ಮ್ಯಾಚ್ ಆಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರು ಹಾಗೂ ದಾಖಲೆಗಳಲ್ಲಿರುವ ಹೆಸರಿನ ಸ್ಪೆಲ್ಲಿಂಗ್ ಮಿಸ್ ಮ್ಯಾಚ್ ಆಗುತ್ತಿದೆ. ಹೀಗಾಗಿ ಎಸ್ಎಸ್ ಸಂಧುಗೆ SIR ನೋಟಿಸ್ ನೀಡಲಾಗಿದೆ.

ಇದು ಎಸ್ ಐ ಆರ್ ನ ಕರಾಳ ಮುಖದ ದರ್ಶನ ಅಂದರೂ ತಪ್ಪಾಗಲ್ಲ. ದೊಡ್ಡ ದೊಡ್ಡ ರಾಜಕಾರಣಿಗಳು, ವಿವಿಧ ರಂಗದ ಗಣ್ಯ ವ್ಯಕ್ತಿಗಳಿಗೆ ನೋಟಿಸ್ ಬಂದರೆ ಅದಕ್ಕೆ ಬೇಕಾದ ವ್ಯವಸ್ಥೆ ಅವರಲ್ಲಿದೆ. ಅವರ ನೆರವಿಗೆ ನ್ಯಾಯವಾದಿಗಳು ಬರಬಹುದು. ಆದರೆ ಭಾರತದಂತಹ ಗ್ರಾಮಾಂತರ ಪ್ರದೇಶಗಳಲ್ಲಿ ಬಡವರು, ಮಧ್ಯಮ ವರ್ಗದ ಜನರ ಸಂಖ್ಯೆಯೇ ಹೆಚ್ಚು. ಲಕ್ಷಾಂತರ ಮಂದಿಗೆ ಈಗಾಗಲೇ ನೋಟಿಸ್ ಬಂದಿದೆ. ಅವರು ಏನು ಮಾಡಬೇಕು.? ಜನಸಾಮಾನ್ಯರ ಪಾಡು ಹೇಳತೀರದು. ಚುನಾವಣಾ ಆಯೋಗ ಎಸ್.ಐ.ಆರ್ ಗುಮ್ಮದ ಮೂಲಕ ತಲೆತಲಾಂತರಗಳಿಂದ ಇಲ್ಲಿಯೇ ವಾಸ ಮಾಡುತ್ತಿರುವ ಜನಸಾಮಾನ್ಯರನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಲಾಗಿದೆ. ಬಾಂಗ್ಲಾ, ಪಾಕ್ ವಲಸಿಗರಿಗೆ ಇದರಿಂದ ಸಂಕಷ್ಟ ವಾಗುತ್ತದೆ ಎಂದು ಭೋಂಗು ಬಿಟ್ಟವರೆಲ್ಲ ಇದೀಗ ಬಿಲ ಸೇರಿಕೊಂಡು ಬಿಟ್ಟಿದ್ದಾರೆ.
