ಸಮುದಾಯದ ನೈಜ ಬ್ಯಾರಿ ಕಾಕಾಗಳಿಗೆ ಹುದ್ದೆ ಒಲಿದು ಬರಲಿ.! ನಮ್ಮ ರಾಜಕೀಯ ಮುಖಂಡರು ಇನ್ನಾದರೂ ಬದಲಾಗುತ್ತಾರಾ..?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕ್ಫ್ ಅಧ್ಯಕ್ಷ ಹುದ್ದೆಗೆ ಭಾರೀ ಡಿಮ್ಯಾಂಡ್ ಕೇಳಿ ಬರುತ್ತಿದ್ದು, ಕಳೆದ ಹಲವಾರು ತಿಂಗಳಿನಿಂದ ಈ ಹುದ್ದೆ ಖಾಲಿ ಬಿದ್ದಿದೆ. ಇದೀಗ ಮುಖ್ಯಮಂತ್ರಿ ಡಿಕೆಶಿ ವಿವಿಧ ನಿಗಮ ಮಂಡಳಿಗಳಿಗೆ ನೇಮಕಾತಿಗೆ ಶ್ರೀಘ್ರದಲ್ಲಿ ಪ್ರಕ್ರಿಯೆ ಆರಂಭಿಸಲಾಗುವುದು ಎಂಬ ಹೇಳಿಕೆ ಹೊರ ಬಿದ್ದ ಬೆನ್ನಲ್ಲೇ ದ.ಕ ಜಿಲ್ಲಾ ವಕ್ಫ್ ಅಧ್ಯಕ್ಷ ಹುದ್ದೆಗೆ ಕಣ್ಣಿಟ್ಟ ಹಲವರು ಇದೀಗ ಲಾಬಿ ಶುರುವಿಟ್ಟುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧ್ಯಕ್ಷ ಗಾದಿಗೆ ಕರಾವಳಿ ಭಾಗದ ಪ್ರಭಾವೀ ಮುಸ್ಲಿಂ ನಾಯಕರೊಬ್ಬರ ಒಲವು ಯಾರು ಪಡೆಯುತ್ತಾರೋ ಅವರಿಗೆ ಫೈನಲ್ ಆಗಲಿದೆ. ಇದೇ ಕಾರಣದಿಂದ ಸಮುದಾಯದ ಕೆಲವೊಂದು ಬ್ಯಾರಿ ಕಾಕಾ ಗಳು ಪ್ರಭಾವಿ ನಾಯಕರ ಮನೆ ಮುಂದೆ, ಕಚೇರಿ ಮುಂದೆ ಕ್ಯೂ ನಿಲ್ಲಲು ಆರಂಭಿಸಿದ್ದಾರೆ. ಅಂಜಲ್ ಮೀನು, ಕಾಣೆ ಮೀನು ಸೇರಿದಂತೆ ಭರ್ಜರಿ ಸಪ್ಲೈ ಮಾಡಿ ಪ್ರಭಾವಿ ನಾಯಕರ ಮನ ಗೆಲ್ಲಲು ಆರಂಭಿಸಿದ್ದಾರಂತೆ. ಆ ಮೂಲಕ ಜಿಲ್ಲಾ ವಕ್ಫ್ ಸಮಿತಿಗೆ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ ಅನ್ನುವ ಸಮಾಚಾರಗಳು ಸಿಗತೊಡಗಿದೆ.
ಮುಸ್ಲಿಂ ಸಮುದಾಯದ ಮಸೀದಿ, ಮದರಸ ಸಂರಕ್ಷಣೆಯ ದೊಡ್ಡ ಜವಾಬ್ದಾರಿ ಹೊಂದಿರುವ ವಕ್ಫ್ ಸಮಿತಿಗೆ ಈವರೆಗೂ ಶ್ರೀಮಂತ ವಲಯದ ಕೆಲವೊಂದು ಬ್ಯಾರಿ ಕಾಕಾಗಳು ಅಧ್ಯಕ್ಷರಾಗಿ ವಿರಾಜಮಾನರಾದರೇ ಹೊರತು ಸಮುದಾಯಕ್ಕೆ ಅವರಿಂದ ಯಾವುದೇ ಲಾಭ ದೊರಕಿಲ್ಲ ಅನ್ನುವುದು ಅಷ್ಟೇ ಕಟುಸತ್ಯ. ವಕ್ಫ್ ಅಧ್ಯಕ್ಷ ಹುದ್ದೆಗೆ ಜಿಲ್ಲೆಯಲ್ಲಿ ಈವರೆಗೂ ಹುದ್ದೆಗೇರಿದವರ ಇತಿಹಾಸ ನೋಡಿದಾಗ ಅಗರ್ಭ ಶ್ರೀಮಂತರೇ ಹೊರತು, ಸಮುದಾಯಕ್ಕೆ ನಯಾ ಪೈಸೆ ಲಾಭವಿಲ್ಲದ ಮಂದಿ ಅನ್ನುವುದು ದಿಟ.
ಈ ಬಾರಿಯೂ ಜಿಲ್ಲಾ ವಕ್ಫ್ ಹುದ್ದೆಗೇರಲು ಶ್ರೀಮಂತ ಕಾಕಾಗಳ ಲಾಬಿ ಭಾರೀ ಜೋರಾಗಿ ನಡೆಯುತ್ತಿದೆ. ಹುದ್ದೆಗೇರಲು ಜಿಲ್ಲೆಯ ಮುಸ್ಲಿಂ ಮಹಾನಾಯಕರ ಹಿಂದೆ ಮುಂದೆ ಸುತ್ತಾಡುತ್ತಿದ್ದಾರೆ. ಪಕ್ಷಕ್ಕಾಗಿ ಬೆವರು ಸುರಿಸುವವರು ಯಾರೋ, ಆಯಕಟ್ಟಿನ ನಿಗಮ ಮಂಡಳಿ ಹುದ್ದೆ ಇನ್ಯಾರಿಗೋ..? ಎಂಬಂತಾಗಿದೆ. ಈ ಬಾರಿಯೂ ಜಿಲ್ಲಾ ವಕ್ಫ್ ಅಧ್ಯಕ್ಷ ಹುದ್ದೆಯೂ ಶ್ರೀಮಂತ ಕಾಕಾ ಗಳ ಪಾಲಾದರೂ ಅಚ್ಚರಿ ಇಲ್ಲ.

ಮಂಗಳೂರಿನಲ್ಲಿ ಕೆಲವೊಂದು ಅಗರ್ಭ ಶ್ರೀಮಂತರ ಸರ್ಕಲ್ ಇದೆ. ಡಬ್ಬಲ್ ಹಾಜಿಯೂ ಇವರ ಬೆನ್ನಿಗಿದೆ. ಧಾರ್ಮಿಕ, ರಾಜಕೀಯ ಎಲ್ಲಾ ರಂಗದಲ್ಲೂ ಇವರದ್ದೇ ಕಾರು ಬಾರು… ಯಾವುದೇ ಸರಕಾರ ಅಧಿಕಾರಕ್ಕೆ ಬರಲಿ ವಕ್ಫ್, ಹಜ್ಜ್, ಅಲ್ಪಸಂಖ್ಯಾತ ಇನ್ನಿತರ ಸರಕಾರ ಅಧೀನದಲ್ಲಿರುವ ನಿಗಮಗಳಲ್ಲಿ ಇವರೇ ಅಧ್ಯಕ್ಷರು, ಮೆಂಬರ್. ಕಾಂಗ್ರೆಸ್ ಬಿಡಿ ಬಿಜೆಪಿ, ಜೆಡಿಎಸ್ ಸರಕಾರ ಬಂದರೂ ಹುದ್ದೆ ಇವರಿಗೇನೇ. ಈ ಶ್ರೀಮಂತ ಕಾಕಾಗಳು ಹಗಲು ಕಾಂಗ್ರೆಸ್ ಆದರೆ ರಾತ್ರಿ ಬಿಜೆಪಿ. ಇವರಿಗೆ ಪಕ್ಷ ಮುಖ್ಯವಲ್ಲ. ಬಿಜೆಪಿ ಸಂಸದರು, ಸಚಿವರುಗಳಿಗೂ ಹುಟ್ಟುಹಬ್ಬದ ಅಭಿನಂದನೆ ಬ್ಯಾನರ್ ಹಾಕುತ್ತಾರೆ. ಕಾಂಗ್ರೆಸ್ ಸರಕಾರ ಬಂದಾಗ ಇಂತಹವರೇ ಅಧಿಕಾರ ಉಣ್ಣುತ್ತಾರೆ. ಇನ್ನು ಧಾರ್ಮಿಕ ಪಂಡಿತರುಗಳು ಕೂಡ ಇವರು ಹೇಳಿದಂತೆ ಕೇಳುತ್ತಾರೆ. ಇಂತಹವರಿಗೆ ಹುದ್ದೆಗಾಗಿ ವಸೂಲಿ ಬಾಜಿ ಕೂಡ ನಡೆಸುತ್ತಾರೆ. ಇವರಿಗೆ ಉಮರಾ ನಾಯಕರೆಂಬ ಬಿರುದು ಕೂಡ ನೀಡಲಾಗುತ್ತದೆ.
ಮಂಗಳೂರಿನ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಇವರು ಪದಾಧಿಕಾರಿಯಾಗಿ ಮಿಂಚುತ್ತಾರೆ. ಕೊಡುಗೈ ದಾನಿ ಎಂಬ ಬಿರುದಾವಲಿಗಳು. ಧಾರ್ಮಿಕ ಸಂಘಟನೆಗಳು ನಡೆಸುವ ಕಾರ್ಯಕ್ರಮಕ್ಕೆ ಕನ್ವೀನರ್, ಗೌರವಾಧ್ಯಕ್ಷ ಪೋಸ್ಟುಗಳು ಕೂಡ ಇವರಿಗೆ ಪರ್ಮನೆಂಟ್. ಐವತ್ತು ಸಾವಿರನೋ, ಲಕ್ಷ ಬಿಸಾಡುತ್ತಾರೆ ಧಾರ್ಮಿಕ ವೇದಿಕೆಗಳಲ್ಲಿ ಸನ್ಮಾನಕ್ಕೂ ಪಾತ್ರರಾಗುತ್ತಾರೆ.
ಇವರ ವಿಚಿತ್ರ ಖಯಾಲಿ ಎಂದರೆ ತಾವೇ ಸಂಘಟನೆ ಹುಟ್ಟುಹಾಕುವುದು, ಅದರಲ್ಲಿ ಇವರೇ ಪದಾಧಿಕಾರಿ, ಸನ್ಮಾನ ಕೂಡ ಇವರಿಗೇನೇ. ಇವರೇ ಅಧ್ಯಕ್ಷ, ಕಾರ್ಯದರ್ಶಿ, ಇವರ ಬಳಗದವರೇ ಸದಸ್ಯರು. ಮಂಗಳೂರಿನಲ್ಲಿ ಇಂತಹ ಹುಚ್ಚುತನದ, ಅಡ್ರೆಸ್ ಇಲ್ಲದ ಸಂಘಟನೆಗಳು ಅನೇಕವಿದೆ. ಸಮಾಜಕ್ಕೆ ಯಾವುದೇ ನಯಾಪೈಸೆಯ ಲಾಭವಿಲ್ಲ. ಇನ್ನೊಂದು ಇಂಟರೆಸ್ಟಿಂಗ್ ಸುದ್ದಿ ಎಂದರೆ ಮಂಗಳೂರಿನ ಒಂದೊಂದು ಜಮಾಅತ್ ಹಂಚಿಕೊಂದು ಮಸೀದಿ ಅಧ್ಯಕ್ಷರು ಕೂಡ ಆಗುತ್ತಾರೆ. ಉಮರಾ, ಕೊಡುಗೈ ದಾನಿ ಬಿರುದು ಬಾವಲಿಗಳ ಜೊತೆ ಸನ್ಮಾನ ಕೂಡ ಖಾಯಂ. ಇವರು ಸಮುದಾಯದ ಕೆಳಹಂತದ ಜನರೊಂದಿಗೆ ಬೆರೆಯುವುದೇ ಇಲ್ಲ. ದೊಡ್ಡ ದೊಡ್ಡ ರಾಜಕಾರಣಿಗಳು, ಧಾರ್ಮಿಕ ಪಂಡಿತರ ಜೊತೆ ಕಾಣಸಿಗುತ್ತಾರೆ ಅಷ್ಟೇ. ರಂಗು ರಂಗಿನ ಕೋಟು, ಸೂಟು ಬೂಟು, ತಲೆಯಲ್ಲೊಂದು ಟೊಪ್ಪಿ.. ಸೊಂಟದಲ್ಲೊಂದು..! ಹಾಕಿಕೋಂಡು ಬಂದರೆ.. ಎಂತೆಂತಹ ನವನವೀನ ಮಾಡೆಲ್ ಗಳು.!
ಇಂತಹ ಕೆಲವೊಂದು ಶ್ರೀಮಂತ ಕಾಕಾಗಳಿಗೆ ಕಾಂಗ್ರೆಸ್, ಬಿಜೆಪಿ ಅನ್ನುವ ಭೇದಭಾವ ಇಲ್ಲ. ತಮಗಾಗದ ನಾಯಕನನ್ನು ಸೋಲಿಸಲು ಬಿಜೆಪಿ ಜೊತೆ ಕೈ ಜೋಡಿಸಿ ಫಂಡಿಂಗ್ ಮಾಡುವುದು ಇದೆ. ನಮ್ಮ ರಾಜಕಾರಣಿಗಳು ನಂಬುವುದು ಇಂತಹವರನ್ನೇ..ಕುರಿ ನಂಬುವುದು ಕಸಾಯಿಗಾರನನ್ನು ಅನ್ನುವಂತೆ.
ಇದೀಗ ಇಂತಹ ಬ್ಯಾರಿ ಶ್ರೀಮಂತ ಕಾಕಾಗಳ ಸರ್ಕಲ್ ಅಲರ್ಟ್ ಆಗಿದೆ. ಜಿಲ್ಲಾ ಅಧ್ಯಕ್ಷ ಹುದ್ದೆಗೆ ಟವೆಲ್ ಹಾಕಿಕೊಂಡು ಕೂತಿದ್ದಾರೆ. ಇವರು ಸಮುದಾಯದ ಸೇವೆ ಮಾಡಲು ಅಲ್ಲ. ತಮಗೊಂದು ಐಡೆಂಟಿಟಿ ಅನ್ನುವ ಕಾರಣಕ್ಕೆ ಫೀಲ್ಡಿಗೆ ಇಳಿದಿದ್ದಾರೆ. ಬ್ಯಾರಿ ಸಮುದಾಯಕ್ಕೆ ಹುದ್ದೆ ಕೊಟ್ಟಿದ್ದೇವೆ ಎಂದು ಡಂಗುರ ಸಾರುವ ರಾಜಕಾರಣಿಗಳೇ ಇಂತಹ ವೇಷಧಾರಿ ಕಾಕಾ ಗಳಿಗೆ ಹುದ್ದೆ ಕೊಡುವ ಮುನ್ನ ಚಿಂತಿಸಿ.. ಈಗಲೂ ಸಮುದಾಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ, ಒಂದು ಕೈಯಿಂದ ಕೊಟ್ಟದ್ದು, ಇನ್ನೊಂದು ಕೈಗೆ ಗೊತ್ತಾಗದ ರೀತಿಯಲ್ಲಿ ಬದುಕುತ್ತಿರುವ, ಸಮುದಾಯದ ಬಗ್ಗೆ ನೈಜ ಕಾಳಜಿ ಹೊಂದಿರುವ, ಪ್ರಚಾರ ಬಯಸದ ನೂರಾರು ಬ್ಯಾರಿ ನಿಯತ್ತಿನ ಕಾಕ ಮಾರ್ ನಮ್ಮ ಮುಂದೆ ಇದ್ದಾರೆ. ಅವರು ವಸೂಲಿ ಬಾಜಿ ಮಾಡುತ್ತಿಲ್ಲ. ಮಹಾನಾಯಕರನ್ನು ಮೆಚ್ಚಿಸಲು ಅಂಜಲ್, ಮಾಂಜಿ, ಕಾಣೆಯ ಹಿಂದೆ ಹೋಗಿಲ್ಲ. ಯಾವುದೇ ಧಾರ್ಮಿಕ ವಿದ್ವಾಂಸರಿಂದ ಫೋನ್ ಕಾಲ್ ಮಾಡಿಸಿಲ್ಲ. ಸಮುದಾಯದ ಮೇಲೆ ನಮ್ಮ ರಾಜಕಾರಣಿಗಳಿಗೆ ನೈಜ ಕಾಳಜಿ ಇದ್ದರೆ ಇಂತಹವರಿಗೆ ವಕ್ಫ್ ಅಧ್ಯಕ್ಷ ಹುದ್ದೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ.
