ಬಜರಂಗದಳ ಕಾರ್ಯಕರ್ತ ಸುನೀಲ್ ಎಂಬಾತನ ಮೇಲೆ ಸಮೀರ್ ಎಂಬಾತ ಮಚ್ಚು ಬೀಸಿ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಸಾಗರ ಪೊಲೀಸ್ ಠಾಣೆ ಎದುರು ಡಿಡೀರ್ ಪ್ರತಿಭಟನೆಗೆ ಮುಂದಾಗಿದ್ದು, ನಾಳೆ ಸಾಗರ ಬಂದ್ ಗೆ ಕರೆ ಕೊಟ್ಟಿದ್ದಾರೆ.

ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಸಾಗರ ನಗರ ಭಜರಂಗದಳದ ಸಹ ಸಂಚಾಲಕ ಆಗಿರುವ ಸುನಿಲ್ ಜಿಯೋ ಫೈಬರ್ ಕಚೇರಿಯ ಹತ್ತಿರ ಬೈಕ್ನಲ್ಲಿ ಬಂದಿದ್ದಾರೆ. ಈ ವೇಳೆ ಸುನೀಲ್ ಮೇಲೆ ಸಮೀರ್ ಎನ್ನುವ ಯುವಕ ಸಾಗರ ನಗರದ ಬಿ.ಹೆಚ್. ರಸ್ತೆಯ ಬಸ್ ನಿಲ್ದಾಣ ಸಮೀಪ ಮಚ್ಚು ಬೀಸಿದ್ದಾನೆ. ಕೂದಲೆಳೆ ಅಂತರದಲ್ಲಿ ಮಚ್ಚಿನ ದಾಳಿಯಿಂದ ಸುನೀಲ್ ಪಾರಾಗಿದ್ದಾರೆ ಮಚ್ಚು ಬೀಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಬಳಿಕ ಸಮೀರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಸುನಿಲ್ ಹಾಗೂ ಸಮೀರ್ ಸಾಗರದ ಉಪ್ಪಾರ ಕೇರಿ ನಿವಾಸಿಗಳು. ಹಿಜಾಬ್ ವಿವಾದದಲ್ಲಿ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಹೀಗಾಗಿ ಸಮೀರ್ ಹಗೆತನ ಸಾಧಿಸಿ ನಿನ್ನೆ ಸುನಿಲ್ಗೆ ಧಮ್ಕಿ ಹಾಕಿದ್ದ. ಮತ್ತೆ ಇಂದು ಹೊಂಚು ಹಾಕಿ ಹಲ್ಲೆ ಮಾಡಿ ಮಚ್ಚಿನಿಂದ ಹೊಡೆಯಲು ಮುಂದಾಗಿದ್ದ ಎನ್ನಲಾಗಿದೆ.
ಶಿವಮೊಗ್ಗ ಹರ್ಷ ಹತ್ಯೆಯ ನಂತರ ದೊಡ್ಡ ಸುದ್ಧಿಯಾಗಿದ್ದ ಶಿವಮೊಗ್ಗ ಇದೀಗ ಚುನಾವಣೆ ಹೊಸ್ತಿಲಲ್ಲಿರುವಾಗ ಈ ಪ್ರಕರಣ ಯಾವ ಹಂತದ ತಿರುವು ಪಡೆಯುತ್ತದೆ ಎನ್ನುವ ಆತಂಕ ಮೂಡಿದೆ.
