ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ. ಇಂದು 12 ನೂತನ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರ್ಗಳ ಪಟ್ಟಿಯಲ್ಲಿ ಅಬ್ದುಲ್ ನಜೀರ್ ಹೆಸರೂ ಇದೆ. ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯವರಾದ ಅಬ್ದುಲ್ ನಜೀರ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಳೆದ ತಿಂಗಳು ಜನವರಿ 4ರಂದು ನಿವೃತ್ತರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದಲ್ಲಿ ಹುಟ್ಟಿದ ಎಸ್ ಅಬ್ದುಲ್ ನಾಜಿರ್, ಮಹಾವೀರ ಕಾಲೇಜಿನಲ್ಲಿ ಬಿಕಾಂ ಮತ್ತು ಎಸ್ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. ನಂತರ ಕರ್ನಾಟಕ ಹೈಕೋರ್ಟ್ ವಕೀಲರಾಗಿ ನೇಮಕವಾದರು. 2003ರಲ್ಲಿ ಅದೇ ಹೈಕೋರ್ಟ್ನಲ್ಲಿ ಹೆಚ್ಚುವರಿ ನ್ಯಾಯಾಧೀಶರು ಮತ್ತು ನಂತರ ಖಾಯಂ ನ್ಯಾಯಾಧೀಶರಾಗಿ ನೇಮಕವಾದರು. 2017ರ ಫೆಬ್ರುವರಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆಯೇ 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗದೇ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಮೂರನೇ ಜಡ್ಜ್ ಅವರಾಗಿದ್ದಾರೆ.
2017ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕವಾದ ಬಳಿಕ ಅಬ್ದುಲ್ ನಜೀರ್ ಕೆಲ ಮಹತ್ವದ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ಭಾಗಿಯಾಗಿದ್ದಾರೆ. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿ ಅಬ್ದುಲ್ ನಜೀರ್ ಇದ್ದರು. ಆ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಪೀಠವು ತ್ರಿವಳಿ ತಲಾಖ್ ಅನ್ನು ಅಸಿಂಧುಗೊಳಿಸಿತ್ತು.
ಇನ್ನು, 2019ರ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಪೀಠದಲ್ಲೂ ಅಬ್ದುಲ್ ನಜೀರ್ ಇದ್ದರು. ರಾಮಮಂದಿರದ ಪರ ತೀರ್ಪು ನೀಡಿದ ನ್ಯಾಯಪೀಠ, ವಿವಾದಿತ ಬಾಬ್ರಿ ಮಸೀದಿ ಜಾಗವನ್ನು ಹಿಂದೂಗಳಿಗೆ ರಾಮಮಂದಿರ ನಿರ್ಮಾಣಕ್ಕೆ ಕೊಟ್ಟು ಆದೇಶಿಸಿತು. ಹಾಗೆಯೇ, ಅಬ್ದುಲ್ ನಜೀರ್ ಅವರು ಕೇಂದ್ರದ ನೋಟ್ ಬ್ಯಾನ್ ಕ್ರಮದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠದಲ್ಲೂ ಇದ್ದರು.
