ಸಾಕಷ್ಟು ಕುತೂಹಲಕ್ಕೆ ಕಾರಣವಾದ ಮಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್..?

ಕರಾವಳಿ

ಹಠವಾದಿ,ಛಲವಾದಿ ಬಾವಾ ಪರ ಡಿಕೆಶಿ ಬ್ಯಾಟಿಂಗ್ ಬೀಸುತ್ತಿದ್ದರಾ.!

ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ 7 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗಬಹುದು ಅನ್ನುವ ಉತ್ತರ ದೊರೆತಿರಬಹುದು. ಪಕ್ಷ ಅಧಿಕೃತ ಘೋಷಣೆ ಒಂದೇ ಬಾಕಿ. ಆದರೆ ಮಂಗಳೂರು ಉತ್ತರದ ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗಲಿದ್ದಾರೆ ಅನ್ನುವ ಬಗ್ಗೆ ಕಾರ್ಯಕರ್ತರು, ನಾಯಕರಲ್ಲಿ ಕುತೂಹಲ ಮೂಡಿಸಿದೆ. ಜೊತೆಗೆ ವಿರೋಧ ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಜಾರಿದ್ದು, ಅಭ್ಯರ್ಥಿ ಆಯ್ಕೆ ನಂತರ ತಮ್ಮ ಸ್ಟ್ರಾಟೆಜಿಯಲ್ಲಿ ಬದಲಾವಣೆ ತರುವ ತಯಾರಿ ನಡೆಸಿದೆ.

ಹೈಕಮಾಂಡ್ ಮಟ್ಟದಲ್ಲಿ ಪ್ರಬಲರಾಗಿರುವ ಇನಾಯತ್ ಅಲಿ ಅವರಿಗೆ ಟಿಕೆಟ್ ಫಿಕ್ಸ್ ಅನ್ನುವ ಮಾತು ಹರಿದಾಡಿತ್ತು. ಇನ್ನೊಂದೆಡೆ ಮೊಹಿದ್ದೀನ್ ಬಾವಾ ರು ಅಭ್ಯರ್ಥಿ ಆಗಲಿದ್ದಾರೆ ಅನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದರ ನಡುವೆ ಇಬ್ಬರನ್ನು ಬಿಟ್ಟು ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮಾತುಗಳು ಇವೆ. ಇವೆಲ್ಲವೂ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ಸುದ್ಧಿಗಳು. ಅಧಿಕೃತವಲ್ಲ.

ಮಂಗಳೂರು ಉತ್ತರದ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ರವರು ದೆಹಲಿ, ಬೆಂಗಳೂರು ಪ್ರವಾಸದಲ್ಲಿದ್ದು ಎಐಸಿಸಿ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ನ ಪ್ರಮುಖ ನಾಯಕರ ಮುಂದೆ ತಾವು ಕೂಡ ಪ್ರಬಲ ಆಕಾಂಕ್ಷಿ ಅನ್ನುವ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಇನಾಯತ್ ಅಲಿ ಕ್ಷೇತ್ರಾದ್ಯಂತ ಸುತ್ತಾಡುತ್ತಿದ್ದು ಟಿಕೆಟ್ ಯಾರಿಗೆ ಫೈನಲ್ ಆಗಬಹುದು ಅನ್ನುವ ಬಗ್ಗೆ ಕುತೂಹಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಜೊತೆ ಮೊಹಿದ್ದೀನ್ ಬಾವಾ ಹಲವು ಬಾರಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ಅಭ್ಯರ್ಥಿ ಆಯ್ಕೆಯಲ್ಲಿ ದೊಡ್ಡ ಬದಲಾವಣೆ ತರಬಹುದು ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಮೊಹಿದ್ದೀನ್ ಬಾವಾ ಪರ ಡಿಕೆಶಿ ಬ್ಯಾಟಿಂಗ್ ಬೀಸುತ್ತಿದ್ದರಾ ಅನ್ನುವ ಸುದ್ಧಿಗಳೂ ಚರ್ಚೆಯಲ್ಲಿವೆ. ಕೆಲವೊಂದಿಷ್ಟು ರಾಜಕೀಯ ಆಗುಹೋಗುಗಳನ್ನು ಕರಗತ ಮಾಡಿಕೊಂಡಿರುವ ಮೊಹಿದ್ದೀನ್ ಬಾವಾ ಛಲವಾದಿ, ಹಠವಾದಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಾರೆ ಮಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ ಭಾರೀ ಕುತೂಹಲಕ್ಕೆ ಕಾರಣವಾಗಿದೆ.