ಅಂದು ಓಟಿಗಾಗಿ ದರ್ಗಾ ಸುತ್ತಿ ಟೊಪ್ಪಿ ಹಾಕಿದರು; ಇಂದು ಓಟಿಗಾಗಿ ದತ್ತಮಾಲೆ ಧರಿಸಲು ಮುಂದಾದರು.!
ಅಬ್ಬಬ್ಬಾ..ಇವರ ವೆರೈಟಿ ವೆರೈಟಿ ಮಾತು ಕೇಳಿ ಒಂದೊಮ್ಮೆ ಮುಸ್ಲಿಂ ಸಮುದಾಯ ನಮ್ಮ ರಕ್ಷಣೆಗೆ ದೇವಲೋಕದಿಂದ ಇಳಿದು ಬಂದವರು ಎಂದು ನಂಬಿದ್ದರು. ಅಷ್ಟರಮಟ್ಟಿಗೆ ಮುಸ್ಲಿಂ ಸಮುದಾಯವನ್ನು ನಂಬಿಸಿ ಬೆನ್ನಿಗೆ ಚೂರಿ ಹಾಕಿ ತಮ್ಮ ರಾಜಕೀಯ ಅಧಿಕಾರ, ದುಡ್ಡು ಕಾಸುಗಳನ್ನು ಸಂಪಾದಿಸಿದರು. ಕೇವಲ ಮುಸಲ್ಮಾನರನ್ನು ನಂಬಿಸಿ, ಇದೀಗ ಮೋಸ ಮಾಡಿದ ಪರಿ ಇದು. ರಾಜಕೀಯ ವ್ಯಭಿಚಾರ ಅಂದರೆ ಏನು ಎಂಬುದನ್ನು ಅಪ್ಪ-ಮಕ್ಕಳಿಂದ ನೋಡಿ ಕಲಿಯಬೇಕು.
‘ಮುಂದಿನ ಜನ್ಮ ಏನಾದರೂ ಇದ್ದರೆ ನಾನು ಮುಸಲ್ಮಾನನಾಗಿ ಹುಟ್ಟುವೆ’ ಎಂದು ದೊಡ್ಡ ಗೌಡ್ರು ಮಸೀದಿ, ದರ್ಗಾಗಳಿಗೆ ತೆರಳಿ ಟೊಪ್ಪಿ ಹಾಕುತ್ತಾ ಮುಸ್ಲಿಂ ಸಮುದಾಯಕ್ಕೆ ಟೋಪಿ ಹಾಕಿದ ಪರಿ ಇದು. ಅವರು ಇರುವಾಗಲೇ ಬಿಜೆಪಿಯೊಂದಿಗೆ ಹಾಸಿಗೆ ಹಂಚಿ ಜಾತ್ಯತೀತ ತತ್ವಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಇನ್ನು ಮರಿ ಗೌಡರ ಅಟ್ಟಹಾಸ ಮಿತಿ ಮೀರಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮುಖ್ಯಮಂತ್ರಿ ಎಂದು ಟಾಂ ಟಾಂ ಊದಿದ ಅದೇ ಮರಿ ಗೌಡರು ಪಕ್ಷದ ಮುಸ್ಲಿಂ ರಾಜ್ಯಾಧ್ಯಕ್ಷರನ್ನು ನೆಮ್ಮದಿಯಿಂದ ಇಟ್ಟುಕೊಳ್ಳಲು ಹಾಗದೆ ನಡು ನೀರಿನಲ್ಲಿ ಕೈ ಬಿಟ್ಟರು. ಇದೀಗ ಮುಸಲ್ಮಾನರನ್ನು ನಂಬಿ ಕೂತಿಲ್ಲ, ಹಿಂದೂ ಧರ್ಮದ ರಕ್ಷಣೆಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ದತ್ತಮಾಲೆ ಹಾಕಲು ಸಿದ್ಧ ಎನ್ನುವ ಮೂಲಕ ಕಠೋರ ಹಿಂದೂ ಆಗಲು ಹೊರಟಿದ್ದಾರೆ. ಅದೇ ಮರಿಗೌಡರಾ ಇವರು ಅನ್ನುವುದು ಇವರ ಬಗೆ ಬಗೆಯ ನಾಟಕ ನೋಡುವಾಗ ಕನ್ ಪ್ಯೂಶ್ ಆಗುತ್ತಿದೆ. ರಾಜಕಾರಣ ಅನ್ನುವುದು ಚದುರಂಗದಾಟ. ಬಣ್ಣ ಬಣ್ಣದ ಲೋಕ. ಇವರನ್ನು ನಂಬಿದರೆ ಗತಿ ಗೋವಿಂದ.
ಆದರೆ ರಾಜ್ಯದ ಜೆಡಿಎಸ್ ಕೇವಲ ಕುಟುಂಬ, ಅಪ್ಪ-ಮಕ್ಕಳಿಗಷ್ಟೇ ಸೇರಿದೆ. ಇತರ ನಾಯಕರನ್ನು ಬೆಳೆಯಲು ಬಿಡದ ಕಾರಣ ಸಿದ್ದರಾಮಯ್ಯ ರಂತಹ ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಆಗಬೇಕಾಯಿತು. ಅಪ್ಪ-ಮಕ್ಕಳ ರಾಜಕೀಯ ವ್ಯಭಿಚಾರದಿಂದ ಕೆಲವು ಒಳ್ಳೆಯ ನಾಯಕರು ಜೆಡಿಎಸ್ ತೊರೆದು ಬೇರೆ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿ ವಿರಾಜಮಾನರಾಗಿದ್ದಾರೆ. ಸ್ಪಷ್ಟ ಗುರಿ, ಸಿದ್ಧಾಂತ ಇಲ್ಲದ ರಾಜ್ಯದ ಜೆಡಿಎಸ್ ರಾಷ್ಟ್ರೀಯ ಪಕ್ಷಗಳ ಎದುರು ಎದ್ದು ನಿಲ್ಲಲಾಗದೆ ವಿಲವಿಲನೆ ಒದ್ದಾಡುತ್ತಿದೆ. ಪಕ್ಕದ ತಮಿಳುನಾಡು, ಆಂಧ್ರ, ತೆಲಂಗಾಣ ಕಡೆಯನ್ನೊಮ್ಮೆ ನೋಡಿ. ಪ್ರಾದೇಶಿಕ ಪಕ್ಷಗಳು ಆಳ್ವಿಕೆ ನಡೆಸುತ್ತಿದೆ. ರಾಷ್ಟ್ರೀಯ ಪಕ್ಷಕ್ಕೆ ಅಲ್ಲಿ ಎರಡಂಕಿ ಸ್ಥಾನ ದಾಟಲು ಒದ್ದಾಡುತ್ತಿದೆ. ಕರ್ನಾಟಕದಲ್ಲೂ ಜೆಡಿಎಸ್ ಗೆ ಅಂತಹ ಅವಕಾಶವಿತ್ತು. ಆದರೆ ಅಧಿಕಾರ ಮೋಹ, ರಾಜಕೀಯ ವ್ಯಭಿಚಾರಕ್ಕೆ ಇಳಿದ ಪರಿಣಾಮ ಅಡ್ರೆಸ್ ಇಲ್ಲದೆ ಆಗುತ್ತಿದೆ.

ಜಾತ್ಯತೀತ ಅನ್ನುತ್ತಾ ಓಟು ಪಡೆದ ಜೆಡಿಎಸ್ ಬಿಜೆಪಿಯೊಂದಿಗೆ ಆಲಿಂಗಿಸಿಕೊಂಡ ನಂತರ ಕುಮಾರ ಸ್ವಾಮಿ ಕಠೋರ ಹಿಂದೂ ಆಗಿ, ಆಡಳಿತ ಪಕ್ಷಗಳನ್ನು ವಿಪರೀತವಾಗಿ ದೂರುವ ಕಠೋರರಾಗಿ ಕಾಣುತ್ತಿದ್ದಾರೆ. ವಿಪರ್ಯಾಸವೆಂದರೆ ಈಗಿನ ಕುಮಾರಸ್ವಾಮಿ ನಡೆಯನ್ನು ಜನರು ಸೀರಿಯಸ್ ಆಗಿ ತೊಡಗಿಕೊಳ್ಳದೆ ಜೋಕರ್ ಆಗಿ ನೋಡುತ್ತಿದ್ದಾರೆ. ಬಿಜೆಪಿಯೊಂದಿಗೆ ಸಖ್ಯ ಬೆಳೆಸಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸದೆ ವಚನಭ್ರಷ್ಟರಾಗಿ ಯಡಿಯೂರಪ್ಪ ರವರಿಗೆ ಮುಖ್ಯಮಂತ್ರಿ ಕೊಡದೆ ವಿಲನ್ ಆಗಿದ್ದರು. ಹೋರಾಟವೇ ರಾಜಕೀಯ ಅಂದುಕೊಂಡಿದ್ದ ಯಡಿಯೂರಪ್ಪ ವಚನಭ್ರಷ್ಟ ವನ್ನೇ ಮೆಟ್ಟಿಲಾಗಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಅರಳಿಸಿದ್ದರು. ಬಿಜೆಪಿ ದಕ್ಷಿಣ ಭಾರತದಲ್ಲಿ ಗೇಟ್ ತೆರೆದು ಕೊಟ್ಟಿದ್ದೆ ಅಂದು ಕುಮಾರಸ್ವಾಮಿ. ಆದರೆ ಯಡಿಯೂರಪ್ಪ ಬಿಜೆಪಿ ಆಗಿದ್ದರೂ ಈವರೆಗೂ ಮುಸ್ಲಿಂ ಸಮುದಾಯದ ಮೇಲೆ ಅಪಸ್ವರ ಎತ್ತಿರಲಿಲ್ಲ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಇಲಾಖೆಗೆ ಭರ್ಜರಿ ಅನುದಾನವನ್ನೇ ನೀಡಿದ್ದರು. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮದರಸಾಗಳಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಅನ್ನುವ ಗಂಭೀರ ಆರೋಪ ಮಾಡಿದ್ದರು.
ಈ ಬಿಜೆಪಿಯವರನ್ನಾದರೂ ನಂಬಬಹುದು. ಅವರು ಬೆನ್ನಿಗೆ ಚೂರಿ ಹಾಕುವವರಲ್ಲ. ಈ ಮರಿ ಗೌಡ್ರು ಮುಸ್ಲಿಂ ಹೆಸರೇಳಿ ಓಟು ಪಡೆದು ಇದೀಗ ಬಿಜೆಪಿಯೊಂದಿಗೆ ಲವ್ವಿ ಡವ್ವಿ ಶುರುವಿಟ್ಟು ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಬಣ್ಣ ಬದಲಾಯಿಸುವ ಊಸರವಳ್ಳಿಗಳನ್ನು ಯಾವತ್ತೂ ನಂಬಬಾರದು. ಅವತ್ತು ಓಟಿಗಾಗಿ ದರ್ಗಾ ಸುತ್ತಿ ಟೊಪ್ಪಿ ಹಾಕಿದರು; ಈಗಲೂ ಓಟಿಗಾಗಿ ದತ್ತಮಾಲೆ ಧರಿಸಲು ಮುಂದಾಗಿದ್ದಾರೆ.
ಮರಿ ಗೌಡರಿಗೆ ವಿರೋಧ ಪಕ್ಷದ ನಾಯಕನ ಅಧಿಕೃತ ಪೇಟೆಂಟ್ ಸಿಗದಿದ್ದರೂ ವಿರೋಧಿಸುವುದರಲ್ಲೇ ಈಗ ಮರಿ ಗೌಡ್ರ ಹಾಬಿಯಾಗಿದೆ. ತಂದೆ-ಮಗ ಮೊಬೈಲಿನಲ್ಲಿ ಮಾತನಾಡಿದರೆ ಈ ಮರಿಗೌಡರಿಗೆ ದೊಡ್ಡ ಸುದ್ದಿ. ತಂದೆಯ ಬಳಿ ಮಗ ಮಾತನಾಡದೆ ಇನ್ಯಾರೂ ಮಾತನಾಡುವುದು. ಸಿದ್ದರಾಮಯ್ಯ-ಯತೀಂದ್ರ ಪೋನ್ ಸಂಭಾಷಣೆಯನ್ನೇ ದೊಡ್ಡ ಇಶ್ಯೂ ಮಾಡಿದ್ದರು ಮರಿ ಗೌಡ್ರು. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಠಕ್ಕರ್ ಕೊಟ್ಟು ಪಕ್ಷಕ್ಕೆ, ಕುಟುಂಬಕ್ಕೆ ಡ್ಯಾಮೇಜ್ ಮಾಡಿರುವ ಡಿಕೆಶಿ ಬಗ್ಗೆ ರೋಷಗೊಳ್ಳುವ ಮರಿ ಗೌಡ್ರು ಸಣ್ಣ ಸಣ್ಣ ವಿಷಯಕ್ಕೂ ಮೂಗು ಹಾಕಿ ಕೋಪ ತೀರಿಸಿಕೊಳ್ಳುತ್ತಿದ್ದಾರೆ. ಮರಿ ಗೌಡರ ಮಗ ನಿಖಿಲ್ ಎದುರು ಸಾಬರೊಬ್ಬರನ್ನು ನಿಲ್ಲಿಸಿ ಗೆಲ್ಲಿಸಿ ಕೊಟ್ಟ ಡಿಕೆಶಿ ಕಂಡಾಗಲೇ ಕೆಂಡಾಮಂಡಲರಾಗುವ ಮರಿ ಗೌಡ್ರು ಕಾಂಗ್ರೆಸ್ ವಿರೋಧಿಸುವ ನೆಪದಲ್ಲಿ ಹಿಂದುತ್ವವಾದಿಯಾಗುತ್ತಿದ್ದಾರೆ. ‘ಹೇಳುವುದು ವೇದ ಇಕ್ಕುವುದು ಗಾಳ’ ಅನ್ನುವ ಗಾದೆ ಮಾತಿನಂತೆ ತಮ್ಮ ಮನೆಗೆ ಕರೆಂಟ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದರು. ದಂಡ ಕಟ್ಟಿ ಇದೀಗ ಸುಬಗರಂತೆ ಆಡುತ್ತಿದ್ದಾರೆ.! ಕಳ್ಳ ಕಳ್ಳನೇ.. ದಂಡ ಕಟ್ಟಿದರೂ ಕದ್ದಿದ್ದು ಸತ್ಯ ತಾನೇ.!

ಇನ್ನಾದರೂ ಮುಸ್ಲಿಂ ಸಮುದಾಯ ರಾಜಕೀಯ ನಾಯಕರ ಬಗ್ಗೆ ಪೂರ್ವಾಪರ ತಿಳಿಯುವುದು ಉತ್ತಮ. ಬೆಣ್ಣೆಯ ಮಾತುಗಳನ್ನು ಆಡುವವರನ್ನು ಒಮ್ಮೆಲೇ ನಂಬಿ ಬಿಡಬಾರದು. ಟೊಪ್ಪಿ ಹಾಕಿದ ಮಾತ್ರಕ್ಕೆ ನಮ್ಮವನಾಗಲ್ಲ. ಆತ ಟೋಪಿ ಹಾಕಲೂ ಬಹುದು. ಮರಿಗೌಡರ ಇತ್ತೀಚಿನ ನಡವಳಿಕೆ ಇದಕ್ಕೆಲ್ಲ ಉತ್ತಮ ಉದಾಹರಣೆ.
