ಸೆಂಟರಿನಲ್ಲಿ ಸಿ.ಎ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವೆ: ಸಿ.ಎ ಅಬ್ದುಲ್ ಖಾದರ್ ತಮೀಮ್

ಕರಾವಳಿ

✍️. ಹನೀಫ್ ಪುತ್ತೂರು

ದೃಡಚಿತ್ತ, ನಿರಂತರ ಪ್ರಯತ್ನ ಹಾಗೂ ಸಂಕಲ್ಪವಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎನ್ನುವುದಕ್ಕೆ ಇತ್ತೀಚೆಗೆ ನಮ್ಮ ಸಮುದಾಯದ ಯುವಕ-ಯುವತಿಯರ ಸಾಧನೆಗಳನ್ನು ನೋಡಿದಾಗ ಅನಿಸುತ್ತದೆ. ಸಮುದಾಯದಲ್ಲಿ ಶೈಕ್ಷಣಿಕ ಶಿಸ್ತು, ಪೂರಕ ವಾತಾವರಣ, ಪ್ರೋತ್ಸಾಹದ ಕೊರತೆ ಇದ್ದರೂ ಅಲ್ಲಲ್ಲಿ ಕೆಲವರು ಸ್ವ ಪ್ರಯತ್ನ ಮತ್ತು ಛಲದಿಂದ ಸಾಧನೆ ಮಾಡುವುದನ್ನು ಕಾಣುತ್ತೇವೆ. ಅವರ ಸಾಧನೆಗಳನ್ನು ಅಭಿಮಾನದಿಂದ ಕೊಂಡಾಡುವ, ಸನ್ಮಾನಿಸುವ ಮತ್ತು ಪ್ರಚಾರ ಮಾಡುವ ನಾವು ಇದರಿಂದ ಇನ್ನಷ್ಟೂ ಯುವಕರು ಸ್ಪೂರ್ತಿ ಪಡೆಯಲಿ ಎಂದು ಸಮರ್ಥಿಸುತ್ತೇವೆ.

ಕಳೆದ ವರ್ಷ ನೀಟ್ ನಲ್ಲಿ ಬ್ಯಾರಿ ಸಮುದಾಯದ 13 ವಿದ್ಯಾರ್ಥಿಗಳು ಸಾಧನೆ ಮಾಡಿದ್ದರು. ಅದರಲ್ಲಿ 10 ವಿದ್ಯಾರ್ಥಿಗಳು ನಮ್ಮ ಕಮ್ಯುನಿಟಿ ಸೆಂಟರಿನವರಾಗಿದ್ದಾರೆ. ಕಳೆದ ಎರಡು ವರ್ಷದಿಂದ ನಾವು ಸಿ.ಎ ಪರೀಕ್ಷೆಗೆ 18 ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುತ್ತಿದ್ದೇವೆ. ಅವರಿಗೆ ಮೆಂಟರಿಂಗ್ ಮಾಡಲು, ಮಾರ್ಗದರ್ಶನ ಮಾಡಲು ನಮಗೆ ಸಿ.ಎ ಗಳು ಬೇಕು. ನಮ್ಮಲ್ಲಿ ಪುತ್ತೂರಿನ ಸಿ.ಎ ನೌಫಲ್ ಹೊರತು ಪಡಿಸಿ ಕಾಳಜಿಯ ಇನ್ನೊಬ್ಬರು ಇರಲಿಲ್ಲ. ಈಗ ಸೆಂಟರಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ತರಭೇತಿ ನೀಡಿ, ಗುರಿ ಸಾಧಿಸುವಲ್ಲಿ ನೆರವಾಗಲು ಉತ್ಸಾಹಿ ಯುವ ತರುಣ ಅಬ್ದುಲ್ ಖಾದರ್ ತಮೀಮ್ ಮುಂದೆ ಬಂದಿದ್ದಾರೆ.

ಇತ್ತೀಚೆಗೆ ಕಠಿಣವಾದ ಸಿ.ಎ ಪರೀಕ್ಷೆ ಪಾಸಾಗಿ ಸಾಧನೆ ಮಾಡಿದ ತಮೀಮ್ ರವರು ಸೆಂಟರಿಗೆ ಭೇಟಿ ಕೊಟ್ಟರು. ತಮೀಮ್ ರವರು ಸೆಂಟರಿನ ಮೂಲಕ ಸಿ.ಎ ಮಾಡಲು ಬಯಸುವ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಸಂದರ್ಭ ಮಾರ್ಗದರ್ಶನ ನೀಡುವ ಬಗ್ಗೆ ತಿಳಿಸಿದರು. ಸೆಂಟರಿನ ವಿದ್ಯಾರ್ಥಿಗಳ ಮಾಹಿತಿ ಪಡೆದರು. ಇವರ ಸಹೋದರಿ ಸೆಂಟರಿನ ಮೂಲಕ ಬೀದರ್ ಶಾಹೀನ್ ನಲ್ಲಿ ನೀಟ್ ಕೊಚಿಂಗ್ ಮಾಡುತ್ತಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ನೀಟ್ ಅಂಕ ಪಡೆದ ಸಾಧನೆ ಮಾಡುವುದಾಗಿ, ಸೆಂಟರಿಗೆ ಕೀರ್ತಿ ತರುವುದಾಗಿ ಹೇಳಿರುತ್ತಾರೆ. ಅವರು ಪರಿಶ್ರಮಿಸುತ್ತಲೂ ಇದ್ದಾರೆ. ಈ ರೀತಿ ನಾವು ಒಂದು ವೇದಿಕೆ ನಿರ್ಮಿಸಿ ಕೇಂದ್ರೀಕೃತ ಪದ್ದತಿಯಲ್ಲಿ ಶೈಕ್ಷಣಿಕ ಪ್ರಗತಿಗೆ ದುಡಿಯಲು ಬಯಸುತ್ತೇವೆ. ಆ ಬಯಕೆ ತಮೀಮ್ ರಂತಹ ಯುವಕರ ಕಾಳಜಿ ಹಾಗೂ ಭಾಗವಹಿಸುವಿಕೆಯಿಂದ ಹೆಚ್ಚು ಪರಿಣಾಮಕಾರಿಯಾಗಿ ಮುನ್ನಡೆಯುತ್ತದೆ.