ಕರಾವಳಿಯ 4 ಕ್ಷೇತ್ರ ಕಾಂಗ್ರೆಸ್ ಪಾಲಾಗುವ ಭೀತಿ.! ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ

ಕರಾವಳಿ

ಬಿಜೆಪಿಯ ಭದ್ರಕೋಟೆ ಎಂದು ಗುರುತಿಸಿಕೊಂಡ ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ಆತಂಕ

ಬಿಜೆಪಿ ವಶದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 3, ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 1 ಕ್ಷೇತ್ರ ಕಾಂಗ್ರೆಸ್ ಪಾಲಾಗುವ ಸಾಧ್ಯತೆಗಳಿವೆ ಎನ್ನುವ ಪಕ್ಷದ ಆಂತರಿಕ ಸಮೀಕ್ಷೆ ವಿವರ ಕೇಸರಿ ಪಕ್ಷಕ್ಕೆ ಆತಂಕವನ್ನು ಉಂಟುಮಾಡಿದೆ. ಈ ಸಮೀಕ್ಷೆ ವರದಿಯಿಂದ ಕಮಲ ಪಾಳಯ ಕೊಂಚ ಆತಂಕದಲ್ಲಿದ್ದು, ಇದೇ ಹಿನ್ನೆಲೆಯಲ್ಲಿ ಕೇಸರಿ ಪಾಳೆಯಕ್ಕೆ ರಣೋತ್ಸವ ತುಂಬಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಮಹತ್ವದ ಸಭೆ ಮಂಗಳೂರಿನಲ್ಲಿ ನಿಗದಿಯಾಗಿದ್ದು. ಷಾ ತಂತ್ರಗಾರಿಕೆಯಿಂದ ಉಂಟಾಗಬಹುದಾದ ಸಂಚಲನದ ಬಗ್ಗೆ ಕಾಂಗ್ರೆಸ್ ವಲಯದಲ್ಲೂ ಕುತೂಹಲವಿದೆ.

ರಾಜ್ಯದ ಶತಾಯಗತಾಯ ಮತ್ತೆ ಅಧಿಕಾರದ ಗದ್ದುಗೆ ಏರುವುದು ಬಿಜೆಪಿಯ ಗುರಿ. ಆದರೆ ಪಕ್ಷದ ವತಿಯಿಂದ ಇತ್ತೀಚೆಗೆ ನಡೆದ ಆಂತರಿಕ ಸಮೀಕ್ಷೆಗಳ ಪ್ರಕಾರ ಬಿಜೆಪಿ ಗೆಲ್ಲುವ ಕ್ಷೇತ್ರಗಳ ಸಂಖ್ಯೆ 90 ರ ಆಸುಪಾಸಿನಲ್ಲಿದೆ. ಬಿಜೆಪಿಯ ಶಕ್ತಿ ಕೇಂದ್ರ ಎಂದೇ ಬಿಂಬಿತವಾದ ಕರಾವಳಿಯಲ್ಲೂ ಕೆಲವು ಸ್ಥಾನ ಕಳಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ಆಂತರಿಕ ಸರ್ವೆಯಲ್ಲಿ ಬಹಿರಂಗವಾಗಿದೆ.

ಬಿಜೆಪಿಯಲ್ಲಿ ಆತಂಕ:
ಬಿಜೆಪಿಯ ಭದ್ರಕೋಟೆ ಎಂದು ಗುರುತಿಸಿಕೊಂಡ ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳಲ್ಲೇ ಪಕ್ಷ ಆತಂಕ ಎದುರಿಸುತ್ತಿದೆ. ಸುಳ್ಯದಲ್ಲಿ ಸತತ 6 ಬಾರಿ ಗೆದ್ದಿರುವ ಎಸ್ ಅಂಗಾರ ಬದಲು ಹೊಸ ಅಭ್ಯರ್ಥಿ ಕಣಕ್ಕಿಳಿಸುವ ವದಂತಿ ಇದೆ. ಹೊಸ ಪ್ರಯೋಗ ನಡೆಸಿದರೆ ಕ್ಷೇತ್ರ ಕೈ ತಪ್ಪುವ ಸಾಧ್ಯತೆ ಇದೆ ಅನ್ನುವ ಆತಂಕ ಇದೆ. ಪುತ್ತೂರು ಕ್ಷೇತ್ರದಲ್ಲೂ ಪಕ್ಷ ಎಚ್ಚರಿಕೆ ಹೆಜ್ಜೆ ಇರಿಸಬೇಕಾದ ಸ್ಥಿತಿಯಲ್ಲಿದೆ. ಅಲ್ಪಸಂಖ್ಯಾತರ ಮತ ಹೆಚ್ಚಿರುವ ಮಂಗಳೂರು ನಗರ ಉತ್ತರ, ಬಂಟ್ವಾಳ ಹಾಗೂ ಉಡುಪಿ ಜಿಲ್ಲೆಯ ಬೈಂದೂರು, ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಹೋರಾಟ ನೀಡಲಿದೆ. ಮಂಗಳೂರು ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿಗೆ ಗೆಲುವು ಅಸಾಧ್ಯ ಎನ್ನುವ ಸ್ಥಿತಿ ಇದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

4 ಕ್ಷೇತ್ರ ಸಲೀಸು
2018 ರ ಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಪಾರಮ್ಯ ಮೆರೆದಿತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಬೇಕಿದ್ದರೆ ಕರಾವಳಿಯಲ್ಲಿ ಗರಿಷ್ಠ ಪ್ರಮಾಣದ ಕ್ಷೇತ್ರಗಳನ್ನು ಮತ್ತೆ ವಶಪಡಿಸಿಕೊಳ್ಳಲೇಬೇಕು ಎನ್ನುವುದು ವರಿಷ್ಠರ ನಿಲುವು. ಆದರೆ ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆ ಪ್ರಕಾರ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ 4 ಕ್ಷೇತ್ರಗಳಲ್ಲಿ ಸಲೀಸಾಗಿ ಗೆಲುವು ಸಾಧಿಸಬಹುದು. ದ.ಕ ಜಿಲ್ಲೆಯ 3 ಹಾಗೂ ಉಡುಪಿಯ 1 ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಹೋರಾಟವಿದ್ದು, ಸೋಲುವ ಸಾಧ್ಯತೆಯು ಇದೆ ಎಂದು ಸಮೀಕ್ಷೆ ತಿಳಿಸಿದೆ.